ಮೈಸೂರು ದಸರೆಗೆ ಈ ಬಾರಿ ಕರಾವಳಿ ಕಂಬಳ ಮೆರುಗು!

KannadaprabhaNewsNetwork |  
Published : Sep 28, 2026, 02:30 AM IST
ಮೈಸೂರು ಕಂಬಳದ ನೋಂದಣಿ ಪತ್ರವನ್ನು ಅನಾವರಣಗೊಳಿಸಿದ ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ | Kannada Prabha

ಸಾರಾಂಶ

ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಸಂದರ್ಭ ಈ ಬಾರಿ ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳ ಆಯೋಜಿಸಲಾಗುತ್ತಿದೆ. ಮೈಸೂರಿನ ಸುಮಾರು ೨೦ ಎಕರೆ ಪ್ರದೇಶದಲ್ಲಿ ‘ವಿಜಯ- ದಶಮಿ’ ಹೆಸರಿನ ಕರೆಯಲ್ಲಿ ಅ.೧೮ ಮತ್ತು ೧೯ರಂದು ಸರ್ಕಾರದ ವತಿಯಿಂದ ಕಂಬಳ ಏರ್ಪಡಲಿದೆ ಎಂದು ಕಂಬಳ ಆಯೋಜನೆಯ ಉಸ್ತುವಾರಿ ವಹಿಸಿರುವ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.

ಮಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಸಂದರ್ಭ ಈ ಬಾರಿ ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳ ಆಯೋಜಿಸಲಾಗುತ್ತಿದೆ. ಮೈಸೂರಿನ ಸುಮಾರು ೨೦ ಎಕರೆ ಪ್ರದೇಶದಲ್ಲಿ ‘ವಿಜಯ- ದಶಮಿ’ ಹೆಸರಿನ ಕರೆಯಲ್ಲಿ ಅ.೧೮ ಮತ್ತು ೧೯ರಂದು ಸರ್ಕಾರದ ವತಿಯಿಂದ ಕಂಬಳ ಏರ್ಪಡಲಿದೆ ಎಂದು ಕಂಬಳ ಆಯೋಜನೆಯ ಉಸ್ತುವಾರಿ ವಹಿಸಿರುವ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.

ಮಂಗಳೂರಿನನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಂಬಳದ ಬಗ್ಗೆ ಅವರು ವಿವರ ನೀಡಿದರು.

ಅ.18 ರಂದು ಬೆಳಗ್ಗೆ ಕಂಬಳಕ್ಕೆ ವಿಧ್ಯುಕ್ತ ಚಾಲನೆ ನೀಡಲಾಗುವುದು. ಸಂಜೆ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಆಹ್ವಾನಿಸಲಾಗುವುದು. ಅ. 19 ರಂದು 12 ಗಂಟೆಯೊಳಗೆ ಕಂಬಳ ಮುಕ್ತಾಯವಾಗಲಿದೆ ಎಂದರು.

ನಗದು, ಚಿನ್ನ ಬಹುಮಾನ:

ಕಂಬಳದಲ್ಲಿ ಭಾಗವಹಿಸುವ ಕೋಣಗಳ ಮಾಲೀಕರಿಗೆ ಸರ್ಕಾರದಿಂದ ಪ್ರೋತ್ಸಾಹ ನೀಡಲು ಈಗಾಗಲೇ ನಿರ್ಧರಿಸಲಾಗಿದೆ. ದೊಡ್ಡ ಜೋಡಿ ಕೋಣಗಳಿಗೆ ೬೫ ಸಾವಿರ ರು. ಹಾಗೂ ಸಣ್ಣ ಜೋಡಿ ಕೋಣಗಳಿಗೆ ೫೦ ಸಾವಿರ ರು. ನೀಡುವ ವ್ಯವಸ್ಥೆ ಮಾಡಲಾಗಿದೆ. ಪ್ರಸಕ್ತ ಸೀನಿಯರ್ ವಿಭಾಗದಲ್ಲಿ ಪ್ರಥಮ ೧೬ ಗ್ರಾಂ, ದ್ವಿತೀಯ ೮ ಗ್ರಾಂ ಚಿನ್ನದ ಬಹುಮಾನ ನೀಡಲಾಗುತ್ತಿತ್ತು. ಇದೀಗ ಕಂಬಳ ಮಾಲೀಕರು ತೃತೀಯ ಮತ್ತು ಚತುರ್ಥ ಬಹುಮಾನವಾಗಿಯೂ ತಲಾ ೮ ಗ್ರಾಂ ಚಿನ್ನ ನೀಡಬೇಕು ಎಂಬ ಬೇಡಿಕೆ ಇರಿಸಿದ್ದಾರೆ. ಈ ಬಗ್ಗೆ ಮೈಸೂರು ದಸರಾ ಸಮಿತಿ ನಿರ್ಧಾರ ಕೈಗೊಳ್ಳಲಿದೆ ಎಂದು ಅಶೋಕ್‌ ರೈ ತಿಳಿಸಿದರು.

ಕೋಣಗಳ ಮಾಲೀಕರಿಗೆ ಮೈಸೂರು ದಸರಾ ಪ್ರಮಾಣಪತ್ರ, ಸ್ಮರಣಿಕೆ ಹಾಗೂ ವಿಶೇಷ ಗೌರವ ನೀಡಲು ತೀರ್ಮಾನಿಸಲಾಗಿದೆ ಎಂದರು.

ಕಂಬಳ‍ ಉಚಿತ ವೀಕ್ಷಣೆಗೆ ಪಾಸ್‌: ಮೈಸೂರು ಕಂಬಳ ವೀಕ್ಷಣೆಗೆ ಪಾಸ್‌ ವ್ಯವಸ್ಥೆ ಕಲ್ಪಿಸಲಾಗಿದ್ದು, ಎಲ್ಲರಿಗೂ ಉಚಿತವಾಗಿಯೇ ವೀಕ್ಷಣೆ ಲಭ್ಯ ಇರಲಿದೆ.

ಕಂಬಳದಲ್ಲಿ ಮೂರು ವೇದಿಕೆಗಳನ್ನು ನಿರ್ಮಿಸಲಾಗುತ್ತಿದ್ದು, ಮುಖ್ಯ ವೇದಿಕೆಯಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು ನಡೆಯಲಿವೆ. ಉಳಿದ ಎರಡು ವೇದಿಕೆಗಳಲ್ಲಿ ಗಣ್ಯರು ಹಾಗೂ ಅತಿಥಿಗಳಿಗಾಗಿ ವಿಶೇಷ ಆಸನ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.

ಕೋಣಗಳನ್ನು ಕರಾವಳಿಯಿಂದ ಮೈಸೂರಿಗೆ ಸುರಕ್ಷಿತವಾಗಿ ಕರೆದೊಯ್ಯಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಅ. ೧೬ರಂದು ಬೆಳಗ್ಗೆ ೧೦.೩೦ಕ್ಕೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಕೋಣಗಳೊಂದಿಗೆ ಪ್ರಯಾಣ ಆರಂಭಿಸಲಿದೆ ಎಂದರು.

೧೫೦ರಿಂದ ೧೬೦ ಕೋಣಗಳ ಆಯ್ಕೆ: ಕಂಬಳದಲ್ಲಿ ಭಾಗವಹಿಸುವ ಕೋಣಗಳ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಸುಮಾರು ೧೫೦ರಿಂದ ೧೬೦ ಕೋಣಗಳನ್ನು ಆಯ್ಕೆ ಮಾಡುವ ಉದ್ದೇಶವಿದೆ. ಕೋಣಗಳಿಗೆ ವಾಸ್ತವ್ಯ, ಆಹಾರ, ತಂಗುವ ಸ್ಥಳ, ನೀರು, ಶೌಚಾಲಯ ಹಾಗೂ ಸ್ನಾನಗೃಹ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ಕಲ್ಪಿಸಲಾಗುತ್ತದೆ. ಕೋಣಗಳ ಸುರಕ್ಷತೆ ಮತ್ತು ಆರೈಕೆಗೆ ವಿಶೇಷ ಗಮನ ನೀಡಲಾಗುತ್ತದೆ ಎಂದರು.28 ಗಂಟೆಗಳ ಕಂಬಳ: ಸುಮಾರು ೪೮ ಗಂಟೆಗಳ ಕಂಬಳ ಇದಾಗಿದ್ದು, ಮೈಸೂರು ಅರಮನೆಯಿಂದ ಆರೇಳು ಕಿ.ಮೀ. ದೂರದ ವಿಶಾಲ ಪ್ರದೇಶದಲ್ಲಿ ಕಂಬಳ ಆಯೋಜನೆಯಾಗುತ್ತಿದೆ. ಕಂಬಳ ನಮ್ಮ ಕರಾವಳಿ ಸಂಸ್ಕೃತಿಯ ಪ್ರತಿಬಿಂಬವಾಗಿ ನಡೆಯಲಿದ್ದು, ರಾಜಮನೆತನಕ್ಕೂ ಈ ಕಂಬಳದ ನಂಟಿದೆ. ಕೋಣಗಳಿಗೆ ಮೈಸೂರಿನ ವಾತಾವರಣ ಪ್ರಸಕ್ತವಾಗಿದೆ ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಅಶೋಕ್ ರೈ ಪ್ರತಿಕ್ರಿಯಿಸಿದರು.

ಮೈಸೂರು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಭೀಮಪ್ಪ ನಾಳಿ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಕ ಅಭಿಯಂತರ ಪದ್ಮನಾಭ್‌, ಪರಿಸರ ಅಭಿಯಂತರ ಮೈತ್ರಿ, ಪಶು ಸಂಗೋಪನ ಇಲಾಖೆ ಸಹಾಯಕ ನಿರ್ದೇಶಕ ಡಾ. ನಂಜೇಶ್, ಹಿರಿಯ ಪಶುವೈದ್ಯಾಧಿಕಾರಿ ಡಾ. ರಮಿತ್, ಕಂಬಳ ಅಕಾಡೆಮಿಯ ಸಂಸ್ಥಾಪಕ ಗುಣಪಾಲ ಕಡಂಬ, ಕಂಬಳ ಅಸೋಸಿಯೇಶನ್ ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ, ಕೋಶಾಕಾರಿ ಲೋಕೇಶ್ ಶೆಟ್ಟಿ, ರಾಜ್ಯ ಕಂಬಳ ಸಮಿತಿ ಪದಾಕಾರಿಗಳಾದ ರೋಹಿತ್ ಹೆಗ್ಡೆ ಎರ್ಮಾಳ್, ಪಿ.ಆರ್. ಶೆಟ್ಟಿ, ಶ್ರೀಕಾಂತ್ ಭಟ್, ಸಂದೀಪ್ ಶೆಟ್ಟಿ, ಚಂದ್ರಹಾಸ ಶೆಟ್ಟಿ ಪುತ್ತೂರು, ಅರುಣ್ ಶೆಟ್ಟಿ, ಕೇಶವ ಭಂಡಾರಿ, ತ್ರಿಶಾಲ್ ಪೂಜಾರಿ ಮತ್ತಿತರರಿದ್ದರು.

ತುಳುನಾಡ ಆಹಾರ, ಸಂಸ್ಕೃತಿ ಅನಾವರಣ

ಕಂಬಳದ ಜೊತೆಗೆ ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಆಹಾರ ಪದಾರ್ಥಗಳು ಹಾಗೂ ತುಳುನಾಡಿನ ಸಂಸ್ಕೃತಿಯನ್ನು ಮೈಸೂರು ದಸರಾ ಪ್ರವಾಸಿಗರಿಗೆ ಪರಿಚಯಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಪಾಸ್ ಇಲ್ಲದವರಿಗೂ ವೀಕ್ಷಿಸಲು ಅವಕಾಶವಿರುವ ಪ್ರತ್ಯೇಕ ವಲಯ ನಿರ್ಮಿಸಲಾಗುತ್ತಿದೆ. ಗಣ್ಯರು, ವಿಐಪಿ ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುತ್ತದೆ.ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೈಸೂರು ದಸರಾದಲ್ಲಿ ಕರಾವಳಿಯ ಜಾನಪದ ಕ್ರೀಡೆಯಾದ ಕಂಬಳಕ್ಕೆ ಅವಕಾಶ ನೀಡಿದ್ದು, ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇವೆ. ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಗೆ ವಿಶೇಷ ಸ್ಥಾನ ಮಾನ ದೊರಕಿದ್ದು, ಇದೀಗ ತುಳುನಾಡು ಕರುನಾಡಿಗೆ ಸಂಬಂಧ ಕಲ್ಪಿಸುವ ಕೊಂಡಿಯಾಗಿ ಕಂಬಳ ನಡೆಯಲಿದೆ.

-ಡಾ.ದೇವಿಪ್ರಸಾದ್‌ ಶೆಟ್ಟಿ ಬೆಳಪು, ಅಧ್ಯಕ್ಷರು, ರಾಜ್ಯ ಕಂಬಳ ಅಸೋಸಿಯೇಶನ್‌ ಸಮಿತಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಜಿಬಿವಿ ಶಾಲೆ ಶೈಕ್ಷಣಿಕ, ಸ್ವಚ್ಛತಾ ವ್ಯವಸ್ಥೆಗೆ ಅಧಿಕಾರಿಗಳ ಮೆಚ್ಚುಗೆ
ನಾಳೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮನೆಗೆ ಮುತ್ತಿಗೆ