ತಾಯಿ, ಮಾವ ನನಗೆ ರಾಜಕೀಯ ಗುರುಗಳು

KannadaprabhaNewsNetwork | Published : Apr 12, 2024 1:03 AM

ಸಾರಾಂಶ

ಬೆಳಗಾವಿ: ನನ್ನ ತಾಯಿ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಮಾವ ಚನ್ನರಾಜ ಹಟ್ಟಿಹೊಳಿ ಅವರೇ ನನಗೆ ರಾಜಕೀಯ ಗುರುಗಳು ಎಂದು ಬೆಳಗಾವಿ ಕಾಂಗ್ರೆಸ್‌ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಹೇಳಿದರು. ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬೆನಕನಹಳ್ಳಿಯಲ್ಲಿ ಗುರುವಾರ ಉಚಗಾಂವ ಭಾಗದ ಕಾರ್ಯಕರ್ತರ ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ನಾನು ಅವರ ಮಾರ್ಗದರ್ಶನದಲ್ಲೇ ಸಮಾಜ ಸೇವೆ ಮತ್ತು ರಾಜಕೀಯ ಮಾಡುತ್ತಿರುವೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ನನ್ನ ತಾಯಿ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಮಾವ ಚನ್ನರಾಜ ಹಟ್ಟಿಹೊಳಿ ಅವರೇ ನನಗೆ ರಾಜಕೀಯ ಗುರುಗಳು ಎಂದು ಬೆಳಗಾವಿ ಕಾಂಗ್ರೆಸ್‌ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಹೇಳಿದರು.

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬೆನಕನಹಳ್ಳಿಯಲ್ಲಿ ಗುರುವಾರ ಉಚಗಾಂವ ಭಾಗದ ಕಾರ್ಯಕರ್ತರ ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ನಾನು ಅವರ ಮಾರ್ಗದರ್ಶನದಲ್ಲೇ ಸಮಾಜ ಸೇವೆ ಮತ್ತು ರಾಜಕೀಯ ಮಾಡುತ್ತಿರುವೆ. ಜನರ ಸೇವೆ ಮಾಡುವುದನ್ನು ಅವರು ನನಗೆ ಕಲಿಸಿಕೊಟ್ಟಿದ್ದಾರೆ. ನೀವೆಲ್ಲ ಕಳೆದ 10 ವರ್ಷದಲ್ಲಿ ನನಗೆ ಹಾಗೂ ನಮ್ಮ ಕುಟುಂಬಕ್ಕೆ ಅಪಾರ ಪ್ರೀತಿ, ವಿಶ್ವಾಸ ತೋರಿಸಿದ್ದೀರಿ. ನಾನು ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದರೆ ಇಡೀ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸುತ್ತೇನೆ. ಕ್ಷೇತ್ರದ ಯುವಕರಿಗೆ ಉದ್ಯೋಗ ಕಲ್ಪಿಸುವ ಯೋಜನೆಗಳನ್ನು ತರುತ್ತೇನೆ. ಹೆಚ್ಚು ಹೆಚ್ಚು ಉದ್ಯಮಗಳನ್ನು ಆರಂಭಿಸಲು ಸ್ಥಳೀಯರಿಗೆ ಪ್ರೋತ್ಸಾಹ ಹಾಗೂ ಸಹಾಯ ನೀಡುತ್ತೇನೆ ಎಂದು ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ನಾವು ಯಾರನ್ನೋ ನೋಡಿ ಮತ ಕೊಡಿ ಎಂದು ಕೇಳುವುದಿಲ್ಲ. ನಮ್ಮ ಇಲ್ಲಿಯವರೆಗಿನ ಸಾಧನೆ, ಬದ್ಧತೆ ಮತ್ತು ಕಾಂಗ್ರೆಸ್ ಪಕ್ಷದ ಯೋಜನೆ ನೋಡಿ ಮತ ಕೊಡಿ ಎಂದು ಕೋರಿದರು.

