ಕನ್ನಡಪ್ರಭ ವಾರ್ತೆ ಸಕಲೇಶಪುರ
ತಾಲೂಕಿನ ಯಸಳೂರು ಹೋಬಳಿಯ ದೊಡ್ಡಕಲ್ಲೂರು ಗ್ರಾಮದಲ್ಲಿ ನಿರ್ಮಿಸಿರುವ ಶ್ರೀ ಗುರು ನಿರ್ವಾಣ ಸ್ವಾಮಿ ಸಮುದಾಯ ಭವನವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಶಾಸಕನಾಗಿ ಆಯ್ಕೆಯಾದ ಬಳಿಕ ವಿವಿಧ ಯೋಜನೆಗಳಡಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆಸುತ್ತಿದ್ದೇನೆ. ಶಾಸಕರಿಗೆ ಲಭ್ಯವಾಗುವ ಅನುದಾನ ಸೀಮಿತವಾಗಿದ್ದರೂ, ಸರ್ಕಾರದ ಮಟ್ಟದಲ್ಲಿ ಅಗತ್ಯ ಅನುದಾನಕ್ಕಾಗಿ ಹೋರಾಟ ನಡೆಸಿ ಕ್ಷೇತ್ರದಲ್ಲಿ ಯಾವ ಕಾಮಗಾರಿ ತುರ್ತಾಗಿ ಆಗಬೇಕು, ಯಾವುದನ್ನು ಮೊದಲು ಪೂರ್ಣಗೊಳಿಸಬೇಕು ಎಂಬುದನ್ನು ಆದ್ಯತೆ ಮೇರೆಗೆ ನಿರ್ಧರಿಸಿ ಕೆಲಸ ಮಾಡಲಾಗುತ್ತಿದೆ ಎಂದರು. ಕೇವಲ ಆಡಂಬರಕ್ಕಾಗಿ ಕಾಮಗಾರಿಗಳನ್ನು ಆರಂಭಿಸುವುದರಿಂದ ಜನರಿಗೂ ಪ್ರಯೋಜನವಿಲ್ಲ, ಸರ್ಕಾರದ ಹಣವೂ ಸದುಪಯೋಗವಾಗುವುದಿಲ್ಲ. ಈಗಾಗಲೇ ಆರಂಭಗೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ನೀಡಬೇಕು ಎಂಬುದು ನನ್ನ ನಿಲುವು. ಅದೇ ಉದ್ದೇಶದಿಂದ ಈ ಸಮುದಾಯ ಭವನವನ್ನು ಪೂರ್ಣಗೊಳಿಸಿ ಇಂದು ಗ್ರಾಮಸ್ಥರಿಗೆ ಸಮರ್ಪಿಸಲಾಗಿದೆ ಎಂದು ಹೇಳಿದರು. ಸಮುದಾಯ ಭವನ ಪೂರ್ಣಗೊಳ್ಳುವಲ್ಲಿ ಗ್ರಾಮದ ರವಿ ಮತ್ತು ಅವರ ತಂಡ ಸೇರಿದಂತೆ ಗ್ರಾಮಸ್ಥರು ತೋರಿದ ಇಚ್ಛಾಶಕ್ತಿ ಶ್ಲಾಘನೀಯ. ಗೋಮಾಳವನ್ನು ಉಳಿಸಿಕೊಳ್ಳುವುದರಿಂದ ಹಿಡಿದು ಸಮುದಾಯ ಭವನದ ಕಾಮಗಾರಿ ಪೂರ್ಣಗೊಳ್ಳುವವರೆಗೂ ಗ್ರಾಮಸ್ಥರು ನಿರಂತರವಾಗಿ ಗಮನ ಸೆಳೆದಿದ್ದಾರೆ. ಎಲ್ಲರ ಪರಿಶ್ರಮದಿಂದ ಇಂದು ಸುಸಜ್ಜಿತ ಸಮುದಾಯ ಭವನ ರೂಪುಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಭವನದಿಂದ ಗ್ರಾಮದ ಸಂಘ-ಸಂಸ್ಥೆಗಳ ಸಭೆ, ಧಾರ್ಮಿಕ, ಸಾಮಾಜಿಕ ಹಾಗೂ ಸಣ್ಣಪುಟ್ಟ ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಕೂಲವಾಗಲಿದೆ. ಜನರು ಒಟ್ಟಾಗಿ ಸೇರಲು ಒಂದು ಉತ್ತಮ ವೇದಿಕೆ ದೊರೆತಿರುವುದು ಸಂತಸದ ಸಂಗತಿ ಎಂದರು. ದೊಡ್ಡಕಲ್ಲೂರು ಗ್ರಾಮದ ರಸ್ತೆ ಅಭಿವೃದ್ಧಿಗೂ ಈ ಹಿಂದೆ ಬೇಡಿಕೆ ಹಾಗೂ ಹೋರಾಟ ನಡೆದಿತ್ತು. ಅದಕ್ಕೂ ಸ್ಪಂದಿಸಿ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಯಸಳೂರು ಹೋಬಳಿ ಹಾಗೂ ಈ ಭಾಗಕ್ಕೆ ಅಗತ್ಯವಿರುವ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಕ್ಷೇತ್ರದ ಜನರು ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ ಹಾಗೂ ಬೆಂಬಲವನ್ನು ಉಳಿಸಿಕೊಳ್ಳುವುದು ನನ್ನ ಜವಾಬ್ದಾರಿ. ಸದಾ ಜನರೊಂದಿಗೆ ಇದ್ದು, ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದರು.ಈ ಸಂದರ್ಭದಲ್ಲಿ ಗ್ರಾಮದ ಅಧ್ಯಕ್ಷ ಕಿರಣ್ , ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸವಿನ್ ಗೌಡ, ಮುಖಂಡರಾದ ಪವಿತ್ರ, ರವಿ ತೇಜ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.