ಕಡುಬಡವರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಔಷಧಿ ಪೂರೈಸುವ ದೃಷ್ಟಿಯಡಿ ಕೇಂದ್ರ ಸರ್ಕಾರವು ಜನೌಷಧಿ ಕೇಂದ್ರ ತೆರೆದಿತ್ತು
ಕನ್ನಡಪ್ರಭ ವಾರ್ತೆ ಮೈಸೂರು
ರಾಜ್ಯ ಸರ್ಕಾರವು ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ಶಾಶ್ವತವಾಗಿ ಮುಚ್ಚುವುದಕ್ಕೆ ಆದೇಶ ಹೊರಡಿಸಿರುವುದು ಖಂಡಿಸಿ, ಜನೌಷದ ಕೇಂದ್ರಗಳನ್ನು ಮುಚ್ಚಬಾರದೆಂದು ಆಗ್ರಹಿಸಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಗೆ ಶುಕ್ರವಾರ ಭೇಟಿ ನೀಡಿ, ತಹಸೀಲ್ದಾರ್ ಶಿವಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು.ಕಡುಬಡವರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಔಷಧಿ ಪೂರೈಸುವ ದೃಷ್ಟಿಯಡಿ ಕೇಂದ್ರ ಸರ್ಕಾರವು ಜನೌಷಧಿ ಕೇಂದ್ರ ತೆರೆದಿತ್ತು. ಇದರನ್ವಯ ಈಗಾಗಲೇ ದೇಶಾದ್ಯಂತ 16290 ಜನೌಷಧಿ ಕೇಂದ್ರ, ಕರ್ನಾಟಕ ರಾಜ್ಯದಲ್ಲಿ 1459 ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದವು. ಇದರಲ್ಲಿ ಸುಮಾರು 207 ಹೆಚ್ಚು ಜನೌಷಧಿ ಕೇಂದ್ರಗಳು ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿವೆ. ಇವುಗಳನ್ನು ಮುಚ್ಚಲು ಆದೇಶಿಸಿರುವುದು ಸರಿಯಲ್ಲ ಎಂದು ಅವರು ಕಿಡಿಕಾರಿದರು.ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆವರಣದಲ್ಲಿ ನಡೆಯುತ್ತಿರುವ ಜನೌಷಧಿ ಕೇಂದ್ರಗಳನ್ನು ಶಾಶ್ವತವಾಗಿ ಮುಚ್ಚಲು ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರಕ್ಕೆ ನಿಜವಾಗಿಯೂ ಈ ರಾಜ್ಯದ ಬಡವರ, ದೀನದಲಿತರ ಬಗ್ಗೆ ಕಾಳಜಿ ಇಲ್ಲ. ಕಾಳಜಿ ಇದ್ದರೆ ಕೂಡಲೇ ಈ ಆದೇಶವನ್ನು ಹಿಂಪಡೆಯಲಿ ಎಂದು ಅವರು ಒತ್ತಾಯಿಸಿದರು.ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧಿ ಪೂರೈಸಲಾಗುತ್ತಿದ್ದು, ಜನೌಷಧಿ ಕೇಂದ್ರಗಳಲ್ಲಿ ರೋಗಿಗಳು ಹಣ ಕೊಟ್ಟು ಔಷಧ ಖರೀದಿಸುವುದು ಬೇಡ ಎಂದು ಆರೋಗ್ಯ ಸಚಿವರು ಸಮಜಾಯಿಷಿ ನೀಡಿದ್ದಾರೆ. ಆದರೆ, ಎಷ್ಟು ಆಸ್ಪತ್ರೆಗಳಲ್ಲಿ ಔಷಧ ಪೂರ್ಣಪ್ರಮಾಣದಲ್ಲಿ ಲಭ್ಯವಾಗುತ್ತಿವೆ ಎಂದು ಅವರು ಪ್ರಶ್ನಿಸಿದರು.ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷ ಸಿ.ಎಸ್. ಚಂದ್ರಶೇಖರ್, ಮಹಿಳಾ ಪ್ರಮುಖ್ ನಾಗಮಣಿ, ಮುಖಂಡರಾದ ಆನಂದ್, ಆನಂದ್ ದಯಾನಂದ, ಹರ್ಷ, ರಾಮಚಂದ್ರ ರಾವ್, ಕಲೀಮ್ ಖಾನ್ ಮೊದಲಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.