ಶಿಗ್ಗಾವಿ: ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ರಾಮನವಮಿ ದಿನದಂದು ಮೈಲಾರಲಿಂಗೇಶ್ವರ ಹಾಗೂ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಪ್ರತಿ ವರ್ಷದಂತೆ ಈ ವರ್ಷವು ಮಾ 24ರಿಂದ ಏ. ೧೪ರ ವರೆಗೆ ಪ್ರತಿ ಮೈಲಾರಲಿಂಗನಿಗೆ ವಿಶೇಷ ಪೂಜೆ, ಅಭಿಷೇಕ, ಡೋಣಿ ತುಂಬಿಸುವ ಕಾರ್ಯಕ್ರಮ, ಪಲ್ಲಕ್ಕಿ ಉತ್ಸವ, ಜಾಗರಣೆಯಂತಹ ವಿವಿಧ ಕಾರ್ಯಕ್ರಮಗಳು ನಡೆದವು.
ನಂತರ ನೂತನ ದೇವಸ್ಥಾನ ಕಟ್ಟಡಗಳ ವಾಸ್ತುಶಾಂತಿ ಪೂಜಾ ಕಾರ್ಯಕ್ರಮ ನಡೆದವು. ನೂತನ ದೇವರುಗಳ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಡೆಯಿತು ನಂತರ ಮಂಗಳವಾರ ರಾತ್ರಿ ಜಾಗರಣೆ ಕಾರ್ಯಕ್ರಮಗಳು ಗೊರವಪ್ಪ ಗೊರವಮ್ಮನವರಿಂದ ಮೈಲಾರಲಿಂಗೇಶ್ವರನ ಆರಾಧನೆ ನಡೆಯಿತು .ಬುಧವಾರ ರಾಮನವಮಿಯಂದು ಮುಂಜಾನೆ ದೋಣಿ ತುಂಬಿಸುವ ಕಾರ್ಯಕ್ರಮ ಜರುಗಿತು ನಂತರ ಮೈಲಾರಲಿಂಗೇಶ್ವರ ಹಾಗೂ ವೀರಭದ್ರೇಶ್ವರ ದೇವರುಗಳ ಉತ್ಸವ ಮೂರ್ತಿ ಮೆರವಣಿಗೆ ಹಾಗೂ ಪಲ್ಲಕ್ಕಿ ಉತ್ಸವ ಗ್ರಾಮದಲ್ಲಿ ಸಂಚರಿಸಿತು. ಮಧ್ಯಾಹ್ನ ಒಂದು ಗಂಟೆಗೆ ಗ್ರಾಮದ ಗೊರವಯ್ಯ ನೀಲಪ್ಪ ಮಾಕಪ್ಪನವರ ಅವರು ''''ಮೇಟಿ ಚಿಗುರಿತು ಕೂಸಿಗೆ ಖುಷಿ ಬಂದಿತಲೇ ಪರಾಕ್'''' ಎನ್ನುವ ಕಾರ್ಣಿಕ ವಾಣಿಯನ್ನು ನುಡಿದರು. ನಂತರ ಗೊರವಪ್ಪನವರಿಂದ ಸರಪಳಿ ಪವಾಡ ಹಾಗೂ ವಿವಿಧ ಕಾರ್ಯಕ್ರಮಗಳು ಜರುಗಿದವು ನಂತರ ಅನ್ನಸಂತರ್ಪಣೆ ನಡೆಯಿತು.
ದೇಶದಲ್ಲಿ ಈ ವರ್ಷ ಒಳ್ಳೆಯ ಮಳೆ ಬೆಳೆಯಾಗಿ ಎಲ್ಲರೂ ಸಂತೋಷದಿಂದ ಜೀವನ ನಡೆಸುತ್ತಾರೆ ಎನ್ನುವುದು ಈ ಕಾರ್ಣಿಕ ಅರ್ಥ ಎಂದು ಮೈಲಾರಲಿಂಗೇಶ್ವರ ಸದ್ಬಕ್ತ ಮಂಡಳಿ ಅಧ್ಯಕ್ಷ ಧರ್ಮಣ್ಣ ಕಿವಡನವರ ಹೇಳಿದರು.ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ವೀರಭದ್ರಗೌಡ ಪಾಟೀಲ, ಧರ್ಮಣ್ಣ ಕಿವಡನವರ, ಶಿವಪ್ಪ ಈಟಿ, ಶರೀಫ ಮಾಕಪ್ಪನವರ, ಮುದಕಪ್ಪ ಸುಣಗಾರ, ಗ್ರಾಂ.ಪಂ.ಸದಸ್ಯರಾದ ಬಸನಗೌಡ ಪಾಟೀಲ, ಮಲ್ಲಿಕಾರ್ಜುನ ಅಗಸರ, ಹನಮಂತಪ್ಪ ಸುಣಗಾರ, ವೀರಭದ್ರಯ್ಯ ಪೂಜಾರ ಹಾಗೂ ಮೈಲಾರಲಿಂಗೇಶ್ವರ ಹಾಗೂ ವೀರಭದ್ರೇಶ್ವರ ದೇವಸ್ಥಾನ ಸಮಿತಿಯ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.