ದೈನಂದಿನ ಚಟುವಟಿಕೆಗಳಲ್ಲಿ ಸೂಕ್ಷ್ಮತೆಗೆ ಹೆಚ್ಚು ಗಮನ ನೀಡಿ

KannadaprabhaNewsNetwork | Published : Feb 7, 2025 12:31 AM

ಸಾರಾಂಶ

ಭೇಟಿ ಬಚಾವೋ ಭೇಟಿ ಪಡಾವೋ ಕಾರ್ಯಕ್ರಮದಡಿ ಪಿ.ಸಿ.ಪಿ.ಎನ್‌.ಡಿ.ಟಿ ಕಾಯಿದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೊ ಕಾಯ್ದೆ, ಮಾನವ ಕಳ್ಳ ಸಾಗಣಿಗೆ ಇವುಗಳನ್ನು ನೋಡಿದಾಗ ಮಹಿಳೆಯರೆ ಹೆಚ್ಚು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ

ಕನ್ನಡಪ್ರಭ ವಾರ್ತೆ ಮೈಸೂರುಪ್ರತಿಯೊಬ್ಬರು ದೈನಂದಿನ ಚಟುವಟಿಕೆಗಳಲ್ಲಿ ಸೂಕ್ಷ್ಮತೆಗೆ ಹೆಚ್ಚು ಗಮನ ನೀಡಬೇಕು, ಯಾವುದೇ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹೋದಲ್ಲಿ ನಮ್ಮ ಕಾರ್ಯ ಹಾಗೂ ಚಟುವಟಿಕೆಗಳೊಂದಿಗೆ ಕರ್ತವ್ಯವನ್ನು ಚೆನ್ನಾಗಿ ನಿರ್ವಹಿಸಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ ಉಷಾ ರಾಣಿ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಹೆಚ್ಚು ದೌರ್ಜನ್ಯ:

ಭೇಟಿ ಬಚಾವೋ ಭೇಟಿ ಪಡಾವೋ ಕಾರ್ಯಕ್ರಮದಡಿ ಪಿ.ಸಿ.ಪಿ.ಎನ್‌.ಡಿ.ಟಿ ಕಾಯಿದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೊ ಕಾಯ್ದೆ, ಮಾನವ ಕಳ್ಳ ಸಾಗಣಿಗೆ ಇವುಗಳನ್ನು ನೋಡಿದಾಗ ಮಹಿಳೆಯರೆ ಹೆಚ್ಚು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ಅವರು ಹೇಳಿದರು.ಹೆಣ್ಣು ಮಕ್ಕಳಿಗೆ ಕಡಿಮೆ ವಿದ್ಯಾಭ್ಯಾಸದ ಜೊತೆಗೆ ಗೌರವಯುತವಾಗಿ ಬಾಳಬೇಕು ಎಂಬ ಉದ್ದೇಶದಿಂದ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿದ್ದಾರೆ. ಶಿಕ್ಷಣದಿಂದ ವಂಚಿತರಾದ ಹೆಣ್ಣುಮಕ್ಕಳು ಬೇರೆ ಕಡೆ ಕೆಲಸ ಮಾಡಲು ಹೋಗುತ್ತಿದ್ದಾರೆ. ಅಂತಹ ಕಡೆಗಳಲ್ಲಿ ಹೆಣ್ಣು ಮಕ್ಕಳು ಹೆಚ್ಚು ದೌರ್ಜನ್ಯಕ್ಕೆ ಒಳಗಾಗುತ್ತಿದ್ದು, ಗುಲಾಮಗಿರಿ ಮಾಡುವಂತಹ ದುಸ್ಥಿತಿ ಅವರಿಗೆ ಬರುತ್ತಿದೆ. ಇಂತಹ ದೌರ್ಜನ್ಯಗಳನ್ನು ನಾವು ತೊಡೆದು ಹಾಕಬೇಕು. ಮೊದಲು ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು.ಶಿಕ್ಷಣ ಕೊಡಿಸುವುದರಿಂದ ಇಂತಹ ಪ್ರಕರಣಗಳನ್ನು ಕಡಿಮೆ ಮಾಡಬಹುದು ಎಂದು ಅವರು ತಿಳಿಸಿದರು.

ಕೆಲವು ಮಾರ್ಗಸೂಚಿ:

ಸರ್ವೋಚ್ಚ ನ್ಯಾಯಾಲಯವು ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಲು ಸೊಸೈಟಿ ಫಾರ್‌ ಎಲಿಮೆಂಟ್ಸ್‌ ಅಂಡ್‌ಯೂನಿಯನ್‌ ಆಫ್‌ ಇಂಡಿಯಾ ಎಂಬ ಕೆಲವೊಂದು ಮಾರ್ಗಸೂಚಿ ಹೊರಡಿಸಿದೆ, ರಾಜ್ಯ ಸರ್ಕಾರಗಳಲ್ಲಿ ಜಿಲ್ಲಾ ವಿವಾಹ ರಕ್ಷಣಾಧಿಕಾರಿಗಳನ್ನು ನೇಮಿಸುವಂತಹ ಜವಾಬ್ದಾರಿಯನ್ನು ನೀಡುವುದರ ಜೊತೆ ಬಾಲ್ಯ ವಿವಾಹ ತಡೆಗಟ್ಟುವ ಕೆಲಸವನ್ನು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನೀಡಿದೆ ಎಂದು ಅವರು ಹೇಳಿದರು.

ಈ ಕಾರ್ಯಗಾರದ ಉದ್ದೇಶ ನಮ್ಮೆಲ್ಲರ ಮೇಲಿರುವಂತಹ ಜವಾಬ್ದಾರಿಯನ್ನು ಹೆಚ್ಚು ಮಾಡಿದೆ. ಎಲ್ಲಾ ಜನತೆಗೆ ಇದರ ಉದ್ದೇಶ ಮತ್ತು ಸಂದೇಶವನ್ನು ಕೊಡುತ್ತದೆ. ದೇಶದ ಸಂಪತ್ತಾದ ಮಕ್ಕಳ ಹಕ್ಕುಗಳಿಗೆ ಆಪತ್ತು ಬಾರದಂತೆ ನೋಡಿಕೊಳ್ಳಲು ಕರ್ತವ್ಯವನ್ನು ನಿರ್ಭಿತಿಯಿಂದ ನಿಷ್ಪಕ್ಷಪಾತವಾಗಿ ಸರಾಗವಾಗಿ ನೆರವೇರಿಸಿ ಎಂದು ಅವರು ತಿಳಿಸಿದರು.ಎಎಸ್ಪಿ ನಾಗೇಶ್ ಮತನಾಡಿ, ವಿದ್ಯವಂತರಾಗಿರುವವರೆ ಹೆಚ್ಚು ಮೋಸ ಹೋಗುತ್ತಾ ಇರುವುದರಿಂದ ಈ ಪೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ಬಗ್ಗೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹೆಚ್ಚು ಗಮನ ಕೊಡಬೇಕು. ಸಹಾಯಕ್ಕಾಗಿ ಪೊಲೀಸ್ ಅಧಿಕಾರಿಗಳು ಯಾವಾಗಲೂ ಸಹ ನಿಮ್ಮ ಜೊತೆ ಇರುತ್ತೇವೆ ಎಂದು ಹೇಳಿದರು.

ಡಿಸಿಪಿ ಮುತ್ತುರಾಜ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ಹೆಚ್ಚು ದೌರ್ಜನ್ಯ ನಡೆಯುತ್ತಿದೆ. ಮಕ್ಕಳನ್ನು ಯಾವ ರೀತಿಯಲ್ಲಿ ಮುಟ್ಟುತ್ತಾ ಇದ್ದಾರೆ ಎಂಬ ಅರಿವು ಸಹ ಅವರಲ್ಲಿ ಇರುವುದಿಲ್ಲ ಆದ್ದರಿಂದ ಪೋಷಕರು ಮಕ್ಕಳಿಗೆ ಇಂತಹ ವಿಚಾರಗಳಲ್ಲಿ ತಿಳುವಳಿಕೆ ನೀಡಬೇಕು. ಅವರಿಗೆ ಮನೆಗಳಲ್ಲಿಯೇ ಇಂತಹ ವಿಚಾರಗಳ ಬಗ್ಗೆ ತಿಳಿಸಬೇಕು. ಇದರಲ್ಲಿ ಯಾವುದೇ ತರಹದ ನಾಚಿಕೆ ಎಂಬ ವಿಷಯ ಬರುವುದಿಲ್ಲ ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ ಪೋಷಕರು ಹೆಚ್ಚು ತಿಳಿದುಕೊಳ್ಳಬೇಕು ಎಂದರು.ಜಿಪಂ ಸಿ.ಪಿ.ಒ ಪ್ರಭುಸ್ವಾಮಿ, ಉಪ ಕಾರ್ಯದರ್ಶಿ ಸವಿತಾ, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪ ನಿರ್ದೇಶಕ ಬಸವರಾಜು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನಲ್ ಹಿರಿಯ ವಕೀಲ ಎನ್. ಸುಂದರ್ ರಾಜ್, ಎನ್. ಗೀತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಡಿ.ಜೆ. ಮಮತಾ ಇದ್ದರು.-- ಬಾಕ್ಸ್‌ 1---- ಅರಿವು ಅಗತ್ಯ--

ಜಿಪಂ ಸಿಇಒ ಕೆ.ಎಂ. ಗಾಯತ್ರಿ ಮಾತನಾಡಿ, ಹೆಣ್ಣು ಮಕ್ಕಳ ಮೇಲೆ ಶೋಷಣೆ ಹಲವು ಕಡೆ ಕಡಿಮೆಯಾಗುತ್ತಿವೆ. ಇನ್ನು ಕೆಲವು ಕಡೆ ಜಾಸ್ತಿ ಆಗುತ್ತಿವೆ. ಇದರ ಬಗ್ಗೆ ಅರಿವು ಮೂಡಿಸುವ ಸಲುವಾಗಿ ವಿವಿಧ ಇಲಾಖೆಗಳನ್ನು ಒಳಗೊಂಡಂತೆ ಕಾರ್ಯಾಗಾರ ಏರ್ಪಡಿಸಿದ್ದು, ಇಂತಹ ಕಾರ್ಯಕ್ರಮವನ್ನು ಮಾಡುತ್ತಿರುವ ಉದ್ದೇಶ ಯಾವ ವಿಚಾರಗಳು ಹೆಚ್ಚು ಹೆಚ್ಚು ಚರ್ಚೆಗೆ ಬರುತ್ತವೆ ಆಗ ಮಾತ್ರ ಹೊಸ ವಿಚಾರಗಳು ಹೊಸ ಹೊಸ ಆಯಾಮಗಳು ಹುಟ್ಟಿಕೊಳ್ಳುತ್ತವೆ ಎಂದರು.

ಮಕ್ಕಳಿಗೆ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಎಂಬುವುದರ ಬಗ್ಗೆ ತಿಳಿಸಿಕೊಡಬೇಕು. ಜೊತೆಗೆ ಅವರಿಗೆ ಅರಿವು ಮೂಡಿಸಬೇಕು. ಮಕ್ಕಳಿಗೆ ತಿಳುವಳಿಕೆಯನ್ನು ಮೂಡಿಸುವುದರ ಜೊತೆ ಸ್ವಯಂ ಶಕ್ತಿಯನ್ನು ತುಂಬಬೇಕು ಇದರಿಂದ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವಂತಹ ಸ್ವಯಂ ಶಕ್ತಿಯೂ ಮಕ್ಕಳಲ್ಲಿ ಹೆಚ್ಚಾಗುತ್ತದೆ. ಇದರಿಂದ ಮಕ್ಕಳ ಮೇಲೆ ನಡೆಯುವಂತಹ ದೌರ್ಜನ್ಯದಂತಹ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ಅವರು ತಿಳಿಸಿದರು.-- ಬಾಕ್ಸ್‌ 2-

-- ಕೌನ್ಸಿಲ್‌ ಅಗತ್ಯ--ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಜಿ. ದಿನೇಶ್ ಮಾತನಾಡಿ, ಹದಿಹರೆಯದ ವಯಸ್ಸಿನ ಮಕ್ಕಳಲ್ಲಿ ಏನೆಲ್ಲಾ ಬದಲಾವಣೆ ಆಗುತ್ತಿದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಪ್ರತಿಯೊಂದು ಶಾಲೆಗಳಲ್ಲಿ ಕೌನ್ಸಿಲ್ ನಡೆಯಬೇಕು. ಇಲ್ಲದಿದ್ದರೆ ಶಿಕ್ಷಕರಿಗೆ ಪ್ರಕರಣಗಳ ಬಗ್ಗೆ ಮಾಹಿತಿ ನೀಡಬೇಕು. ಇದರಿಂದ ಶಿಕ್ಷಕರು ಮಕ್ಕಳಿಗೆ ಜಾಗೃತಿಯನ್ನು ಮೂಡಿಸುತ್ತಾರೆ ಎಂದರು.ಪ್ರತಿಯೊಬ್ಬ ಹೆಣ್ಣು ಮಕ್ಕಳು ತಮಗೆ ಇರುವ ಕಾಯ್ದೆಗಳ ಬಗ್ಗೆ ತಿಳಿದುಕೊಂಡು ಅದರ ಉಪಯೋಗವನ್ನು ಪಡೆದುಕೊಂಡು ನಿಮ್ಮನ್ನು ನೀವು ರಕ್ಷಣೆ ಮಾಡಿಕೊಳ್ಳಿ. ಪ್ರತಿಯೊಂದು ಕೆಲಸವನ್ನು ಪ್ರತಿಯೊಂದು ಇಲಾಖೆಯು ನಿರ್ವಹಿಸಬೇಕು. ಬೇರೆ ಇಲಾಖೆಗಳ ಮೇಲೆ ನೆಪ ಹೇಳದೆ ಎಲ್ಲಾ ಇಲಾಖೆಗಳು ಕೈ ಜೋಡಿಸುವುದರಿಂದ ನಾವು ಮಾಡುವಂತಹ ಕೆಲಸಗಳಲ್ಲಿ ಯಶಸ್ಸು ಕಾಣಬಹುದು ಎಂದರು.

Share this article