ರೈಲಿನಲ್ಲಿ ಕಾಣುವ ಎರಡನೇ ಭಾರತಕ್ಕೆ ಸ್ಪಂದಿಸಬೇಕು: ಡಾ.ಸಿ.ಎನ್. ಮಂಜುನಾಥ್

KannadaprabhaNewsNetwork | Published : Feb 27, 2024 1:31 AM

ಸಾರಾಂಶ

ಭಾರತ ನೋಡಿದ್ದೇವೆ. ವಿಮಾನದಲ್ಲಿ ನೋಡಿದರೆ ವರ್ಣ ರಂಜಿತವಾಗಿ ಕಾಣುತ್ತದೆ. ರೈಲಿನಲ್ಲಿ ಪ್ರಯಾಣ ಮಾಡಿದರೆ ಬಡತನ, ನೋವು ಕಾಣುತ್ತದೆ. ಎರಡನೇ ಭಾರತಕ್ಕೆ ಸ್ಪಂದಿಸಬೇಕಿದೆ.ಗಾಂಧಿ ರೈಲಿನಲ್ಲಿ ಪ್ರಯಾಣ ಮಾಡಿ ದೇಶವನ್ನು ಅರಿತರು. ನಾವು ಆಸ್ತಿ ಕಳೆದುಕೊಂಡರೂ, ಆತ್ಮೀಯರನ್ನು ಕಳೆದುಕೊಳ್ಳಬಾರದು

ಕನ್ನಡಪ್ರಭ ವಾರ್ತೆ ಮೈಸೂರು

ದೇಶದಲ್ಲಿ ವಿಮಾನದ ವರ್ಣರಂಜಿತ ಭಾರತ ಮತ್ತು ರೈಲಿನಿಂದ ಕಾಣುವ ಬಡನತ ಮತ್ತು ನೋವಿನ ಭಾರತವಿದೆ. ನಾವು ಎರಡನೇ ಭಾರತಕ್ಕೆ ಸ್ಪಂದಿಸಬೇಕು ಎಂದು ಜಯದೇವ ಹೃದ್ರೋಗ ಸಂಸ್ಥೆಯ ವಿಶ್ರಾಂತ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅಭಿಪ್ರಾಯಪಟ್ಟರು.

ನಗರದ ಕಲಾಮಂದಿರದಲ್ಲಿ ಡಾ. ಮಂಜುನಾಥ್ ಅಭಿನಂದನಾ ಸಮಿತಿ ವತಿಯಿಂದ ಧನ್ಯವಾದ ಧನ್ವಂತರಿ ಕಾರ್ಯಕ್ರಮದಲ್ಲಿ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ನಾವು ಎರಡು ಭಾರತ ನೋಡಿದ್ದೇವೆ. ವಿಮಾನದಲ್ಲಿ ನೋಡಿದರೆ ವರ್ಣ ರಂಜಿತವಾಗಿ ಕಾಣುತ್ತದೆ. ರೈಲಿನಲ್ಲಿ ಪ್ರಯಾಣ ಮಾಡಿದರೆ ಬಡತನ, ನೋವು ಕಾಣುತ್ತದೆ. ಎರಡನೇ ಭಾರತಕ್ಕೆ ಸ್ಪಂದಿಸಬೇಕಿದೆ.ಗಾಂಧಿ ರೈಲಿನಲ್ಲಿ ಪ್ರಯಾಣ ಮಾಡಿ ದೇಶವನ್ನು ಅರಿತರು. ನಾವು ಆಸ್ತಿ ಕಳೆದುಕೊಂಡರೂ, ಆತ್ಮೀಯರನ್ನು ಕಳೆದುಕೊಳ್ಳಬಾರದು ಎಂದರು.

ಬಡವರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆಯು ಕಡಿಮೆ ದರದಲ್ಲಿ ದೊರಕಬೇಕು ಎಂಬ ನನ್ನ ಕನಸು ಈಗ ನನಸಾಗಿದೆ. ಇದಕ್ಕೆ ಎಲ್ಲರ ಪರಿಶ್ರಮ ಕಾರಣ. ಈವರೆಗೆ 75 ಲಕ್ಷ ಹೊರ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. 8 ಲಕ್ಷ ರೋಗಿಗಳಿಗೆ ಶಸ್ತ್ರಚಿಕಿತ್ಸೆ ನೀಡಲಾಗಿದೆ. ನಮ್ಮ ಓದು ಎಷ್ಟು ಸಂಸ್ಕಾರ ಕೊಟ್ಟಿದೆ ಎಂಬುದು ಮುಖ್ಯವಲ್ಲ. ನಮ್ಮ ಓದು ಎಷ್ಟು ಮನೆಗಳನ್ನು ಬೆಳಗಿದೆ, ಎಷ್ಟು ಜನರ ಕಷ್ಟಕ್ಕೆ ಸ್ಪಂದಿಸಿದೆ ಎಂಬುದು ಮುಖ್ಯ ಎಂದರು.

ನನಗೆ ಹತ್ತು, ಹಲವು ಪ್ರಶಸ್ತಿಗಳು ಬಂದಿದೆ. ಆದರೆ ಜನರಿಂದ ದೊರಕಿರುವ ಹೃದಯ ಸ್ಪರ್ಶಿ ಗೌರವವು ಈ ಎಲ್ಲಾ ಪ್ರಶಸ್ತಿಗಿಂತಲೂ ವಿಶೇಷ ಎಂದು ಭಾವಿಸುತ್ತೇನೆ. ಪ್ರತಿಯೊಬ್ಬರಿಗೂ ಅವಕಾಶ ಇದೆ. ನಮ್ಮ ಕೆಲಸವನ್ನು ಪ್ರೀತಿಸಿದರೆ ಶ್ರದ್ಧೆಯಿಂದ ಮಾಡಿದರೆ ಅದೆ ಈ ದೇಶಕ್ಕೆ ಕೊಡುವ ಕೊಡುಗೆ. ಸಾಧನೆ ಮಾತನಾಡಬೇಕೆ ವಿನಃ, ಸಾಧನೆಯೇ ಮಾತಾಗಬಾರದು. ಸರ್ಕಾರಿ ಆಸ್ಪತ್ರೆಯನ್ನು ಖಾಸಗಿ ಪಂಚತಾರಾ ಆಸ್ಪತ್ರೆಯನ್ನಾಗಿ ಮಾಡಬೇಕು ಎಂಬ ಆಸೆ ಇತ್ತು. ಅದು ಈಡೇರಿದೆ ಎಂದರು.

ಜನರ ಹೃದಯ ಗೆಲ್ಲಬೇಕು. ದ್ವೇಷ ಕಳೆಯಬೇಕು. ಪ್ರೀತಿ ಹಂಚಬೇಕು. ಹಂಚಿ ತಿನ್ನುವ ಸಂಸ್ಕಾರ ಇರಲಿ. ಹಳಸಿದ್ದನ್ನು ಕೊಡಬಾರದು, ಉಳಿಸಿದ್ದು ಕೊಡಬೇಕು. ವ್ಯಕ್ತಿ ಹೋದರೂ ವ್ಯಕ್ತಿತ್ವ ಶಾಶ್ವತವಾಗಿ ಉಳಿಯುವಂತಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಹೃದಘಾತವಾದಾಗ ಚಿಕಿತ್ಸೆ ನೀಡಲು ಮೊದಲು 2 ಸಾವಿರ ಕಟ್ಟಬೇಕಿತ್ತು. ತುರ್ತು ಚಿಕಿತ್ಸೆ ಬಂದಾಗ ಹಣಕ್ಕಿಂತ ದಾಖಲಾತಿ ಮುಖ್ಯ. ವಿಮೆ ಇಲ್ಲದಿದ್ದರೂ ಮೊದಲು ಚಿಕಿತ್ಸೆಗೆ ಆದ್ಯತೆ ನೀಡಲಾಗಿದೆ. ವೈದ್ಯರಾದವರು ಜನರ ಮಧ್ಯೆ ಇದ್ದು ಕೆಲಸಮಾಡಬೇಕು. ಆಗ ಜನರ ಸಂಕಷ್ಟದ ಅರಿವಾಗುತ್ತದೆ ಎಂದರು.

ಆಸ್ಪತ್ರೆಯೊಂದರಲ್ಲಿ ನಿಯಮ ಮತ್ತು ಮಾನವೀಯತೆ ಎರಡು ಪುಸ್ತಕಗಳಿರುತ್ತವೆ. ನಾವು ನಿಯಮ ಪಾಲಿಸುತ್ತ ಹೋದರೆ ಜನರಿಗೆ ಚಿಕಿತ್ಸೆ ನೀಡಲಾಗುವುದಿಲ್ಲ. ಆದ್ದರಿಂದ ಮಾನವೀಯತೆಗೆ ಆದ್ಯತೆ ನೀಡಬೇಕು. ಆಸ್ಪತ್ರೆಗೆ ಅನುದಾನ ಎಷ್ಟು ಮುಖ್ಯವೋ, ಅನುಷ್ಠಾನ ಕೂಡ ಮುಖ್ಯ. ಅಂತೆಯೇ ನಿರ್ವಹಣೆ ತುಂಬಾ ಮುಖ್ಯ. ಜಯದೇವ ಹೃದ್ರೋಗ ಸಂಸ್ಥೆಗೆ ಸುಮಾರು 400 ಸಂಘ, ಸಂಸ್ಣೆಗಳು ಹಾಗೂ ದಾನಿಗಳು ನೆರವು ನೀಡುತ್ತಿದ್ದಾರೆ. ಇನ್ಫೋಸಿಸ್ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಅವರನ್ನು ನೆನಪಿಸಿಕೊಳ್ಳಬೇಕು. 350 ಬೆಡ್ ಆಸ್ಪತ್ರೆ ಕಟ್ಟಿಸಿಕೊಟ್ಟಿದ್ದಾಗಿ ಅವರು ಹೇಳಿದರು.

ಆಯುಷ್ಮಾನ್ ಯೋಜನೆ ಪರಿಷ್ಕರಣೆ ಆಗಬೇಕು. ದರ ವೆಚ್ಚವೂ ಬದಲಾಗಬೇಕಿದೆ ಎಂದರು.

ರಾಜಕೀಯಕ್ಕೆ ಬನ್ನಿ

ಸಂಸದ ಪ್ರತಾಪಸಿಂಹ ಮಾತನಾಡಿ, ವಿದ್ಯೆ ಎಂಬುದು ಜಾತಿ, ಬಣ್ಣ, ಧರ್ಮ ತಾರತಮ್ಯ ಮಾಡುವುದಿಲ್ಲ. ಅದನ್ನು ನಾವು ಸಿದ್ದಿಸಿಕೊಳ್ಳಬೇಕು. ಮಂಜುನಾಥ್ ಅವರು ತಮ್ಮ ಪರಿಶ್ರಮದಿಂದ ವಿದ್ಯೆ ಸಿದ್ದಿಸಿಕೊಂಡವರು. ಹುಟ್ಡಿನಿಂದ ಎಲ್ಲರೂ ಒಂದೇ. ಸಂಸ್ಕಾರ ಮತ್ತು ವಿದ್ಯೆಯಿಂದ ಶ್ರೇಷ್ಠರಾದವರು ಡಾ. ಮಂಜುನಾಥ ಅವರು. ಮೈಸೂರಲ್ಲಿ ಜಯದೇವ ಬರಲು ನೀವು ಕಾರಣರಾದವರು. ಸಾಕಷ್ಟು ಜನರಿಗೆ ಇಂದು ಚಿಕಿತ್ಸೆ ಸಿಗುತ್ತಿದೆ ಎಂದರು.

ರಾಜಕೀಯಕ್ಕೆ ಒಳ್ಳೆಯವರು ಬರಬೇಕು. ಹಣ ಇದ್ದವರೆ ರಾಜಕೀಯಕ್ಕೆ ಬಂದವರು ಹೆಚ್ಚು. ಜನರ ರಾಜಕೀಯ ಕೆಟ್ಡದ್ದಲ್ಲ. ನಿಮ್ಮಂತವರು ಬರಬೇಕು ರಾಜಕೀಯಕ್ಕೆ. ಜನರಿಗೆ ಆದರ್ಶ ವ್ಯಕ್ತಿಗಳು ಬೇಕು. ಖಂಡಿತವಾಗಿ ಬನ್ನಿ. ಪತ್ರಕರ್ತನಾಗಿದ್ದ ನನ್ನನ್ನು ಮೈಸೂರಿನ ಜನ ಪ್ರೀತಿಯಿಂದ ಎರಡು ಬಾರಿ ಗೆಲ್ಲಿಸಿದ್ದಾರೆ. ಅದಕ್ಕೆ ಚ್ಯುತಿ ಬರದಂತೆ ಕೆಲಸ ಮಾಡಿದ್ದೇನೆ ಎಂದರು.

ಕಲಾವಿದ ಪುನೀತ್ ಕುಮಾರ್ ವೇದಿಕೆಯಲ್ಲೇ ಮಂಜುನಾಥ್ ಚಿತ್ರ ಬರೆದು ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಸೋಮನಾಥ ಸ್ವಾಮೀಜಿ, ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್.ಆರ್. ರಂಗನಾಥ್, ಸಂಸದ ಪ್ರತಾಪಸಿಂಹ, ಡಾ.ಸಿ.ಎನ್. ಮಂಜುನಾಥ್ ಅವರ ಪತ್ನಿ ಅನುಸೂಯ ತಾಯಿ ಶಂಭಮ್ಮ, ಸತೀಶ್ ಗೌಡ, ವಿ. ಕವೀಶ್ ಗೌಡ. ಎ. ರವಿ ಮೊದಲಾದವರು ಇದ್ದರು.

---

ಕೋಟ್

ನನ್ನ ಸೇವೆ ರಾಷ್ಟ್ರಮಟ್ಟದಲ್ಲಿ ಸಿಗಬೇಕೆಂಬ ಹಂಬಲ ಅನೇಕರಲ್ಲಿದೆ. ಈ ಬಗ್ಗೆ ನಾನು ಯೋಚನೆ ಮಾಡುತ್ತಿದ್ದೇನೆ.

-ಡಾ.ಸಿ.ಎನ್. ಮಂಜುನಾಥ್, ಖ್ಯಾತ ಹೃದ್ರೋಗ ತಜ್ಞ.

---

ನಿಮ್ಮ ಸೇವೆಯನ್ನು ಈ ಸಮಾಜ ನೆನೆಯುತ್ತದೆ ಎಂಬ ವಿಶ್ವಾಸವಿದೆ. ಒಂದು ವೇಳೆ ನೆನೆಯದೆ ಇದ್ದರು ನಷ್ಟವಿಲ್ಲ. ನಿಮ್ಮನ್ನ ಕಳೆದುಕೊಂಡರೆ ಅದು ಸಮಾಜಕ್ಕೆ ನಾಚಿಕೆ ಆಗಬೇಕು. ರಾಜಕೀಯ ನಂಟು ಇದ್ದರು ಕೂಡ ಅವರು ರಾಜಕಾರಣಕ್ಕೆ ಸಿಲುಕಲಿಲ್ಲ. ಯಾವುದೇ ಗೊಂದಲಗಳನ್ನು ಇಟ್ಟುಕೊಳ್ಳದೆ ನಿರ್ಧಾರ ಕೈಗೊಳ್ಳಿ.

- ಎಚ್.ಆರ್. ರಂಗನಾಥ್, ಮುಖ್ಯಸ್ಥರು, ಪಬ್ಲಿಕ್ ಟಿವಿ

Share this article