ಹೂವಿನಹಡಗಲಿ: "ಸಂಪಾಯಿತಲೇ ಪರಾಕ್'''' ಇದು ವಿಜಯನಗರ ಜಿಲ್ಲೆ ಹೂವಿನಹಡಗರಿ ತಾಲೂಕಿನ ಸುಕ್ಷೇತ್ರ ಮೈಲಾರಲಿಂಗೇಶ್ವರ ಜಾತ್ರೆಯ ಐತಿಹಾಸಿಕ ಪ್ರಸಿದ್ಧ ಕಾರ್ಣಿಕೋತ್ಸವದ ನುಡಿ.
ಕಾರ್ಣಿಕೋತ್ಸವ ಮುಗಿದ ಕೂಡಲೇ ಡೆಂಕಣಮರಡಿಯಲ್ಲಿ ನೆರೆದಿದ್ದ ಭಕ್ತ ಸಮೂಹವು ಕಾರ್ಣಿಕ ನುಡಿಯ ಗೂಡಾರ್ಥವನ್ನು ತಮ್ಮೊಳಗೆ ಚರ್ಚಿಸುವುದು ಎಲ್ಲೆಡೆ ಕಂಡುಬಂತು. ಈ ಭವಿಷ್ಯ ನುಡಿಯು ಹೆಚ್ಚಾಗಿ ಕೃಷಿ, ರಾಜಕೀಯ, ಆರ್ಥಿಕ, ವಾಣಿಜ್ಯ ಕ್ಷೇತ್ರಕ್ಕೆ ಹೆಚ್ಚಾಗಿ ಅನ್ವಯವಾಗುತ್ತಿದೆ ಎಂಬುದು ಭಕ್ತರ ನಂಬಿಕೆ.
ಈ ಬಾರಿಯ ಕಾರ್ಣಿಕ ನುಡಿಯನ್ನು ದೇವಸ್ಥಾನದ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್ ವಿಶ್ಲೇಷಣೆ ಮಾಡುತ್ತಾ, ಈ ಬಾರಿ ನಾಡಿನಲ್ಲಿ ಮಳೆ ಬೆಳೆ ಚೆನ್ನಾಗಿ ಆಗಲಿದೆ. ಎಲ್ಲ ರೀತಿಯಿಂದಲ್ಲೂ ರಾಜ್ಯ ಸುಭಿಕ್ಷೆಯಿಂದ ಇರುತ್ತದೆ. ಜತೆಗೆ ಮುಂಬರುವ ದಿನಗಳಲ್ಲಿ, ಸರ್ಕಾರ ನೀಡುತ್ತಿರುವ ಸೌಲಭ್ಯಗಳಿಂದ ದೇಶ ಮತ್ತು ರಾಜ್ಯ ಆರ್ಥಿಕವಾಗಿ ಸದೃಢವಾಗಲಿದೆ. ಒಟ್ಟಾರೆ ಜನ ಸುಖದಿಂದ ಜೀವನ ಸಾಗಿಸುತ್ತಾರೆಂದರು.124ನೇ ಕಾರ್ಣಿಕ: ಕಳೆದ ವರ್ಷ "ಅಂಬಲಿ ಹಳಸಿತು ಕಂಬಳಿ ಬೀಸಿತಲೇ ಪರಾಕ್ " ಎಂಬ ಕಾರ್ಣಿಕ ನುಡಿಯನ್ನು ಗೊರವಯ್ಯ ರಾಮಣ್ಣ ನುಡಿದ್ದರು. ದಾಖಲೆಯ ಪ್ರಕಾರ ಈ ವರ್ಷದ "ಸಂಪಾಯಿತಲೇ ಪರಾಕ್ " ಈ ಕಾರ್ಣಿಕ 124ನೇ ಭವಿಷ್ಯ ನುಡಿಯಾಗಿದೆ.
ದೇವಸ್ಥಾನದ ವಂಶಪಾರಂಪರ್ಯ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್, ದೇವಸ್ಥಾನದಿಂದ ಅಶ್ವರೂಢರಾಗಿ ಕಾರ್ಣಿಕ ಗೊರವಯ್ಯನನ್ನು ಕರೆತಂದು ಕಾರ್ಣಿಕ ನುಡಿಯಲು ಆದೇಶಿಸುವ ಪರಂಪರೆ ಇಂದಿಗೂ ನಡೆದುಬಂದಿದೆ.
ಮುಗಿಲು ಮುಟ್ಟಿದ ಘೋಷಣೆ: ಡೆಂಕಣಮರಡಿಯಲ್ಲಿ ಕಾರ್ಣಿಕ ನುಡಿಯಲು 11 ದಿನಗಳ ಕಾಲ ಉಪವಾಸ ವ್ರತಾಚರಣೆಯಲ್ಲಿರುವ ಗೊರವಯ್ಯ ಕಾರ್ಣಿಕದ ರಾಮಣ್ಣನನ್ನು ಕರೆತಂದರು. ಆಗ ನೆರೆದಿದ್ದ ಸಾವಿರಾರು ಭಕ್ತರು ಏಳು ಕೋಟಿ, ಏಳು ಕೋಟಿ, ಏಳು ಕೋಟಿಗೋ. ಛಾಂಗ್ ಬಲೋ..., ಛಾಂಗ್ ಬಲೋ... ಎಂದು ದೇವರ ನಾಮಸ್ಮರಣೆ ಮುಗಿಲು ಮುಟ್ಟಿತ್ತು.
