ಏಕೀಕರಣಕ್ಕೆ ಆಲೂರರ ಕೊಡುಗೆ ಅಪಾರ

KannadaprabhaNewsNetwork | Published : Jul 13, 2024 1:40 AM

ಸಾರಾಂಶ

ನಾಡಿನ ಗತ ವೈಭವದ ಬಗ್ಗೆ ತಿಳಿಸಿಕೊಡುವುದರ ಜೊತೆಗೆ ಏಕೀಕರಣದ ಕಿಚ್ಚನ್ನು ಹೊತ್ತಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ

ಕನ್ನಡಪ್ರಭ ವಾರ್ತೆ, ಮೈಸೂರು

ಕರ್ನಾಟಕದ ಏಕೀಕರಣಕ್ಕೆ ಆಲೂರು ವೆಂಟಕರಾಯರ ಕೊಡುಗೆ ಅಪಾರ. ನಾಡಿನ ಗತ ವೈಭವದ ಬಗ್ಗೆ ತಿಳಿಸಿಕೊಡುವುದರ ಜೊತೆಗೆ ಏಕೀಕರಣದ ಕಿಚ್ಚನ್ನು ಹೊತ್ತಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ತಿಳಿಸಿದರು.

ನಗರದ ಚಾಮುಂಡಿಪುರಂ ವೃತ್ತದಲ್ಲಿರುವ ರಾಮಚಂದ್ರರಾವ್ ಉದ್ಯಾನವನದಲ್ಲಿ ಆಯೋಜಿಸಿದ್ದ ಆಲೂರು ವೆಂಕಟರಾಯರ 144ನೇ ಜನುಮ ದಿನಾಚರಣೆಯಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಮಾತನಾಡಿದ ಅವರು, ಏಕೀಕರಣಕ್ಕೂ ಮೊದಲ ಕರ್ನಾಟಕ ರಾಜ್ಯ ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ, ಮದ್ರಾಸ್ಕರ್ನಾಟಕಗಳಲ್ಲಿ ಹರಿದು ಹಂಚಿ ಹೋಗಿತ್ತು. ಅದರಂತೆ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಹೆಚ್ಚಾಗಿ ಮರಾಠಿ ಶಿಕ್ಷಣ ನೀಡಲಾಗುತ್ತಿತ್ತು. ಇದನ್ನು ಮನಗಂಡ ವೆಂಕಟರಾಯರು ಏಕೀಕರಣ ಚಳವಳಿ ನಡೆಸಲು ತಮ್ಮ ಶಾಲಾ ವಿದ್ಯಾರ್ಥಿ ಸಮಯದಲ್ಲೇ ಮುಂದಾಗಿದ್ದರು. ನಾಡಿನಲ್ಲಿ ರಾಜ್ಯದ ಒಗ್ಗೂಡಿಕೆಗೆ ಪೂರಕ ಕಾರ್ಯಕ್ರಮ ನಡೆಸಿದರು ಎಂದರು.

ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ಮಾತನಾಡಿ, ವೆಂಕಟರಾಯರು ರಾಷ್ಟ್ರೀಯ ಶಾಲೆ ಪ್ರಾರಂಭಿಸಿ ಕನ್ನಡಿಗರಿಗೆ ಸ್ವಉದ್ಯೋಗ ಮಾಡುವ ಅವಕಾಶ ಮಾಡಿಕೊಟ್ಟಿದ್ದರು. ಕರ್ನಾಟಕ ಏಕೀಕರಣ ಪರಿಷತ್ ಮೂಲಕ ಕರ್ನಾಟಕದ ಏಕೀಕರಣ ಮಾಡುವ ಮಹತ್ಕಾರ್ಯ ಮಾಡಿದ್ದರು. ತಮ್ಮ ಬಹುಮುಖ ವ್ಯಕ್ತಿತ್ವದ ಮೂಲಕ ಕನ್ನಡಿಗರನ್ನು ಒಗ್ಗೂಡಿಸುವ ಕೆಲಸ ಮಾಡಿದರು ಎಂದು ಸ್ಮರಿಸಿದರು.

ನಗರ ಪಾಲಿಕೆ ಮಾಜಿ ಸದಸ್ಯ ಮ.ವಿ. ರಾಮ್ ಪ್ರಸಾದ್ ಮಾತನಾಡಿ, ಕನ್ನಡದ ಮಹಾನ್ ಚೇತನ, ಕನ್ನಡ ಕನ್ನಡಿಗ ಕರ್ನಾಟಕ ಇರುವತನಕ ಮರೆಯದ ಮರೆಯಲಾಗದ ವ್ಯಕ್ತಿತ್ವ, 25 ಹೆಚ್ಚು ಕೃತಿಗಳನ್ನು ರಚನೆ ಮಾಡಿದ ಆಲೂರು ವೆಂಕಟರಾಯರು, ಬಾಲಗಂಗಾಧರ ತಿಲಕರ ಗೀತಾ ರಹಸ್ಯವನ್ನ ಕನ್ನಡಕ್ಕೆ ಅನುವಾದಿಸಿ ಕನ್ನಡ ಸಾಹಿತ್ಯಕ್ಕೆ ಘನತೆ ಗೌರವ ತಂದುಕೊಟ್ಟವರು ಎಂದರು

ಸಾಹಿತಿ ಪುಷ್ಪಾ ಅಯ್ಯಂಗಾರ್, ಜೆಡಿಎಸ್ ಕಾರ್ಯಾದಕ್ಷ ಪ್ರಕಾಶ್ ಪ್ರಿಯದರ್ಶನ್, ಸಮಾಜ ಸೇವಕರಾದ ವಿದ್ಯಾ, ವೈದೇಹಿ, ಭುವನೇಶ್ವರಿ ಸೇವಾ ಟ್ರಸ್ಟ್ ಅಧ್ಯಕ್ಷ ನಾಗಶ್ರೀ, ಸುಚಿಂದ್ರ, ಚಕ್ರಪಾಣಿ, ಬೈರತಿ ಲಿಂಗರಾಜು, ರಾಘವೇಂದ್ರ, ಸೇತುರಾಮ್, ಮಿರ್ಲೆ ಪಣೀಶ್ ಮೊದಲಾದವರು ಇದ್ದರು.

Share this article