ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರ, ಪಟ್ಟಣ ಪ್ರದೇಶಗಳ ಜನರಿಗೆ ಮಾತ್ರವಲ್ಲದೆ ಹಳ್ಳಿಗಾಡಿನ ಜನರಿಗೂ ಗುಣಮಟ್ಟದ ಬೂದುಕಾಲುವೆ, ಸಿ.ಸಿ.ಚರಂಡಿ ಮತ್ತು ರಸ್ತೆ ಬಳಕೆಗೆ ಸಿಗಬೇಕು ಹಾಗೂ ಇದರಿಂದ ಅಪಾರ ಮಂದಿಗೆ ಅನುಕೂಲ ಆಗಬೇಕು ಎಂಬ ಹಿತದೃಷ್ಟಿಯಿಂದ , ಸಿ.ಸಿ.ಚರಂಡಿ ಮತ್ತು ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.ತಾಲೂಕಿನ ಬಾಣಾವರ ಗ್ರಾಮ ಪರಿಮಿತಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ವತಿಯಿಂದ 6 ಕೋಟಿ ರು. ವೆಚ್ಚದ ಬೂದುಕಾಲುವೆ, ಸಿ.ಸಿ.ಚರಂಡಿ ಮತ್ತು ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಇತ್ತೀಚಿನ ದಿನದಲ್ಲಿ ಗೃಹಬಳಕೆಯ ತ್ಯಾಜ್ಯ ನೀರು ಹೆಚ್ಚಾಗುತ್ತಿದ್ದು ಇದರ ಸಮರ್ಪಕ ನಿರ್ವಹಣೆ ಅತ್ಯಗತ್ಯ. ಈ ನಿಟ್ಟಿನಲ್ಲಿ ಬೂದು ನೀರು ನಿರ್ವಹಣೆಗೋಸ್ಕರ ಅನುಪಯುಕ್ತ ನೀರನ್ನು ಸಂಗ್ರಹಿಸಿ ನಂತರ ಸಂಸ್ಕರಿಸಲಾಗುವುದು. ಆದ್ದರಿಂದ ತ್ಯಾಜ್ಯ ನೀರು ಹರಿದು ಹೋಗಲು ಬೂದುಕಾಲುವೆ ನಿರ್ಮಿಸಲಾಗುವುದು. ಅಲ್ಲದೆ ಅವಶ್ಯಕತೆ ಇರುವ ಕಡೆ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಿಸಲಾಗುವುದು, ಇದರ ಪ್ರಯೋಜನ ಎಲ್ಲರೂ ಪಡೆದುಕೊಳ್ಳಬೇಕು ಎಂದರು.
ತಮ್ಮ ಅವಧಿಯಲ್ಲಿ ಇಡೀ ತಾಲೂಕು, ಕ್ಷೇತ್ರದಾದ್ಯಂತ ಗುಣಮಟ್ಟದ ರಸ್ತೆ, ಕುಡಿಯುವ ನೀರು, ಸಮುದಾಯ ಭವನ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಕ್ಷೇತ್ರದ ಜನರಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಸಿಗಬೇಕು ಎಂಬುದು ನನ್ನ ಆಶಯ ಎಂದು ಹೇಳಿದರು.ಜಿ.ಪಂ.ಮಾಜಿ ಉಪಾಧ್ಯಕ್ಷ ಬಿಳಿಚೌಡಯ್ಯ ಮಾತನಾಡಿ, ಕ್ಷೇತ್ರದ ಜನತೆ ಕಂಡ ಅಪರೂಪದ ಶಾಸಕರಾಗಿರುವ ಶಿವಲಿಂಗೇಗೌಡರು ಕ್ಷೇತ್ರದ ಜನತೆಯ ಬೇಕು ಬೇಡಗಳನ್ನು ಅರಿತು ನಗರ ಮತ್ತು ಗ್ರಾಮೀಣ ಭಾಗ ಎಂದು ಭೇದ ತೋರದೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಇತರ ರಾಜಕಾರಣಿಗಳಿಗೆ ಆದರ್ಶರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್, ಗ್ರಾ. ಪಂ ಮಾಜಿ ಅಧ್ಯಕ್ಷರಾದ ಜಯಣ್ಣ, ವೀಣಾ ಸುರೇಶ್, ಸದಸ್ಯರಾದ ಸುರೇಶ್, ಪಾಪಾಸ್ವಾಮಿ, ಶ್ರೀಧರ್, ಮುಖಂಡರಾದ ಪ್ರಕಾಶ್, ಇಮ್ರಾನ್, ಆರೀಫ್ ಇಲಾಖೆಯ ಎ.ಇ.ಇ ನಾಗರಾಜ್ ,ಇಂಜಿನಿಯರ್ ಉಮೇಶ್, ಪಿ.ಡಿ.ಓ ಕುಮಾರಸ್ವಾಮಿ ಹಾಗೂ ಗ್ರಾಮಸ್ಥರು ಹಾಜರಿದ್ದರು.==========
ಫೋಟೋ:ಬಾಣಾವರ ಗ್ರಾಮ ಪರಿಮಿತಿಯಲ್ಲಿ ವಿವಿಧ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಶಾಸಕ ಹಾಗೂ ಕರ್ನಾಟಕ ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಮಾತನಾಡಿದರು.