ಮರು ಜಾತಿ ಗಣತಿ ಖಂಡಿಸಿ ವಾಟಾಳ್ ಪ್ರತಿಭಟನೆ

KannadaprabhaNewsNetwork |  
Published : Jun 17, 2025, 12:54 AM IST
7 | Kannada Prabha

ಸಾರಾಂಶ

ಮೈಸೂರಿನಲ್ಲೂ ಅನ್ಯ ಭಾಷಿಕರ ಪ್ರಾಬಲ್ಯ ಹೆಚ್ಚಾಗುತ್ತಿದೆ. ಹೀಗಾಗಿ, ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಕನ್ನಡಿಗರು ಎಷ್ಟು ಮಂದಿ ಇದ್ದಾರೆ

ಕನ್ನಡಪ್ರಭ ವಾರ್ತೆ ಮೈಸೂರುಮರು ಜಾತಿಗಣತಿಗೆ ಮುಂದಾಗಿರುವ ರಾಜ್ಯ ಸರ್ಕಾರದ ನಿಲುವು ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನಗರದ ಹಾರ್ಡಿಂಜ್ ವೃತ್ತದಲ್ಲಿ ಸೋಮವಾರ ಪ್ರತಿಭಟಿಸಿದರು.ಈ ವೇಳೆ ವಾಟಾಳ್ ನಾಗರಾಜ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಇದ್ದಂತೆ ಇಲ್ಲ. ಎರಡನೇ ಅವಧಿಯಲ್ಲಿ ಬಲಹೀನರಾಗಿದ್ದಾರೆ. ಮರು ಜಾತಿಗಣತಿ ವಿಚಾರದಲ್ಲಿ ಇದನ್ನು ಒಪ್ಪಿಕೊಂಡಿದ್ದಾರೆ. ನೂರಾರು ನಾಗರಹಾವುಗಳ ಮಧ್ಯೆ ಸಿದ್ದರಾಮಯ್ಯ ಇದ್ದಾರೆ. ಮರು ಜಾತಿ ಗಣತಿ ಬದಲು ಕನ್ನಡ ಭಾಷಿಕರ ಗಣನೆ ಮಾಡಬೇಕು ಎಂದು ಆಗ್ರಹಿಸಿದರು.ಮೈಸೂರಿನಲ್ಲೂ ಅನ್ಯ ಭಾಷಿಕರ ಪ್ರಾಬಲ್ಯ ಹೆಚ್ಚಾಗುತ್ತಿದೆ. ಹೀಗಾಗಿ, ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಕನ್ನಡಿಗರು ಎಷ್ಟು ಮಂದಿ ಇದ್ದಾರೆ ಎಂದು ಗಣನೆ ಮಾಡಬೇಕು. ಕನ್ನಡ ಭಾಷಿಕರು ಎಷ್ಟಿದ್ದಾರೆ, ಪರ ಭಾಷಿಕರು ಎಷ್ಟಿದ್ದಾರೆ ಎಂಬ ಗಣನೆ ಮಾಡಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.ಕೆಆರ್‌ ಎಸ್ ಜಲಾಶಯಕ್ಕೆ ಐತಿಹಾಸಿಕ ಹಿನ್ನೆಲೆಯಿದ್ದು ವಿಶೇಷ ಮಹತ್ವವಿದೆ. ಅಲ್ಲಿ ನೂರಾರು ಕೋಟಿ ರೂ. ವೆಚ್ಚದಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣದ ಅಗತ್ಯವಿಲ್ಲ. ಅದೇ ರೀತಿ ಕಾವೇರಿ ಆರತಿಯ ಅವಶ್ಯಕತೆಯೂ ಇಲ್ಲ ಎಂದು ಅವರು ತಿಳಿಸಿದರು. ರಾಜ್ಯ ಸರ್ಕಾರ ಭಕ್ತಿಯ ಹೆಸರಿನಲ್ಲಿ ಭಕ್ತರ ದರೋಡೆ ಮಾಡಲು ಹೊರಟಿದೆ. ದೇಶ ವಿದೇಶಗಳ ಭಕ್ತರು ಚಾಮುಂಡಿಬೆಟ್ಟಕ್ಕೆ ಬರುತ್ತಾರೆ. 