ಹರಪನಹಳ್ಳಿ: ನಾನು ಹರಪನಹಳ್ಳಿಯಲ್ಲಿ ಒಂದು ತಾಸು, ಒಂದು ದಿನ, ಒಂದು ತಿಂಗಳು, ಒಂದು ವರ್ಷ ಅಥವಾ ಎರಡು ವರ್ಷ ಇರುತ್ತೇನೋ ಗೊತ್ತಿಲ್ಲ. ಆದರೆ, ನಾನು ಹೇಳುವ ಕೆಲಸ, ನನ್ನ ಸಾಧನೆ ನಂಬರ್ ಒನ್ ಇರಬೇಕು ಎಂದು ಹರಪನಹಳ್ಳಿ ತಾಪಂ ಇಒ ಅಪೂರ್ವ ಎ. ಕುಲಕರ್ಣಿ ಗ್ರಾಪಂ ಸಿಬ್ಬಂದಿಗೆ ಖಡಕ್ಕಾಗಿ ತಿಳಿಸಿದರು.ಇಲ್ಲಿನ ತಾಪಂ ರಾಜೀವಗಾಂಧಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ನರೇಗಾ ಯೋಜನೆ ಕುರಿತು ವಿವರಿಸಿದ ಈ ಹಿಂದಿನ ನರೇಗಾ ಸಹಾಯಕ ನಿರ್ದೇಶಕ ಯು.ಎಚ್. ಸೋಮಶೇಖರ್, ಇದುವರೆಗೆ ನಿಗದಿತ ಮಾನವ ದಿನಗಳ ಸೃಜನೆಯಲ್ಲಿ ಶೇ.84ಕ್ಕೂ ಅಧಿಕ ಸಾಧನೆ ಮಾಡಲಾಗಿದೆ. ಇನ್ನು ವಿವಿಧ ಅನುಷ್ಠಾನ ಇಲಾಖೆಗಳ ಕೂಡ ನರೇಗಾದಡಿ ಮಾನವ ದಿನಗಳ ಸೃಜನೆಯಲ್ಲಿ ಉತ್ತಮ ಸಾಧನೆ ಮಾಡಿವೆ ಎಂದಾಗ, ಸ್ಮಶಾನಗಳ ಪ್ರಗತಿ ಮಾತ್ರ ಕುಂಠಿತ ಏಕೆ ಎಂಬ ಇಒ ಪ್ರಶ್ನೆಗೆ, ಇಡೀ ಜಿಲ್ಲೆಯಲ್ಲಿ 231ಕ್ಕೂ ಅಧಿಕ ಸ್ಮಶಾನ ನಿರ್ಮಾಣ ಗುರಿ ನಿಗದಿ ಮಾಡಿಕೊಂಡಿದ್ದೇವೆ. ಆದರೆ, ಇದರಲ್ಲಿ ಕೆಲವು ಇನ್ನು ಸರ್ವೇ ಬಾಕಿ ಇವೆ. ಇನ್ನು ಕೆಲ ಪಂಚಾಯಿತಿಗಳಲ್ಲಿ ಕೆಲಸವೇ ಆರಂಭಿಸಿಲ್ಲ. ಇತ್ತೀಚೆಗೆ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿಯೂ ಈ ಬಗ್ಗೆ ಶಾಸಕರು ಗಂಭೀರವಾಗಿ ತೆಗೆದುಕೊಂಡಿದ್ದು, ಮನುಷ್ಯ ಇದ್ದಾಗ ನೆಮ್ಮದಿಯಾಗಿ ಇರಲ್ಲ. ಆದರೆ, ಸತ್ತಾಗಲೂ ನೆಮ್ಮದಿಯಾಗಿ ಇರುವಂತೆ ನಾವು ಕಾಮಗಾರಿ ಕೈಗೆತ್ತಿಕೊಂಡು ಆದಷ್ಟು ಬೇಗ ಮುಗಿಸೋಣ ಎಂದು ತಿಳಿಸಿದ್ದರು ಎಂದು ಸೋಮಶೇಖರ್ ವಿವರಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಇಒ ಅಪೂರ್ವ, ಹೌದು. ಶಾಸಕರ ನಿರೀಕ್ಷೆ, ಅವರ ಕೆಲಸದ ಗುರಿಯಂತೆ ಎಲ್ಲರೂ ಕೆಲಸ ನಿರ್ವಹಿಸಬೇಕು. ಈ ವಿಷಯದಲ್ಲಿ ಯಾರಾದರೂ ಬೇಜವಾಬ್ದಾರಿ ತೋರಿದರೆ ಇದುವರೆಗೆ ಬರೀ ನೋಟಿಸ್ ನೀಡಿದ್ದು ಆಯ್ತು. ಇನ್ನು ಕ್ರಮ ಕೈಗೊಳ್ಳುವುದು ಎಂದು ಎಚ್ಚರಿಸಿದರು.
