ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಹೊಯ್ಸಳ ಭವನದಲ್ಲಿ ಮೈಸೂರು ಕನ್ನಡ ವೇದಿಕೆಯು ಶನಿವಾರ ಆಯೋಜಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕಿತ್ತೂರು ಸಂಸ್ಥಾನದ ವೀರ ರಾಯಣ್ಣನ ಶೌರ್ಯ ಪರಾಕ್ರಮ ಇಂಗ್ಲೆಂಡ್ ನ ಬ್ರಿಟಿಷರ ಆಡಳಿತವನ್ನು ನಿದ್ದೆಗೆಡಿಸುತ್ತದೆ ಎಂದರು.
ರಾಯಣ್ಣನನ್ನು ಸೆರೆ ಹಿಡಿಯಲು ಪ್ರಯತ್ನಿಸುತ್ತಿದ್ದರೆ ಆತನೆ ದೊಡ್ಡ ಸೈನ್ಯವನ್ನು ಕಟ್ಟಿ ಕ್ರಾಂತಿಕಾರಿಯಾಗಿ ಹೋರಾಡುತ್ತಾನೆ. ಹುಟ್ಟಿದ ಕುಲಕ್ಕೆ ನಂದಾ ದೀಪವಾಗಿ, ಕಿತ್ತೂರು ಸಂಸ್ಥಾನಕ್ಕೆ ರಕ್ಷಕನಾಗಿ, ಕನ್ನಡ ನಾಡಿಗೆ ಕೆಚ್ಚೆದೆಯ ವೀರನಾಗಿ, 1857 ಕ್ಕಿಂತ ಮೊದಲು ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣ. ವಿಕ್ಟೋರಿಯ ರಾಣಿಗೆ ಸಿಂಹ ಸ್ವಪ್ನವಾಗಿದ್ದ ವೀರ ಎಂದು ಅವರು ಬಣ್ಣಿಸಿದರು.ಗೆರಿಲ್ಲಾ ಮಾದರಿಯ ಯುದ್ಧ ಮಾಡಿದ ಪ್ರಮುಖರಲ್ಲಿ ಶಿವಾಜಿ ಮಹಾರಾಜ್ ಮತ್ತು ಸಂಗೊಳ್ಳಿ ರಾಯಣ್ಣ. ಭಾರತದಂತಹ ದೊಡ್ಡ ದೇಶಕ್ಕೆ ದೇಶಭಕ್ತಿ, ನಾಡಿನ ಪ್ರೇಮ, ಸಮಾನತೆ, ಸ್ವಾತಂತ್ರವನ್ನು ಯುವಜನಾಂಗದಲ್ಲಿ ಉಳಿಸಿ ಬೆಳೆಸಬೇಕಾದರೆ ನಮಗೆ ಸಂಗೊಳ್ಳಿ ರಾಯಣ್ಣನ ಚರಿತ್ರೆ ಮುಖ್ಯ. ಜನವರಿ 26, 1831 ರಂದು ಗಲ್ಲಿಗೇರಿಸಿದ 10 ನಿಮಿಷದ ನಂತರ ಮದ್ರಾಸಿನ ಈಸ್ಟ್ ಇಂಡಿಯಾ ಕಂಪನಿಯಿಂದ ಒಂದು ಪತ್ರ ಬರುತ್ತದೆ, ರಾಯಣ್ಣ ಸಿಕ್ಕರೆ ಆತನನ್ನು ಕೊಲ್ಲದೆ ಗೌರವಯುತವಾಗಿ ಸೆರೆ ಹಿಡಿದು ಆತನನ್ನು ಗೌರವಯುತವಾಗಿ ನೋಡಿಕೊಳ್ಳಬೇಕು ಎಂದು. ಇಂತಹ ವೀರನನ್ನು ಬ್ರಿಟಿಷರು ಕೊಂದರು ಎಂದರೆ ಈ ಭಾರತ ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಬರೆದಿರುತ್ತದೆ. ಇದು ಸಂಗೊಳ್ಳಿ ರಾಯಣ್ಣ ಶೌರ್ಯ ಪರಾಕ್ರಮ ಎಂದು ಅವರು ತಿಳಿಸಿದರು.
ನಿವೃತ್ತ ಯೋಧ ಬಿದ್ದಪ್ಪ, ಕ್ಯಾತನಹಳ್ಳಿ ಪ್ರಕಾಶ್, ಮೈಸೂರು ಕನ್ನಡ ವೇದಿಕೆಯ ಅಧ್ಯಕ್ಷ ಎಸ್. ಬಾಲಕೃಷ್ಣ, ಬಸವಣ್ಣ, ನಾಲಾಬೀದಿ ರವಿ ಮೊದಲಾದವರು ಇದ್ದರು.