ಹಾವೇರಿ: ದೇಶದ ಸ್ವಾತಂತ್ರ್ಯ ಹೋರಾಟವೇ ರೋಚಕವಾಗಿತ್ತು. ಯುವಜನಾಂಗ ಸ್ವಾತಂತ್ರ್ಯ ಚಳವಳಿ, ಸ್ವಾತಂತ್ರ್ಯ ಯೋಧರ ತ್ಯಾಗ, ಬಲಿದಾನಗಳನ್ನು ತಿಳಿದುಕೊಳ್ಳಬೇಕು. ಜತೆಗೆ ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್. ಪಾಟೀಲ ತಿಳಿಸಿದರು.ನಗರದ ಹುತಾತ್ಮರ ವೀರಸೌಧದಲ್ಲಿ ಮಂಗಳವಾರ ಹಾವೇರಿ ಹುತಾತ್ಮ ಮೈಲಾರ ಮಹದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ ಹಾಗೂ ಟಿಎಂಎಇಎಸ್ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಹುತಾತ್ಮ ಮೈಲಾರ ಮಹದೇವ, ವೀರಯ್ಯ ಹಿರೇಮಠ ಹಾಗೂ ತಿರಕಪ್ಪ ಮಡಿವಾಳ ಅವರ ಜೀವ ಬಲಿದಾನ ಮಾಡಿದ ಸ್ಮರಣೆಯ 82ನೇ ಹುತಾತ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮೈಲಾರ ಮಹದೇವಪ್ಪನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಮೈಲಾರ ಮಹದೇವಪ್ಪನವರು ಧೀಮಂತ ನಾಯಕ. ಅವರು ತಮ್ಮ ಚಿಕ್ಕ ವಯಸ್ಸಿನಲ್ಲೇ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕುವ ಮೂಲಕ ದೇಶದ ಸ್ವಾತಂತ್ರ್ಯ ಸಂಗ್ರಾಮದ ತಮ್ಮ ಹೆಜ್ಜೆಗುರುತು ಮೂಡಿಸಿದ್ದಾರೆ. ಹಾಗಾಗಿ ಯುವ ಜನಾಂಗ ಓದಿನೊಂದಿಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಗಿಸಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸ್ವಾತಂತ್ರ್ಯ ಹೋರಾಟದ ಬಗ್ಗೆ ತಿಳಿದುಕೊಳ್ಳಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಅನೇಕ ದೇಶಗಳ ಸ್ವಾತಂತ್ರ್ಯ ಹೋರಾಟದಲ್ಲಿ ರಕ್ತಪಾತಗಳು ನಡೆದಿವೆ. ಆದರೆ ಭಾರತ ದೇಶಕ್ಕೆ ಮಾತ್ರ ಸತ್ಯ ಹಾಗೂ ಅಹಿಂಸಾ ತತ್ವದಡಿ ಸ್ವಾತಂತ್ರ್ಯ ದೊರೆತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಬಾಲಗಂಗಾಧರ ತಿಲಕ್, ಭಗತ್‌ಸಿಂಗ್, ಸುಖದೇವ ಸೇರಿದಂತೆ ಲಕ್ಷಾಂತರ ತ್ಯಾಗ ಬಲಿದಾನ ಮರೆಯುವಂತಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ರಾಜ್ಯದ ಸಹಸ್ರಾರು ದೇಶಭಕ್ತರು ಪಾಲ್ಗೊಂಡಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಹಲಗಲಿ ಬೇಡರು ಸೇರಿದಂತೆ ಹಲವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವ ಮೂಲಕ ದೇಶಾಭಿಮಾನ ಮೆರೆದಿದ್ದಾರೆ. ಮೈಲಾರ ಮಹಾದೇವಪ್ಪ ಅವರ ಜೀವನ ಚರಿತ್ರೆ ಕೇಳಿದರೆ ರೋಮಾಂಚನವಾಗುತ್ತದೆ. ಅಹಿಂಸಾತ್ಮಕ ಹೋರಾಟ ಮೈಲಾರ ಮಹಾದೇವಪ್ಪ ಅವರ ಧ್ಯೇಯವಾಗಿತ್ತು ಎಂದರು.ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಸುರೇಶ ಜಂಗಮಶೆಟ್ಟಿ ಮಾತನಾಡಿ, ಮೈಲಾರ ಮಹದೇವಪ್ಪನವರ ಸ್ವಾತಂತ್ರ್ಯ ಹೋರಾಟ ಚರಿತ್ರೆ ಎಲ್ಲರಿಗೂ ಮಾದರಿಯಾಗಿದೆ. ಹಾವೇರಿ ವಿಶ್ವವಿದ್ಯಾಲಯದಲ್ಲಿ ಮೈಲಾರ ಮಹದೇವಪ್ಪ, ಸರ್ವಜ್ಞ, ಶಿಶುನಾಳ ಷರೀಫರ ಸೇರಿದಂತೆ ವಿವಿಧ ಮಹನೀಯ ಅಧ್ಯಯನ ಪೀಠ ಸ್ಥಾಪನೆಗೆ ಚಿಂತನೆ ಮಾಡಲಾಗುತ್ತಿದೆ ಎಂದರು.