ಹೂವಿನಹಡಗಲಿ: ಕಳೆದ ಎರಡು ದಿನಗಳಿಂದ ಕಬ್ಬಿನ ದರ ನಿಗದಿಗಾಗಿ ರೈತರ ಅಹೋರಾತ್ರಿ ಧರಣಿ ಸತ್ಯಾಗ್ರಹದಿಂದ ರೈತರಿಗೆ ಪ್ರತಿ ಟನ್‌ಗೆ ₹2770 ದರ ನಿಗದಿಯಿಂದ ರೈತರು ತುಸು ನೆಮ್ಮದಿಯಾಗಿ ಧರಣಿಯನ್ನು ಹಿಂಪಡೆದಿದ್ದಾರೆ.
ಬೆಳಗಿನಿಂದ ರೈತರ ಬೇಡಿಕೆಗೆ ತಕ್ಕಂತೆ ಹರಪನಹಳ್ಳಿ ಸಹಾಯಕ ಆಯುಕ್ತ ಚಿದಾನಂದ ಗುರುಸ್ವಾಮಿ, ತಹಸೀಲ್ದಾರ್ ಜಿ.ಸಂತೋಷಕುಮಾರ, ಡಿವೈಎಸ್ಪಿ, ಸಿಪಿಐ ನೇತೃತ್ವದಲ್ಲಿ ಮೂರು ಬಾರಿ ಕಾರ್ಖಾನೆ ಮಾಲಕರೊಂದಿಗೆ ಸಂಧಾನ ಸಭೆ ವಿಫಲವಾಗಿತ್ತು. ಕೊನೆಗೆ ರೈತರು ಮೈಲಾರ-ತೋರಣಗಲ್ಲು ರಾಜ್ಯ ಹೆದ್ದಾರಿ ಬಂದ್ ಮಾಡುತ್ತೇವೆ, ಸೋಮವಾರ ಹೂವಿನಹಡಗಲಿ ಪಟ್ಟಣ ಬಂದ್ ಕರೆ ನೀಡುತ್ತೇವೆಂದು ಎಚ್ಚರಿಕೆ ನೀಡಿದ ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ಮತ್ತು ಕಾರ್ಖಾನೆ ಮಾಲಿಕರು ಕೊನೆ ತೀರ್ಮಾನಕ್ಕೆ ಬಂದರು.
ಕಾರ್ಖಾನೆ ಮಾಲಕರ ಪರ ಟಿ.ರಾಘವೇಂದ್ರ ಮಾತನಾಡಿ, ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆ ನೀಡುವ ದರಕ್ಕಿಂತ ಹೆಚ್ಚಿನ ಬೆಲೆಯನ್ನು ರೈತರಿಗೆ ನೀಡುತ್ತಿದ್ದೇವೆ ಎಂದು ಹೇಳಿದಾಗ, ಅದು ಯಾವ ರೀತಿ ಹೆಚ್ಚಿನ ಬೆಲೆ ನೀಡುತ್ತಿದ್ದೀರಿ. ಅದರಿಂದ ಎಷ್ಟು ಮಂದಿ ರೈತರಿಗೆ ಲಾಭವಾಗಿ ಎಂದು ತೋರಿಸಿ ಎಂದು ತರಾಟೆಗೆ ತೆಗೆದುಕೊಂಡರು.ಈ ಸಂದರ್ಭದಲ್ಲಿ ಹರಪನಹಳ್ಳಿ ಎಸಿ ಚಿದಾನಂದ ಗುರುಸ್ವಾಮಿ ಮಾತಮಾಡಿ, ಸರ್ಕಾರದ ಆದೇಶದಂತೆ 9.5 ರಿಕವರಿ ಎಫ್‌ಆರ್‌ಪಿ ಬೆಲೆ ₹3290 ಇದೆ. ಇದರಲ್ಲಿ ಸಾಗಣೆ ಮತ್ತು ಕಬ್ಬು ಕಟಾವು ಸೇರಿದೆ. ಇದಕ್ಕೆ ಒಪ್ಪದ ರೈತರು ₹2762 ನೀಡುತ್ತೇವೆಂದು ಕಾರ್ಖಾನೆ ಮಾಲಕರು ಒಪ್ಪಿಗೆ ಸೂಚಿಸಿದ್ದಾರೆ, ಧರಣಿ ಕೈ ಬಿಟ್ಟು ಕಾರ್ಖಾನೆ ಆರಂಭಕ್ಕೆ ಅವಕಾಶ ನೀಡಬೇಕೆಂದು ಹೇಳಿದರು.
ಕಾರ್ಖಾನೆಯ ರಾಘವೇಂದ್ರ ಸಿಟ್ಟಿಗೆದ್ದು, ಕಾರ್ಖಾನೆಗೆಯ ಗೇಟ್ ಬೀಗ ಹಾಕಿ ನಿಮ್ಮ ಕೈಗೆ ಕೊಡುತ್ತೇವೆ. ನೀವು ಕಬ್ಬು ಅರೆಯಿರಿ, ಅದರ ಸಾಧಕ, ಬಾಧಕ ನಿಮ್ಮಗೆ ಅರ್ಥವಾಗುತ್ತದೆ, ನಮಗೆ ಬೆಳಗಾವಿ ಸುದ್ದಿ ಹೇಳಬೇಡಿ. ನಮ್ಮ ಕಾರ್ಖಾನೆ ಸುದ್ದಿ ಮಾತನಾಡಿ ಎಂದು ರೈತರಿಗೆ ಹೇಳಿದರು.
ರೈತರ ಹಿತ ಕಾಪಾಡಲು ನಾವು ಪ್ರತಿ ಟನ್ ಕಬ್ಬಿಗೆ ₹2763 ನೀಡುತ್ತೇವೆಂದು ಕಾರ್ಖಾನೆ ಪರವಾಗಿ ರಾಘವೇಂದ್ರ ಹೇಳುತ್ತಾ, ಕಬ್ಬಿ ಕಟಾವು ಮಾಡಲು 600 ಕಾರ್ಮಿಕರ ಬ್ಯಾಚ್ ತಂದಿದ್ದೇವೆ. ಧರಣಿ ಹೀಗೆ ಮುಂದುವರೆದರೆ ಕಾರ್ಮಿಕರನ್ನು ಕಟಾವಿಗೆ ತರಲು ಅಸಾಧ್ಯ, ನೀವೇ ಯೋಚಿಸಿ, ಅದಕ್ಕೆ ನಾವು ಜವಾಬ್ದಾರಲ್ಲ ಎಂದು ರೈತರಿಗೆ ಕಬ್ಬು ಕಟಾವಿನ ಬೆದರಿಕೆ ಹಾಕಿದರು.
ಕೊನೆಗೆ ರೈತರು ₹2812 ದರ ನೀಡಬೇಕೆಂದು ಪಟ್ಟು ಹಿಡಿದರು. ಇದಕ್ಕೆ ಒಪ್ಪದ ಕಾರ್ಖಾನೆಗೆ ಮಾಲಕರು, ಅಧಿಕಾರಿಗಳ ಜತೆಗೆ ಗೂಡಿ ಕೊನೆಗೆ ಒಂದು ಸಂಧಾನಕ್ಕೆ ಬಂದು ₹2770 ದರ ನಿಗದಿ ಮಾಡಲಾಗಿದೆ. ಇದು ಕಟಾವು ಹಾಗೂ ಸಾಗಣೆ ವೆಚ್ಚ ಹೊರತು ಪಡಿಸಿದ ದರವಾಗಿದೆ ಎಂದು ಸಹಾಯಕ ಆಯುಕ್ತ ಚಿದಾನಂಗ ಗುರುಸ್ವಾಮಿ ಹೇಳಿದಾಗ, ರೈತರು ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡು, ಧರಣಿಯಿಂದ ಹಿಂದೆ ಸರಿದರು.