ಇನ್ನು ಕೂಸಿನ ಮನೆಗಳ ಪ್ರಗತಿ ಬಗ್ಗೆ ಮಾತನಾಡಿದ ಇಒ, ಕೆಲ ಕೂಸಿನ ಮನೆಗಳು ಉತ್ತಮವಾಗಿ ನಡೆಯುತ್ತಿದ್ದರೂ ಆರೈಕೆದಾರರಿಗೆ ನರೇಗಾದಡಿ ಕೂಲಿ ಹಣ ಪಾವತಿ ಮಾಡುತ್ತಿಲ್ಲ. ಇನ್ನು ಕೆಲ ಗ್ರಾಪಂಗಳಲ್ಲಿ ಕೂಸಿನಮನೆ ನಡೆಯದೇ ಇದ್ದರೂ ಕೂಲಿ ಹಣ ಪಾವತಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಖಂಡಿತ ಕ್ರಮ ಕೈಗೊಳ್ಳಲಾಗುವುದು. ಪ್ರತೀ ಕೂಸಿನ ಮನೆಯಲ್ಲಿ ಪೌಷ್ಠಿಕ ಆಹಾರ, ಸ್ವಚ್ಛತೆ, ಫ್ಯಾನ್ ಸೇರಿದಂತೆ ಎಲ್ಲ ಕೂಸಿನ ಮನೆಗಳಲ್ಲಿ ಮೂಲಸೌಲಭ್ಯ ಖಂಡಿತವಾಗಿ ಒದಗಿಸಬೇಕು ಎಂದರು.ನರೇಗಾ ಸಹಾಯಕ ನಿರ್ದೇಶಕ ಚಂದ್ರಶೇಖರ್ ವೈ.ಎಚ್., ಪಂಚಾಯತ್ ಸಹಾಯಕ ನಿರ್ದೇಶಕ ವೀರಣ್ಣ ಲಕ್ಕಣ್ಣನವರ್, ತಾಲೂಕು ಯೋಜನಾಧಿಕಾರಿ ನವೀನ್‌ಕುಮಾರ್, ತಾಂತ್ರಿಕ ಸಂಯೋಜಕ ನಾಗರಾಜ ನಾಯ್ಕ, ಐಇಸಿ ಸಂಯೋಜಕ ವಸಿಗೇರಪ್ಪ, ಎಂಐಎಸ್ ಸಂಯೋಜಕ ಮೈಲಾರಿಗೌಡ ಎಲ್ಲ ಗ್ರಾಪಂಗಳ ಪಿಡಿಒಗಳು, ಕಾರ್ಯದರ್ಶಿಗಳು, ಎಸ್‌ಡಿಎಎಗಳು, ತಾಂತ್ರಿಕ ಸಹಾಯಕಅಭಿಯಂತರರು ಸೇರಿದಂತೆ ತಾಪಂ ಹಾಗೂ ಗ್ರಾಪಂ ಸಿಬ್ಬಂದಿ ಇದ್ದರು.