2 ಸಾವಿರ ರೂ. ಪಡೆದು ವಿಶೇಷ ದರ್ಶನದ ವ್ಯವಸ್ಥೆಗೆ ಮುಂದಾಗಿರುವುದು ಸರಿಯಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಬೇಕು. ಚಾಮುಂಡೇಶ್ವರಿ ಸನ್ನಿಧಿಯಲ್ಲಿ ವ್ಯಾಪಾರೀಕರಣ ಮಾಡಬಾರದು. ಭಕ್ತಿಯ ಹೆಸರಿನಲ್ಲಿ ಭಕ್ತರ ದರೋಡೆ ಮಾಡುವ ನಿರ್ಧಾರ ಕೈಬಿಡಬೇಕು ಎಂದು ಅವರು ಆಗ್ರಹಿಸಿದರು.ಆಂಧ್ರದಲ್ಲಿ ರಾಜ್ಯದ ತೋತಾಪುರಿ ಮಾವಿನಕಾಯಿ ನಿಷೇಧ ಖಂಡನಿಯ. ಇದರಿಂದ ರೈತರಿಗೆ ಗಂಭೀರ ಪರಿಸ್ಥಿತಿ ಎದುರಾಗಿದೆ. ಶ್ರೀನಿವಾಸಪುರದಲ್ಲಿ ತೋತಾಪುರಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಆಂಧ್ರದ ತಿರುಪತಿ ದೇವಸ್ಥಾನಕ್ಕೆ ರಾಜ್ಯದ ಶೇ.40 ಜನ ಹೋಗುತ್ತಾರೆ. ಅಲ್ಲಿನ ಲಡ್ಡುಗೆ ನಮ್ಮ ನಂದಿನಿ ತುಪ್ಪ ಕೊಡುತ್ತೇವೆ. ಗಂಧದ ಮರವನ್ನು ಸಹ ಕೊಡುತ್ತಿದ್ದೇವೆ. ಇಷ್ಟಾದರೂ ರಾಜ್ಯದ ಮಾವಿನಹಣ್ಣು ನಿಷೇಧಿಸಿರುವುದು ಸರಿಯಲ್ಲ. ಕೂಡಲೇ ನಿಷೇಧ ವಾಪಸ್ ಪಡೆಯದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.ಎರಡನೇ ಬಾರಿ ಸಿದ್ದರಾಮಯ್ಯ ಸಿಎಂ ಆದ ಮೇಲೆ ಮೊದಲಿದ್ದ ಗತ್ತು ಗಮ್ಮತ್ತು ಇಲ್ಲ. ವೈಯಕ್ತಿಕವಾಗಿ ಒಳ್ಳೆ ಮನುಷ್ಯ. ಆದರೆ ಈಗ ಆಡಳಿತದಲ್ಲಿ ಮೊದಲಿನ ಗತ್ತು ಕಾಣಿಸುತ್ತಿಲ್ಲ. ಸಿದ್ದರಾಮಯ್ಯ ಬಿಟ್ಟರೆ, ಸಿಎಂ ಆಗುವ ವ್ಯಕ್ತಿ ಯಾರು ಇಲ್ಲ. ಇವತ್ತಿನ ಪರಿಸ್ಥಿತಿಗೆ ಸಿದ್ದರಾಮಯ್ಯ ರಾಜ್ಯಕ್ಕೆ ಬೇಕು. ರಾಜಕಾರಣ ಇಂದು ಹಾಳಾಗುತ್ತಿದೆ. ಪರಪ್ಪನ ಅಗ್ರಹಾರದಿಂದ ಕರೆದುಕೊಂಡು ಬಂದು ಆಡಳಿತ ನಡೆಸುತ್ತೀರಾ? ಸಿದ್ದರಾಮಯ್ಯ ಹೋದರೆ ರಾಜ್ಯ ರೌಡಿಗಳ ಕೈ ಸೇರುತ್ತದೆ. ಹೀಗಾಗಿ ಅವರೇ 5 ವರ್ಷ ಸಿಎಂ ಆಗಿರಬೇಕು. ಆರೋಗ್ಯ ಚೆನ್ನಾಗಿದ್ದರೆ ಮುಂದೆಯೂ ಅವರೇ ಆಗಲಿ ಎಂದರು.ಕನ್ನಡಪರ ಹೋರಾಟಗಾರರಾದ ಮೂಗೂರು ನಂಜುಂಡಸ್ವಾಮಿ, ಬಿ.ಎ. ಶಿವಶಂಕರ್, ತೇಜೇಸ್ ಲೋಕೇಶ್‌ ಗೌಡ, ಪಾರ್ಥಸಾರಥಿ, ರಾಧಾಕೃಷ್ಣ ಮೊದಲಾದವರು ಇದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