ಪುತ್ತೂರು: ಮೈಸೂರು ದಸರಾ ಕಂಬಳದ ಎಲ್ಲ ವ್ಯವಸ್ಥೆಗಳು ಪೂರ್ಣಗೊಂಡಿದ್ದು, ಶನಿವಾರ ಬೆಳಗ್ಗೆ 9 ಗಂಟೆಗೆ ಪುತ್ತೂರಿನಿಂದ 160 ಜೋಡಿ ಕೋಣಗಳು ಹಾಗೂ ಮಾಲಕರು ಮೈಸೂರಿಗೆ ತೆರಳಲಿದ್ದಾರೆ. ಪ್ರಯಾಣದ ಸಂದರ್ಭದಲ್ಲಿ ಎಲ್ಲಾ ರೀತಿಯ ಮುಂಜಾಗರೂಕತಾ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಕಂಬಳದ ರೂವಾರಿಯಾದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ಕುಶಾಲನಗರದ ಜನರ ಬೇಡಿಕೆಯಂತೆ ಕೋಣಗಳನ್ನು ಇಳಿಸುವ ಸ್ಥಳದಲ್ಲಿ ಪಿಲಿ ನಲಿಕೆ (ಹುಲಿ ಕುಣಿತ) ನಡೆಯಲಿದ್ದು, ಬೆಳಗ್ಗೆ 10 ಗಂಟೆಯಿಂದಲೇ ಪಿಲಿ ನಲಿಕೆ ಆರಂಭಗೊಳ್ಳಲಿದೆ. ಸಾಗಾಟದ ವೇಳೆಯಲ್ಲಿ ದಾರಿ ಮದ್ಯೆ ಯಾವುದೇ ವಾಹಗಳಿಗೆ ತೊಂದರೆಯಾದಲ್ಲಿ ಪರ್ಯಾಯ ವ್ಯವಸ್ಥೆಯಾಗಿ ಇತರ ಮೂರು ವಾಹನದ ವ್ಯವಸ್ಥೆ, 3 ವಾಹನಗಳಲ್ಲಿ ಯುವಕರ ತಂಡ ಸಿದ್ಧವಿರುತ್ತದೆ. ದಾರಿಯುದ್ದಕ್ಕೂ ಪೊಲೀಸ್ ಬೆಂಗಾವಲಿನೊಂದಿಗೆ ಸಾಗಲಿದೆ. ಹೋಗುವ ಸಂದರ್ಭದಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡುವ ಬಗ್ಗೆಯೂ ಕೇಳಿಕೊಳ್ಳಲಾಗಿದೆ. ಕೋಣಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಯಜಮಾನರೇ ಮಾಡಿಕೊಳ್ಳಲಿದ್ದಾರೆ.ಮೈಸೂರಿಗೆ ಬೆಳಗ್ಗೆ 7ರಿಂದ 8 ಗಂಟೆ ಒಳಗೆ ತಲುಪಲಿದ್ದು, ಅಲ್ಲಿ ಕೋಣದ ಯಜಮಾನರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹಾಕಿ, ಸರ್ಟಿಫಿಕೇಟ್ ನೀಡಿ ಅಧಿಕಾರಿಗಳು ಸ್ವಾಗತ ಮಾಡಲಿದ್ದಾರೆ. ಅಲ್ಲಿ ವಿಶ್ರಾಂತಿ ಮತ್ತು ಊಟ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಕಂಬಳ ವೀಕ್ಷಣೆಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗಿದ್ದು, ನಿನ್ನೆ ನಡೆದ ಟ್ರಯಲ್ ಸಂದರ್ಭದಲ್ಲಿ ಸುಮಾರು 2 ಸಾವಿರ ಮಂದಿ ಪಾಲ್ಗೊಂಡಿದ್ದರು. ಕಂಬಳದ ವಿಜೇತ ಕೋಣಗಳಿಗೆ ಇಲ್ಲಿ ನೀಡುವ ಮಾದರಿಯಲ್ಲಿಯೇ ಬಹುಮಾನ ನೀಡಲಾಗುತ್ತದೆ ಎಂದು ಶಾಸಕರು ತಿಳಿಸಿದ್ದಾರೆ.