ಪಕ್ಷ, ವ್ಯಕ್ತಿ ನಿಷ್ಠೆಗೆ ನನ್ನ ಬೆಂಬಲ, ಅವಕಾಶ: ಎಂಎಲ್‌ಸಿ ಮಧು ಜಿ.ಮಾದೇಗೌಡ

KannadaprabhaNewsNetwork | Published : Mar 13, 2024 2:06 AM

ಸಾರಾಂಶ

ನನ್ನ ಜೊತೆಗೆ ಇದ್ದು ಬೆನ್ನಿಗೆ ಚೂರಿಹಾಕುವ ಕೆಲಸ ಮಾಡಬೇಡಿ. ಅಂತಹ ವ್ಯಕ್ತಿತ್ವ ಉಳ್ಳವರು ನನ್ನ ಜೊತೆ ಇರುವುದು ಬೇಡ. ನಮ್ಮ ತಂದೆ ದಿ.ಜಿ.ಮಾದೇಗೌಡ ಅವರೊಟ್ಟಿಗೂ ಕೆಲಸ ಮಾಡಿದ್ದೀರಿ. ಅಷ್ಟೇ ಅಲ್ಲದೇ, ನನ್ನನ್ನು ಸಹ ಶಾಸಕನನ್ನಾಗಿ ಮಾಡಲು ಶ್ರಮಿಸಿದ್ದೀರಿ. ಆದರೆ, ಕೆಲವರು ನನ್ನ ಜೊತೆಗೆ ಇದ್ದು ಬೇರೆಡೆ ಬೆಂಬಲ ತೋರ್ಪಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಭಾರತೀನಗರ

ಪಕ್ಷ ಮತ್ತು ವ್ಯಕ್ತಿ ನಿಷ್ಠೆಗೆ ನನ್ನ ಬೆಂಬಲವಿದ್ದು, ಪಕ್ಷಕ್ಕಾಗಿ ದುಡಿದವರನ್ನು ಗುರುತಿಸಿ ಅವಕಾಶ ಕಲ್ಪಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ತಿಳಿಸಿದರು.

ಮಾದರಹಳ್ಳಿಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ನನ್ನ ಜೊತೆಗೆ ಇದ್ದು ಬೆನ್ನಿಗೆ ಚೂರಿಹಾಕುವ ಕೆಲಸ ಮಾಡಬೇಡಿ. ಅಂತಹ ವ್ಯಕ್ತಿತ್ವ ಉಳ್ಳವರು ನನ್ನ ಜೊತೆ ಇರುವುದು ಬೇಡ ಎಂದು ನೇರವಾಗಿ ಹೇಳಿದರು.

ನಮ್ಮ ತಂದೆ ದಿ.ಜಿ.ಮಾದೇಗೌಡ ಅವರೊಟ್ಟಿಗೂ ಕೆಲಸ ಮಾಡಿದ್ದೀರಿ. ಅಷ್ಟೇ ಅಲ್ಲದೇ, ನನ್ನನ್ನು ಸಹ ಶಾಸಕನನ್ನಾಗಿ ಮಾಡಲು ಶ್ರಮಿಸಿದ್ದೀರಿ. ಆದರೆ, ಕೆಲವರು ನನ್ನ ಜೊತೆಗೆ ಇದ್ದು ಬೇರೆಡೆ ಬೆಂಬಲ ತೋರ್ಪಡಿಸುವ ಕೆಲಸಕ್ಕೆ ಮುಂದಾಗಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ, ತಹಸೀಲ್ದಾರ್ ಮತ್ತು ಅಧಿಕಾರಿಗಳಿಂದ ಆಗಬೇಕಾಗಿರುವ ಕೆಲಸಗಳನ್ನು ಕ್ಷೇತ್ರದ ಜನರಿಗೆ ನಾನು ಮಾಡಿಕೊಡುತ್ತಿದ್ದೇನೆ. ನಿಮಗೆ ಯಾವುದಾದರೂ ಅಗತ್ಯವಿರುವ ಕೆಲಸಗಳಿದ್ದರೆ ನನ್ನನ್ನು ಸಂಪರ್ಕಿಸಿ, ಸಮಸ್ಯೆ ಬಗೆಹರಿಸಿಕೊಡುವುದಾಗಿ ತಿಳಿಸಿದರು.

ಗ್ರಾಮದ ಈಶ್ವರಸ್ವಾಮಿ ಕಲ್ಯಾಣ ಮಂಟಪದ ಅಭಿವೃದ್ಧಿಗಾಗಿ 5 ಲಕ್ಷ ಅನುದಾನ ನೀಡಿದ್ದೇನೆ. ಇದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಿ. ಜಿಲ್ಲೆಯ ಜನಪ್ರತಿನಿಧಿಗಳಿಂದ ಅನುದಾನ ಪಡೆದು ಕಲ್ಯಾಣ ಮಂಟಪ ಅಭಿವೃದ್ಧಿ ಪಡಿಸಿಕೊಳ್ಳಿ ಎಂದರು.

ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಚನ್ನಶೇಖರ್ ಮಾತನಾಡಿ, ಜಿ.ಮಾದೇಗೌಡರ ಕಾಲದಿಂದಲೂ ನಾವು ಪ್ರಾಮಾಣಿಕವಾಗಿ ನಿಮ್ಮ ಕುಟುಂಬದೊಂದಿಗೆ ಇದ್ದೇವೆ. ಮುಂದೆಯೂ ಇರುತ್ತೇವೆ ಎಂದರು.

ಮುಖಂಡ ಎಂ.ಕೆ.ನಾಗರಾಜು ಮಾತನಾಡಿದರು. ತಾಪಂ ಮಾಜಿ ಸದಸ್ಯೆ ಪುಟ್ಟಮ್ಮಕೆಂಪೇಗೌಡ, ಪಿಎಸಿಎಸ್ ಮಾಜಿ ಅಧ್ಯಕ್ಷ ಸಿದ್ದೇಗೌಡ, ನಿರ್ದೇಶಕರಾದ ಬೆಟ್ಟಮ್ಮ, ರಾಮಕೃಷ್ಣ, ಸಿದ್ದರಾಜು, ಗ್ರಾಪಂ ಮಾಜಿ ಸದಸ್ಯ ಚೌಡೇಶ್, ಎಂಪಿಸಿಎಸ್ ನಿರ್ದೇಶಕ ಜಯರಾಮು, ಎಂ.ಎಲ್.ಪುಟ್ಟಸ್ವಾಮಿ, ಚೌಡೇಗೌಡ, ಯೋಗೇಶ್, ಎಂ.ಕೆ.ಕಾಳಯ್ಯ, ಚೌಡೇಗೌಡ, ಪಂಚಾಯತ್ ರಾಜ್ ನಿವೃತ್ತ ಸಹಕಾಯರ ನಿರ್ದೇಶಕ ಎಂ.ತಮ್ಮಯ್ಯ, ಜಿ.ನಾಗರಾಜು ಸೇರಿದಂತೆ ಹಲವರಿದ್ದರು.

Share this article