ನಾವು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳನ್ನು ನೋಡಿ ನೀವೆಲ್ಲ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಬೆಂಬಲ ನೀಡಿದ್ದೀರಿ. ಅದೇ ರೀತಿ ಲೋಕಸಭಾ ಚುನಾವಣೆಯಲ್ಲಿ ಸಹ ಬೆಂಬಲಿಸಿ. ಮೃಣಾಲ್‌ ಹೆಬ್ಬಾಳಕರ್ ನಿಮಗೆ ಹೊಸಬನಲ್ಲ. ನಿಮ್ಮ ಕಣ್ಣ ಮುಂದೆಯೇ ಬೆಳೆದ ಹುಡುಗ. ದಿನದ 24 ಗಂಟೆಯೂ ನಿಮ್ಮ ಕೈಗೆ ಸಿಗುವ ಹುಡುಗ. ನಿಮ್ಮೆಲ್ಲರ ಸೇವೆ ಮಾಡುವ, ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಅಭಿವೃದ್ಧಿ ಮಾಡುವ ಕನಸು ಹೊತ್ತು ಕಣಕ್ಕೆ ಇಳಿದಿದ್ದಾನೆ. ಲಕ್ಷ್ಮೀ ಹೆಬ್ಬಾಳಕರ್ ಕುಟುಂಬದ ಜೊತೆಗೆ ನಿಮಗೆ ಕಳೆದ 10 ವರ್ಷಗಳಿಂದಲೂ ನಿಕಟವಾದ ಸಂಬಂಧವಿದೆ. ಹಾಗಾಗಿ ಒಂದೇ ಕುಟುಂಬದಂತಿರುವ ನಾವೆಲ್ಲ ಸೇರಿ ಮುಂದಿನ ದಿನಗಳಲ್ಲೂ ಕೆಲಸ ಮಾಡೋಣ ಎಂದರು.

ಕಾಂಗ್ರೆಸ್ ಪಕ್ಷದ ಇತಿಹಾಸ ದೊಡ್ಡದಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷ. ಬ್ರಿಟಿಷ್‌ರನ್ನು ಭಾರತದಿಂದ ಓಡಿಸಿದ ನಂತರ ಶೂನ್ಯದಿಂದ ರಾಷ್ಟ್ರವನ್ನು ಕಟ್ಟಿದ ಪಕ್ಷ ಕಾಂಗ್ರೆಸ್. ಹಿಂದಿನಿಂದಲೂ ನುಡಿದಂತೆ ನಡೆದಿದೆ. ಅಭಿವೃದ್ಧಿಯಲ್ಲಿ ಬದ್ಧತೆ ತೋರಿಸಿದೆ ಎಂದು ತಿಳಿಸಿದರು.

ಸಭೆಯಲ್ಲಿ ಉಚಗಾಂವ ಬ್ಲಾಕ್ ಕಾಂಗ್ರೆಸ್ ಅನೇಕ ಮುಖಂಡರು, ಕಾರ್ಯಕರ್ತರು ಮಾತನಾಡಿದರು.

ಕೋಟ್‌...ಬೆಳಗಾವಿ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ನನ್ನದೇ ಕನಸು ಹೊಂದಿದ್ದೇನೆ. ಕ್ಷೇತ್ರವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸಲಾಗುವುದು. ಕೃಷಿ, ಶಿಕ್ಷಣ, ಆರೋಗ್ಯ, ಔದ್ಯೋಗಿಕ ಯೋಜನೆಗಳನ್ನು ತರಲಾಗುವುದು. ಮೂರು ರಾಜ್ಯಗಳ ಸಂಗಮದಂತಿರುವ ಬೆಳಗಾವಿಯನ್ನು ಎಲ್ಲ ರೀತಿಯಲ್ಲೂ ಬೆಳೆಸಲು ಅವಕಾಶವಿದೆ. ಆ ದಿಸೆಯಲ್ಲಿ ಪ್ರಯತ್ನ ಮಾಡುತ್ತೇನೆ.

-ಮೃಣಾಲ ಹೆಬ್ಬಾಳಕರ್, ಬೆಳಗಾವಿ ಕಾಂಗ್ರೆಸ್‌ ಅಭ್ಯರ್ಥಿ.

----

ಕಳೆದ ಚುನಾವಣೆಗೂ ಮುನ್ನ ಘೋಷಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ತಕ್ಷಣ ಜಾರಿಗೊಳಿಸುವ ಮೂಲಕ ಜನರ ಜೀವನದಲ್ಲಿ ನೆಮ್ಮದಿ ಮೂಡಿಸಿದೆ. ಇದರಿಂದಾಗಿ ಪಕ್ಷದ ಮೇಲಿನ ವಿಶ್ವಾಸ ಇನ್ನಷ್ಟು ಹೆಚ್ಚುವಂತಾಗಿದೆ. ಮುಂದಿನ ದಿನಗಳಲ್ಲಿ ಸಹ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲೂ ಹಲವಾರು ಯೋಜನೆಗಳು ಬರಲಿವೆ. ನಿಮ್ಮೆಲ್ಲರ ಸಹಕಾರ ಸದಾ ಇರಲಿದೆ ಎನ್ನುವ ವಿಶ್ವಾಸವಿದೆ.

- ಚನ್ನರಾಜ ಹಟ್ಟಿಹೊಳಿ, ವಿಧಾನ ಪರಿಷತ್ ಸದಸ್ಯರು.

Share this article