ಹಗರಿಬೊಮ್ಮನಹಳ್ಳಿ: ತಾಲೂಕಿನ ಬನ್ನಿಗೋಳ ಗ್ರಾಮದಲ್ಲಿ ಪ್ರತಿ ವರ್ಷ ದವನದ ಹುಣ್ಣಿಮೆಯ (ಏ. 12ರಂದು) ದಿನದಂದು ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ಜರುಗುತ್ತದೆ.
ಊರಿನ ದೈವಸ್ಥರು ಎಲ್ಲ ಸಮುದಾಯದವರು ಪಕ್ಷಾತೀತವಾಗಿ ಜಾತ್ರೆ ಸಂಭ್ರಮದಲ್ಲಿ ತೊಡಗಿರುತ್ತಾರೆ. ಮಹಾರಥ ಐದು ದಿನದ ಮುಂಚೆಯೇ ಹೊರಗಡೆ ತಂದು ಅದನ್ನು ತಯಾರು ಮಾಡುವ (ಕಟ್ಟುವ) ಸಂಪ್ರದಾಯ ಇದೆ. ಬನ್ನಿಗೋಳ ಹೊರಗೈ ಆಂಜನೇಯ ತಮ್ಮ ಬೇಡಿಕೆಗಳನ್ನು ಈಡೇರಿಸುತ್ತಾನೆ ಎನ್ನುವ ಬಲವಾದ ನಂಬಿಕೆ ಭಕ್ತರಲ್ಲಿ ಇದೆ. ಈ ಜಾತ್ರೆಯ ಮೊದಲ ದಿನ ಉಚ್ಚಯ್ಯ ಎನ್ನುವ ದೇವರನ್ನು ಪೂಜಿಸಿ ಮೆರವಣಿಗೆ ಮಾಡುವ ಮೂಲಕ ಆಚರಣೆ ಮಾಡಲಾಗುತ್ತದೆ. ಎರಡನೆಯ ದಿನ ಆಂಜನೇಯ ಸ್ವಾಮಿಯ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗುತ್ತದೆ.
ಈ ರಥೋತ್ಸವಕ್ಕೂ ಮುಂಚೆ ಆಂಜನೇಯ ಸ್ವಾಮಿಯ ಪಟಾಕಿಯನ್ನು ಎಲ್ಲರ ಸಮ್ಮುಖದಲ್ಲಿ ಹರಾಜು ಕೂಗಲಾಗುತ್ತದೆ. ಗ್ರಾಮದ ವಾಲ್ಮೀಕಿ ಸಮುದಾಯದವರು ಮೂರು ದಿನಗಳ ಕಾಲ ಉಪವಾಸವಿದ್ದು, ಉತ್ಸವ ಮೂರ್ತಿ, ಮಹಾರಥೋತ್ಸವ, ಬ್ಯಾಟಿಗಿಡ ಉತ್ಸವ, ಕರಿಬೇಟಿ ಉತ್ಸವವನ್ನು ಅತ್ಯಂತ ಶಾಸ್ತ್ರೋಕ್ತವಾಗಿ ನೆರವೇರಿಸುತ್ತಾರೆ. ಎರಡನೆಯ ದಿನ ಬ್ಯಾಟಿಗಿಡದ ನಂತರ ರಾತ್ರಿ ೧೨:೩೦ಕ್ಕೆ ಅಗ್ನಿ ಹಾಯುವ ಕಾರ್ಯಕ್ರಮ ಆಂಜನೇಯನ ಪೂಜಾರಿ ಪೂಜಾರ ಉಮೇಶಪ್ಪ ಎಂಬುವವರು ಅಗ್ನಿಯಲ್ಲಿ ನಡೆಯುವ ಮೂಲಕ ನೆರವೇರಿಸುತ್ತಾರೆ. ಇದೇ ಸಂದರ್ಭದಲ್ಲಿ ಪೂಜಾರಿ ಹೇಳಿಕೆ ನುಡಿಯುತ್ತಾರೆ. ಈ ಹೇಳಿಕೆಯನ್ನು ಸುತ್ತಮುತ್ತಲಿನ ಗ್ರಾಮದವರು ಇಡೀ ವರ್ಷ ಆಚರಣೆ ಮಾಡುತ್ತಾರೆ. ಮತ್ತೊಂದು ವಿಶೇಷತೆ ಏನೆಂದರೆ ಮಕ್ಕಳಿಲ್ಲದವರು ಮಕ್ಕಳ ಭಾಗ್ಯ ಕರುಣಿಸೆಂದು ಬೇಡಿಕೊಂಡಾಗ, ಅವರಿಗೆ ಉಡಿ ತುಂಬುವುದು ಜತೆಗೆ ಹಾಲನ್ನು ಅವರಿಗೆ ಕುಡಿಸುತ್ತಾರೆ. ಈ ಎರಡು ಕಾರ್ಯಗಳ ನಂತರ ಒಂದು ವರ್ಷದಲ್ಲಿ ಮಕ್ಕಳ ಫಲ ದೊರೆಯುತ್ತದೆ ಎಂಬ ಬಲವಾದ ನಂಬಿಕೆ ಈ ಗ್ರಾಮಸ್ಥರದ್ದಾಗಿದೆ. ಆನಂತರ ನೀರುಗೊಂಡ ಎನ್ನುವ ಕಾರ್ಯಕ್ರಮ ಆಚರಣೆ ಮಾಡುತ್ತಾರೆ. ಇದನ್ನು ಗಡಾದ ಪಾಂಡಪ್ಪ ಎನ್ನುವ ವ್ಯಕ್ತಿ ನೀರಿನಲ್ಲಿ ಹಾರುವುದರ ಮೂಲಕ ಮೇಲೆ ಕಟ್ಟಿರುವ ತೆಂಗಿನ ಕಾಯಿ ಹಿಡಿದೆನೆಂದು ಎಲ್ಲರಿಗೂ ತೋರಿಸುವುದರ ಮೂಲಕ ಜಯಭೇರಿ ಬಾರಿಸುತ್ತಾರೆ.ಬನ್ನಿಗೋಳ ಗ್ರಾಮದ ಆಂಜನೇಯ ಸ್ವಾಮಿ ಇತಿಹಾಸ:
ಬನ್ನಿಗೋಳ ಹೊರಗೈ ಆಂಜನೇಯ ಸ್ವಾಮಿ ಒಂದು ಅದ್ಭುತ ಶಕ್ತಿ. ಎಲ್ಲ ಭಕ್ತರ ಇಷ್ಠಾರ್ಥಗಳನ್ನು ಸಿದ್ಧಿಸುತ್ತಾನೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಸ್ಥಾಪನೆಯಾದ ಬನ್ನಿಗೋಳ ಹೊರಗೈ ಆಂಜನೇಯ ಭಕ್ತರ ಭಾಗ್ಯವಿಧಾತ. ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿ ಗ್ರಾಮದಲ್ಲಿ ಸಾಮರಸ್ಯ ನೆಲೆಸಿದ್ದಾನೆ ಎಂದು ಡಾ. ಅಂಜಿನಪ್ಪ ಗಡಾದ್ ಬನ್ನಿಗೋಳ ತಿಳಿಸಿದ್ದಾರೆ.
ಸರ್ವ ಜನಾಂಗದ ಶಾಂತಿಯ ತೋಟ ಎಂಬ ಮಾತಿನಂತೆ ಎಲ್ಲ ಜನ ಸಮುದಾಯದವರು ಒಟ್ಟಿಗೆ ಸೇರಿ ಯಾವುದೇ ಪಕ್ಷಪಾತ ಮಾಡದೆ ವಿಜೃಂಭಣೆಯಿಂದ ಬನ್ನಿಗೋಳ ಗ್ರಾಮದ ಹೊರಗೈ ಆಂಜನೇಯ ಸ್ವಾಮಿ ಜಾತ್ರೆಯನ್ನು ಅತ್ಯಂತ ಸಡಗರದಿಂದ ಆಚರಿಸುತ್ತೇವೆ ಎಂದು ಹ್ಯಾಟಿ ಆನಂದರೆಡ್ಡಿ ಹೇಳಿದರು.