ವಿಶೇಷ ವರದಿ ಕನ್ನಡಪ್ರಭ ವಾರ್ತೆ ಕುಶಾಲನಗರ
ಮೈಸೂರು-ಕೊಡಗು ಚತುಷ್ಪಥ ರಸ್ತೆಗೆ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದ್ದು ಕೆಲವು ಹಂತಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಕಾಮಗಾರಿ ಆರಂಭವಾಗಲಿದೆ.ಭಾರತಮಾಲಾ ಪರಿಯೋಜನಾ ಹಂತ-1 ಕಾರ್ಯಕ್ರಮದಡಿ ನಿರ್ಮಿಸಲು ಯೋಜಿಸಿರುವ ಚತುಷ್ಪಥ ರಸ್ತೆ ಕಾಮಗಾರಿಗೆ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಶಂಕು ಸ್ಥಾಪನೆ ನೆರವೇರಿಸಿದ್ದರು.
ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ಪ್ರಾರಂಭವಾಗಿ ಕುಶಾಲನಗರ ಸಮೀಪದ ಗುಡ್ಡೆಹೊಸೂರು ಬಸವನಹಳ್ಳಿ ಬಳಿ ಒಟ್ಟು 92.3 ಕಿ.ಮೀ. ಉದ್ದದ 4,129 ಕೋಟಿ ರು. ವೆಚ್ಚದ ಈ ಮೆಗಾ ಯೋಜನೆಯ ಟೆಂಡರ್ ಪ್ರಕ್ರಿಯೆ ಈಗಾಗಲೇ ಮುಕ್ತಾಯವಾಗಿದ್ದು ಭೂಸ್ವಾಧೀನ ಸೇರಿದಂತೆ ಪ್ರಾಥಮಿಕ ಕೆಲಸಗಳು ಆರಂಭಗೊಂಡಿವೆ.ನಾಲ್ಕು ಹಂತಗಳಿಗೆ ಟೆಂಡರ್: ಒಟ್ಟು 5 ಹಂತಗಳನ್ನೊಳಗೊಂಡಿರುವ ಈ ಯೋಜನೆಯಲ್ಲಿ ಮಡಿಕೇರಿಯಿಂದ ಶ್ರೀರಂಗಪಟ್ಟಣದ ವರೆಗೆ ಪ್ರತ್ಯೇಕ ಚತುಷ್ಪಥ ಹೆದ್ದಾರಿ ನಿರ್ಮಿಸುವ ಗುರಿ ಹೊಂದಲಾಗಿದೆ. ಮೊದಲಿಗೆ ಶ್ರೀರಂಗಪಟ್ಟಣದಿoದ ಕುಶಾಲನಗರದ ಬಸವನಹಳ್ಳಿವರೆಗೆ 92.3 ಕಿ.ಮೀ. ರಸ್ತೆ ನಿರ್ಮಾಣವಾಗಲಿದ್ದು, ಇದನ್ನು ನಾಲ್ಕು ಹಂತಗಳಾಗಿ ವಿಂಗಡಿಸಲಾಗಿದೆ. ಮತ್ತೊಂದು ಹಂತದಲ್ಲಿ ಬಸವನಹಳ್ಳಿಯಿಂದ ಮಡಿಕೇರಿ ವರೆಗೆ ಎರಡನೇ ಹಂತದ ರಸ್ತೆ ನಿರ್ಮಾಣ ಕಾರ್ಯ ನಡೆಯಲಿದೆ. ಈಗಾಗಲೇ ಮೊದಲ 4 ಹಂತಗಳಿಗೆ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದ್ದು, ಗುತ್ತಿಗೆ ಪಡೆದ ಸಂಸ್ಥೆಗಳು ಕಾಮಗಾರಿ ಆರಂಭಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ನಡೆಸಿಕೊಂಡಿವೆ. ಭೂಸ್ವಾದೀನ ಪ್ರಕ್ರಿಯೆ ಪೂರ್ಣಗೊಳ್ಳುತ್ತಲೇ ರಸ್ತೆ ಕಾಮಗಾರಿಯೂ ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದೆ.
ಮೊದಲ 4 ಹಂತಗಳು ಯಾವುವು:? ಒಟ್ಟು 5 ಹಂತಗಳ ಕಾಮಗಾರಿಯನ್ನು ಪಿ1, ಪಿ2 ಹೀಗೆ ಪಿ5 ವರೆಗೆ ಗುರುತಿಸಲಾಗಿದ್ದು, ಪಿ1 ಮಡಿಕೇರಿಯಿಂದ ಬಸವನಹಳ್ಳಿ ವರೆಗಿನ ಕಾಮಗಾರಿಯಾಗಿದೆ. ಈ ಕಾಮಗಾರಿಗೆ ಇನ್ನಷ್ಟೇ ಟೆಂಡರ್ ಪ್ರಕ್ರಿಯೆ ನಡೆಯಬೇಕಿದೆ .ಕುಶಾಲನಗರದಿಂದ ಶ್ರೀರಂಗಪಟ್ಟಣದ ವರೆಗೆ ಕಾಮಗಾರಿ ಮುಕ್ತಾಯವಾದ ಬಳಿಕ ಪಿ1 ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ.
ಅದರಂತೆ, ಪಿ-5 ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಿಂದ ಇಲವಾಲ ಕೆ.ಆರ್ ನಗರ ರಸ್ತೆ ಜಂಕ್ಷನ್ 18.98 ಕಿ.ಮೀ ವರೆಗಿನ ಕಾಮಗಾರಿಯಾಗಿದೆ. ಈ ಕಾಮಗಾರಿಯ ಟೆಂಡರನ್ನು ