ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಕಲ್ಲುಕೊಂಬರಿ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವಿಶೇಷ ಅನುದಾನ 25 ಲಕ್ಷ ರು. ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆಗಳು ಉತ್ತಮವಾಗಿರಬೇಂಬ ಉದ್ದೇಶದಿಂದ ಹಳ್ಳಿಗಳ ರಸ್ತೆ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಎಲ್ ಅಂಡ್ ಟಿ ಸಂಸ್ಥೆಯಿಂದ ನಡೆಯುತ್ತಿರುವ ಕುಡಿಯುವ ನೀರಿನ ಯೋಜನೆ ವರ್ಷದೊಳಗೆ ಪೂರ್ಣಗೊಳ್ಳಲಿದೆ ಎಂದರು.ಕಳೆದ 2017ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೆ.ಆರ್.ಪೇಟೆ, ನಾಗಮಂಗಲ ಹಾಗೂ ಚನ್ನರಾಪಟ್ಟಣ ತಾಲೂಕುಗಳ ಕೆರೆಗಳನ್ನು ತುಂಬಿಸಲು 213ಕೋಟಿ ರು. ವೆಚ್ಚದ ಏತನೀರಾವರಿ ಯೋಜನೆಯನ್ನು ಮಂಜೂರು ಮಾಡಿಸಲಾಗಿತ್ತು. ತಾಲೂಕಿನ ಗೂಡೆಹೊಸಹಳ್ಳಿಯಿಂದ ಕೆ.ಆರ್.ಪೇಟೆ ತಾಲೂಕಿನ ಸಂತೆಬಾಚಹಳ್ಳಿ ವರೆಗೆ ಒಂದಷ್ಟು ಕೆಲಸ ಮಾಡಿರುವುದನ್ನು ಬಿಟ್ಟರೆ 5 ವರ್ಷ ಕಳೆದರೂ ಕೂಡ ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಆಗಿಲ್ಲ ಎಂದರು.
ಏತ ನೀರಾವರಿ ಯೋಜನೆ ಪೂರ್ಣಗೊಂಡಲ್ಲಿ ತಾಲೂಕಿನ ಕಸಬಾ ಮತ್ತು ಬಿಂಡಿಗನವಿಲೆ ಹೋಬಳಿಯ ಎಲ್ಲಾ ಕೆರೆಗಳು ಹಾಗೂ ಬೆಳ್ಳೂರು ಹೋಬಳಿಯ ಹಲವು ಕೆರೆಗಳಿಗೆ ನೀರು ತುಂಬಿಸಬಹುದಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 5 ಗ್ಯಾರಂಟಿ ಯೋಜನೆಗಳ ಜೊತೆಗೆ ಹಳ್ಳಿಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗುತ್ತಿದೆ ಎಂದರು.