ಪರಿಷೆ ತುಂಬೆಲ್ಲಾ ಧ್ವನಿವರ್ಧಕ: ಡೆಂಕಣಮರಡಿಯಲ್ಲಿ ಕಾರ್ಣಿಕ ನುಡಿ ಸ್ಪಷ್ಟವಾಗಿ ಎಲ್ಲರಿಗೂ ಕೇಳಿಸುವಂತೆ ಇಡೀ ಜಾತ್ರೆಯಲ್ಲಿ ಭಕ್ತರು ಇದ್ದ ಸ್ಥಳದಲ್ಲೇ ಜಿಲ್ಲಾಡಳಿತ ಗುಣಮಟ್ಟದ ಧ್ವನಿವರ್ಧಕಗಳನ್ನು ಅಳವಡಿಸಿದ್ದರು. ವಿವಿಧ ತಂತ್ರಜ್ಞಾನ ಬಳಕೆಯಿಂದ ಕಾರ್ಣಿಕ ನುಡಿ ಭಕ್ತರಲ್ಲಿ ಗೊಂದಲ ಮೂಡಲಿಲ್ಲ. ಈ ಹಿಂದೆ ಹಲವು ಬಾರಿ ಕಾರ್ಣಿಕ ನುಡಿ ಸ್ಪಷ್ಟವಾಗಿ ಕೇಳದೇ ಗೊಂದಲ ಉಂಟಾಗುತ್ತಿತ್ತು.
ಮೈಲಾರ ಕಾರ್ಣಿಕ: ಧರ್ಮದರ್ಶಿ ಕೆಂಡಾಮಂಡಲ
ಗೊರವಯ್ಯ ಕಾರ್ಣಿಕದ ರಾಮಪ್ಪನ ವಿರುದ್ಧ ಮತ್ತೆ ತಿರುಗಿಬಿದ್ದ ವೆಂಕಪ್ಪಯ್ಯ ಒಡಯರ್ ಇವರ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದ್ದು, ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಡೆಂಕಣ ಮರಡಿಯ ಪುಣ್ಯಭೂಮಿಯಲ್ಲೇ ಇವರಿಬ್ಬರ ನಡುವೆ ಜಟಾಪಟಿ ಶುರುವಾಗಿದೆ.
ಮೈಲಾರದ ಕಪಿಲ ಗುರುಪೀಠದ ಧರ್ಮದ ನಿಯಮಗಳನ್ನು ಪಾಲಿಸದೆ ಗೊರವಯ್ಯ ರಾಮಣ್ಣ ಕಾರ್ಣಿಕ ನುಡಿ ನುಡಿದ್ದಾರೆ. ಈ ಬಾರಿಯ ಕಾರ್ಣಿಕ ಇದು ದೈವವಾಣಿಯಲ್ಲ. ಗೊರವಯ್ಯ ರಾಮಪ್ಪನ ವಾಣಿ. ಇದನ್ನು ನಂಬುವುದು ಬಿಡುವುದು ಭಕ್ತರಿಗೆ ಬಿಟ್ಟಿದ್ದು. ಜಿಲ್ಲಾಧಿಕಾರಿ ಹಾಗೂ ಭಕ್ತರು ಇವರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಕ್ರಮ ತೆಗೆದುಕೊಳ್ಳದಿದ್ದರೆ ಪ್ರತಿವರ್ಷ ಭಕ್ತರಿಗೆ ಕಾರ್ಣಿಕ ನುಡಿಯ ಬಗ್ಗೆ ಗೊಂದಲ ಮೂಡುತ್ತದೆ. ಜತೆಗೆ ಮೈಲಾರಲಿಂಗೇಶ್ವರ ಕಾರ್ಣಿಕದ ಬಗ್ಗೆ ಭಕ್ತರು ಇಟ್ಟಿರುವ ನಂಬಿಕೆ ಮತ್ತು ಮಹತ್ವ ದೂರವಾಗಲಿದೆ. ದೇವಸ್ಥಾನ ಹಾಗೂ ಗುರುಪೀಠದ ಪದ್ಧತಿ ಅನುಸರಿಸಿದರೆ ಮಾತ್ರ ದೈವವಾಣಿ ನುಡಿಯಲಿಕ್ಕೆ ಸಾಧ್ಯ. ಈ ಕುರಿತು ತಾವು ಕಾನೂನು ಹೋರಾಟ ಮಾಡುತ್ತೇವೆಂದು ವೆಂಕಪ್ಪಯ್ಯ ಒಡೆಯರ್ ಎಚ್ಚರಿಕೆ ನೀಡಿದ್ದಾರೆ.