ಮಂಗಳೂರಿಗೆ ನೀರಿನ ಕೊರತೆ ಆಗದು: ಮೇಯರ್‌

KannadaprabhaNewsNetwork |  
Published : Mar 13, 2024, 02:06 AM IST
೧೧ | Kannada Prabha

ಸಾರಾಂಶ

ನೀರು ಪೂರೈಕೆ ಆಗದ ಎತ್ತರದ ಪ್ರದೇಶ ಹಾಗೂ ಎಂಡ್‌ಪಾಯಿಂಟ್‌ಗಳಿಗೆ ಪಾಲಿಕೆಯ ಒಟ್ಟು ಆರು ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಮೇಯರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ಅಣೆಕಟ್ಟಿನಲ್ಲಿ ಈಗಲೂ ಭರ್ತಿ 6 ಮೀ. ನೀರಿನ ಸಂಗ್ರಹವಿದೆ. ಈ ಬೇಸಗೆಯಲ್ಲಿ ನಗರಕ್ಕೆ ನೀರಿನ ಕೊರತೆಯಾಗುವ ಸಾಧ್ಯತೆ ಇಲ್ಲ. ಆದರೆ ಜನರು ನೀರಿನ ಮಿತವ್ಯಯ ಮಾಡುವುದು ಅಗತ್ಯ ಎಂದು ಮೇಯರ್‌ ಸುಧೀರ್ ಶೆಟ್ಟಿ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಅವಧಿಯಲ್ಲಿ ಕಳೆದ ವರ್ಷ ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ 5.60 ಮೀಟರ್‌ಗೆ ಇಳಿದಿತ್ತು. ಆದರೆ ಈ ಬಾರಿ ನೀರಿನ ಮಟ್ಟ ಸ್ವಲ್ಪವೂ ಇಳಿಕೆಯಾಗಿಲ್ಲ. ಸ್ವಲ್ಪ ಮಟ್ಟದ ಒಳಹರಿವು ಇನ್ನೂ ಇದೆ. ಏಪ್ರಿಲ್‌ ಮೇ ತಿಂಗಳಲ್ಲಿ ಸಾಮಾನ್ಯವಾಗಿ ಕರಾವಳಿಯಲ್ಲಿ ಮಳೆಯಾಗುತ್ತದೆ. ಹಾಗಾಗಿ ಈ ಬಾರಿ ನೀರಿನ ಕೊರತೆ ಉಂಟಾಗದು. ಆದರೆ ಬೇಸಗೆಯಲ್ಲಿ ನೀರಿನ ಬಳಕೆ ಜಾಸ್ತಿಯಾಗಿರುವ ಕಾರಣ ಜನತೆ ಮಿತವ್ಯಯ ಮಾಡಬೇಕು ಎಂದು ಮನವಿ ಮಾಡಿದರು.

ನೀರಿನ ಸಮಸ್ಯೆ ಇತ್ಯರ್ಥ:

ಕೊಡಿಯಾಲ್‌ಬೈಲ್‌ನಲ್ಲಿ ಯುಜಿಡಿ ಕಾಮಗಾರಿ ವೇಳೆ ನೀರಿನ ಪೈಪ್‌ಲೈನ್‌ ಒಡೆದು ಹೋದ ಕಾರಣ ನಗರದ ಆರೇಳು ವಾರ್ಡ್‌ಗಳಲ್ಲಿ ನೀರಿಗೆ ಸಮಸ್ಯೆಯಾಗಿತ್ತು. ಇದೀಗ ಪೈಪ್‌ಲೈನ್‌ ಸರಿಪಡಿಸಲಾಗಿದೆ. ಉಳಿದಂತೆ ನೀರು ಪೂರೈಕೆ ಆಗದ ಎತ್ತರದ ಪ್ರದೇಶ ಹಾಗೂ ಎಂಡ್‌ಪಾಯಿಂಟ್‌ಗಳಿಗೆ ಪಾಲಿಕೆಯ ಒಟ್ಟು ಆರು ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಮೇಯರ್‌ ಹೇಳಿದರು.

ಉಪ್ಪಿನಂಗಡಿ- ಎಎಂಆರ್‌ ಡ್ಯಾಂ ನಡುವೆ ಇರುವ ಬಿಳಿಯೂರು ಸರಳಿಕಟ್ಟೆ ಡ್ಯಾಂನಲ್ಲಿ ಎಎಂಆರ್‌ ಡ್ಯಾಂನ ಶೇ. 25ರಷ್ಟು ನೀರು ಶೇಖರಣೆ ಇದೆ. ಇತ್ತ ಹರೇಕಳ ಅಣೆಕಟ್ಟಿನಲ್ಲೂ ಸಾಕಷ್ಟು ನೀರಿದೆ. ತುಂಬೆ ಡ್ಯಾಂಗೆ ಒಳ ಹರಿವು ನಿಂತ ತಕ್ಷಣ ಡ್ಯಾಂನ ಕೆಳ ಭಾಗದಿಂದ ನೀರು ಹಾಯಿಸಿ ಡ್ಯಾಂ ನೀರಿನ ಮಟ್ಟವನ್ನುಕಾಯ್ದುಕೊಳ್ಳಲಾಗುತ್ತದೆ ಎಂದು ವಿವರಿಸಿದರು.

ಕೈಗಾರಿಕೆಗಳಿಗೆ ರೇಶನಿಂಗ್:

ಒಳಹರಿವು ನಿಂತ ಕೂಡಲೆ ಕೈಗಾರಿಕೆಗಳಿಗೆ ನೀರಿನ ರೇಶನಿಂಗ್‌ ಮಾಡಲು ಹಾಗೂ ಕೃಷಿ ಬಳಕೆಗೂ ನೀರಿನ ಕಡಿವಾಣ ಹಾಕುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ ಎಂದರು.ನೀರಿನ ಅಕ್ರಮ ಸಂಪರ್ಕದಾರರ ಮೇಲೆ ಎಫ್‌ಐಆರ್‌: ತುಂಬೆ ಡ್ಯಾಂನಿಂದ ನಗರಕ್ಕೆ ನೀರು ಪೂರೈಸುವ ಮುಖ್ಯ ಪೈಪ್‌ಲೈನ್‌ನಿಂದ ಅಕ್ರಮವಾಗಿ ನೀರು ಬಳಕೆ ಮಾಡುತ್ತಿರುವ ಅನೇಕ ಸಂಪರ್ಕಗಳನ್ನು ಈಗಾಗಲೇ ಕಡಿತ ಮಾಡಲಾಗಿದೆ. ಕುಡಿಯುವ ನೀರಿಗೆ ಮಾನವೀಯತೆ ನೆಲೆಯಲ್ಲಿ ನೀರು ನೀಡಬಹುದು. ಆದರೆ ವಾಣಿಜ್ಯ ಉದ್ದೇಶ ಹಾಗೂ ಕೃಷಿಗೆ ಅಕ್ರಮ ಸಂಪರ್ಕ ಹೊಂದಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು, ಅಂಥವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗುವುದು ಎಂದು ಮೇಯರ್‌ ಸುಧೀರ್ ಶೆಟ್ಟಿ ಕಣ್ಣೂರು ಎಚ್ಚರಿಸಿದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು