ಕನ್ನಡಪ್ರಭ ವಾರ್ತೆ ಮೈಸೂರುದೇಸಿ ಬೀಜಗಳು ಕೇವಲ ಕೃಷಿಯ ಒಂದು ಭಾಗವಲ್ಲ, ಅವು ನಮ್ಮ ಆಹಾರ ಸಂಸ್ಕೃತಿ, ಜೈವಿಕ ವೈವಿಧ್ಯ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರತೀಕಗಳಾಗಿವೆ ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ವಡ್ನಾಳ್ ಜಗದೀಶ್ ತಿಳಿಸಿದರು.ನಗರದ ನಂಜರಾಜ ಬಹದ್ದೂರು ಛತ್ರದಲ್ಲಿ ಸಹಜ ಸಮೃದ್ಧ ಸಂಸ್ಥೆಯು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಮತ್ತು ಸಹಜ ಸೀಡ್ಸ್ ಆಶ್ರಯದಲ್ಲಿ ಆಯೋಜಿಸಿರುವ 2 ದಿನಗಳ ದೇಸಿ ಬೀಜೋತ್ಸವವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ನೂರಾರು ವರ್ಷಗಳಿಂದ ಸ್ಥಳೀಯ ತಳಿಗಳು ನಮ್ಮ ಅನ್ನದ ಬಟ್ಟಲನ್ನು ತುಂಬಿವೆ. ಅವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.ಜೀವವೈವಿಧ್ಯ ಸಂರಕ್ಷಣೆಗಾಗಿ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲೂ ಜೀವವೈವಿಧ್ಯ ನಿರ್ವಹಣಾ ಸಮಿತಿಗಳನ್ನು (ಬಿಎಂಸಿ) ರಚಿಸಿ ಜನತಾ ಜೀವವೈವಿಧ್ಯ ದಾಖಲಾತಿಗಳನ್ನು ಸಿದ್ಧಪಡಿಸುವ ಕಾರ್ಯವನ್ನು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಮಾಡುತ್ತಿದೆ. ಜೀವವೈವಿಧ್ಯ ಸಂರಕ್ಷಣೆಯಲ್ಲಿ ಆಸಕ್ತರಾದವರು ಇದರ ಭಾಗವಾಗಬೇಕು ಮತ್ತು ಸ್ಥಳೀಯ ಜ್ಞಾನ ಮತ್ತು ಜೈವಿಕ ಸಂಪತ್ತಿನ ಸಂರಕ್ಷಣೆಗೆ ಮುಂದಾಗಬೇಕು. ಗ್ರಾಮ ಮಟ್ಟದಲ್ಲಿ ಜೀವವೈವಿಧ್ಯ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದು ಅವರು ಹೇಳಿದರು.ಕರ್ನಾಟಕ ಜೀವವೈವಿಧ್ಯ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿ ವಿಜಯಲಕ್ಷ್ಮಿ ಮಾತನಾಡಿ, ಹಿಂದಿನ ಕಾಲದಲ್ಲಿ ದೇಸಿ ಬೀಜಗಳನ್ನು ಉಡುಗೊರೆಯಾಗಿ ನೀಡುವ ಸಂಪ್ರದಾಯವಿತ್ತು. ರೈತ ಸಮುದಾಯಗಳು ಬೀಜಗಳನ್ನು ಹಂಚಿಕೊಳ್ಳುವ ಮೂಲಕ ಕೃಷಿ ವೈವಿಧ್ಯವನ್ನು ಉಳಿಸಿಕೊಂಡಿದ್ದವು. ಇಂದಿನ ಸಂದರ್ಭದಲ್ಲಿ ದೇಸಿ ಬೀಜಗಳ ಸಂರಕ್ಷಣೆ ಇನ್ನಷ್ಟು ಮಹತ್ವ ಪಡೆದುಕೊಂಡಿದ್ದು, ಇಂತಹ ಬೀಜೋತ್ಸವಗಳು ಸಮಾಜದಲ್ಲಿ ಜಾಗೃತಿ ಮೂಡಿಸಲು ನೆರವಾಗುತ್ತಿವೆ ಎಂದರು.ದೇಸಿ ಬೀಜ ಸಂರಕ್ಷಕಿ ಕಣಗಾಲು ಪದ್ಮಮ್ಮ ಮಾತನಾಡಿ, ನಮ್ಮ ಭೂಮಿಗೆ ನಾವು ಜೀತದಾಳುಗಳಾದರೆ ಭೂಮಾತೆ ನಮ್ಮನ್ನು ಎಂದಿಗೂ ಕೈಬಿಡುವುದಿಲ್ಲ. ನಮ್ಮ ಆರೋಗ್ಯ, ಕೃಷಿ ಮತ್ತು ಭವಿಷ್ಯದ ದೃಷ್ಟಿಯಿಂದ ದೇಸಿ ಬೀಜಗಳನ್ನು ಉಳಿಸಿ ಬೆಳೆಸಬೇಕು ಎಂದು ಹೇಳಿದರು.ದೇಸಿ ಬೀಜ ಸಂರಕ್ಷಕ ಎಸ್.ಆರ್. ಶ್ರೀನಿವಾಸಮೂರ್ತಿ ಮಾತನಾಡಿ, ದೇಸಿ ಭತ್ತ ಹಾಗೂ ಇತರ ಸ್ಥಳೀಯ ತಳಿಗಳ ಬಗ್ಗೆ ಜನರಲ್ಲಿ ಅರಿವು ಕಡಿಮೆ ಆಗುತ್ತಿರುವುದು ವಿಷಾದನೀಯ. ದೇಸಿ ತಳಿಗಳು ಸ್ಥಳೀಯ ಹವಾಮಾನಕ್ಕೆ ಹೊಂದಿಕೊಂಡು ಉತ್ತಮ ಗುಣಮಟ್ಟದ ಆಹಾರ ಉತ್ಪಾದನೆಗೆ ನೆರವಾಗುವುದರ ಜೊತೆಗೆ ಕಡಿಮೆ ವೆಚ್ಚದಲ್ಲಿ ಕೃಷಿ ಮಾಡಲು ಸಹಕಾರಿಯಾಗುತ್ತವೆ ಎಂದರು. ಪಾರಂಪರಿಕ ಬೀಜ ಸಂರಕ್ಷಕ ಪ್ರಶಸ್ತಿಇದೇ ವೇಳೆ ಸಾಧಕ ರೈತರಾದ ಕುಂದಗೋಳ ತಾಲೂಕಿನ ಮಳಲಿಯ ಕಮಲಮ್ಮ ಈ. ಖಾನನ್ನವರ, ನಾಗರಹೊಳೆ ಕಾಡಿನ ಮಚ್ಚೂರು ಹಾಡಿಯ ಪಾರ್ವತಿ, ಪಿರಿಯಾಪಟ್ಟಣ ತಾಲೂಕಿನ ಹಿಟ್ನೆಹೆಬ್ಬಾಗಿಲು ಗ್ರಾಮದ ಮಂಜುಳಾ ಕಾಳಪ್ಪ, ಹಾವೇರಿ ಜಿಲ್ಲೆ ತಿಮ್ಮಾಪುರ ಗ್ರಾಮದ ಮಹದೇವಪ್ಪ ಉಪ್ಪಾರ, ಮುಳಬಾಗಿಲು ತಾಲೂಕಿನ ತೊಂಡಹಳ್ಳಿಯ ಬಿ. ಪ್ರಭಾಕರ ಹಾಗೂ ಕೊಡಗಿನ ಪೊನ್ನಂಪೇಟೆ ತಾಲೂಕಿನ ಹುದೂರು ಗ್ರಾಮದ ಬಿ.ಪಿ. ರವಿಶಂಕರ್ ಅವರಿಗೆ ಪಾರಂಪರಿಕ ಬೀಜ ಸಂರಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸಹಜ ಸಮೃದ್ಧದ ಮುಖ್ಯಸ್ಥ ಜಿ. ಕೃಷ್ಣಪ್ರಸಾದ್, ಕಾರ್ಯದರ್ಶಿ ಆನಂದತೀರ್ಥ ಪ್ಯಾಟಿ ಮೊದಲಾದವರು ಇದ್ದರು.---ಬಾಕ್ಸ್... ದೇಸಿ ಬೀಜಗಳ ಪ್ರದರ್ಶನಫೋಟೋ- 13ಎಂವೈಎಸ್4----ಎರಡು ದಿನಗಳ ಈ ಬೀಜೋತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ 50 ಹೆಚ್ಚು ಬೀಜ ಸಂರಕ್ಷಕರು ಹಾಗೂ ಸಮುದಾಯ ಬೀಜ ಬ್ಯಾಂಕ್ ಗಳ ಸದಸ್ಯರು 500 ಹೆಚ್ಚಿನ ದೇಸಿ ಬೀಜ, ಅಪರೂಪದ ಭತ್ತ, ಸಿರಿಧಾನ್ಯಗಳು, ತರಕಾರಿಗಳು, ಗೆಡ್ಡೆ- ಗೆಣಸುಗಳು ಹಾಗೂ ಸ್ಥಳೀಯ ಹಣ್ಣಿನ ತಳಿಗಳನ್ನು ಪ್ರದರ್ಶಿಸಿದ್ದಾರೆ.ಕುಂದಗೋಳದ ರೈತರು ಸಿಂಧೂ ನಾಗರಿಕತೆಯ ಕಾಲದ ತಳಿ ಎಂದು ನಂಬಲಾಗುವ ಪಿಗಂಬೇರಿ ಸೇರಿದಂತೆ 25 ಬಗೆಯ ಗೋಧಿ ತಳಿಗಳನ್ನು ಪ್ರದರ್ಶಿಸಿದ್ದಾರೆ.ಜ್ಯೂಸ್ ಬಿಲ್ವ, ಶಂಕರ ರೆಡ್ ಜಾಕ್, ಪೀನಟ್ ಬಟರ್ ಫ್ರೂಟ್ ಹಾಗೂ ಮಲ್ಬೆರಿ ಸೇರಿದಂತೆ ಅಪರೂಪದ ಹಣ್ಣಿನ ಸಸಿಗಳು ಮಾರಾಟಕ್ಕೆ ಲಭ್ಯವಿವೆ. ದೇವಧಾನ್ಯ ರೈತ ಉತ್ಪಾದಕರ ಸಂಸ್ಥೆಯು ಕಪ್ಪು ಗೋಧಿ, ಕಪ್ಪು ಕಡಲೆ, ಜೋಳ, ಹಸಿರು ಗ್ರಾಂ ಹಾಗೂ ಇತರೆ ಸಾಂಪ್ರದಾಯಿಕ ಧಾನ್ಯಗಳು ಮತ್ತು ಕಾಳುಗಳಿಂದ ತಯಾರಿಸಿದ ಹಿಟ್ಟನ್ನು ಮಾರಾಟ ಮಾಡುತ್ತಿದೆ.ಮೈಸೂರಿನ ಸಸ್ಯಧಾಮ ನರ್ಸರಿ ಹಾಗೂ ಬೆಳುವಾಳ ತೋಟ ವಿವಿಧ ಸ್ಥಳೀಯ ಹಣ್ಣಿನ ತಳಿಗಳ ಸಸಿಗಳನ್ನು ಮಾರಾಟ ಮಾಡುತ್ತಿವೆ. ದೇಸಿ ಸೀಡ್ ಪ್ರೊಡ್ಯೂಸರ್ ಕಂಪನಿಯು ರಾಗಿ, ಭತ್ತ, ಸಿರಿಧಾನ್ಯಗಳು, ಕಾಳುಗಳು ಹಾಗೂ ತರಕಾರಿ ಬೀಜಗಳನ್ನು ಮಾರಾಟ ಮಾಡುತ್ತಿದೆ.ನೈಸರ್ಗಿಕ ಕೃಷಿಕರು ವಿವಿಧ ಬಗೆಯ ಮಾವು, ನೇರಳೆ ಮತ್ತು ಹಲಸು ಸೇರಿದಂತೆ ವಿವಿಧ ಹಣ್ಣುಗಳನ್ನು ಮಾರಾಟಕ್ಕೆ ತಂದಿದ್ದಾರೆ. ಇವುಗಳ ರುಚಿ ನೋಡಲು ಗ್ರಾಹಕರು ಮುಗಿಬಿದ್ದರು. ಸಾವಯವ ಉತ್ಪನ್ನಗಳು, ಮೌಲ್ಯವರ್ಧಿತ ಆಹಾರ ಪದಾರ್ಥಗಳು ಹಾಗೂ ಅಲಂಕಾರಿಕ ಉತ್ಪನ್ನಗಳು ಮಾರಾಟವಾಗುತ್ತಿವೆ.ಉತ್ತರ ಕರ್ನಾಟಕದ ಸಾಂಪ್ರದಾಯಿಕ ಆಹಾರ ಮಳಿಗೆಯಲ್ಲಿ ಜೋಳದ ರೊಟ್ಟಿ, ಪಲ್ಲೆ ಮತ್ತು ಇತರೆ ತಿಂಡಿಗಳು ಚಪ್ಪರಿಸಲು ಸಿಗುತ್ತಿವೆ. ಬೆಂಗಳೂರಿನ ಸಾಯಿಲ್ ಸಂಸ್ಥೆಯವರು ಬೀಜೋಪಚಾರ, ಮಣ್ಣಿನ ಸಂರಕ್ಷಣೆ, ಸಾವಯವ ಗೊಬ್ಬರ ತಯಾರಿಕೆ ಮತ್ತು ಸಾವಯವ ಕೃಷಿ ಪದ್ಧತಿಗಳ ಪ್ರಾಯೋಗಿಕ ಪ್ರದರ್ಶನ ಮಾಡಿದ್ದಾರೆ.ಇದೇ ವೇಳೆ ದಾವಣಗೆರೆಯ ಬಿದಿರು ತಜ್ಞ ಜಬೀವುಲ್ಲಾ ಅವರು ಬಿದಿರಿನ ಉಪಯೋಗಗಳು, ಕೃಷಿ ವಿಧಾನಗಳು, ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ಅವಕಾಶಗಳ ಕುರಿತು ಮಾಹಿತಿ ನೀಡಿದರು. ವಿವಿಧ ಬಿದಿರು ತಳಿಗಳು ಮಾರಾಟಕ್ಕೆ ಲಭ್ಯವಿವೆ. ದೇಸಿ ಬೀಜೋತ್ಸವವು ಜೂ.14ರ ಬೆಳಗ್ಗೆ 10 ರಿಂದ ರಾತ್ರಿ 8 ಗಂಟೆಯವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ.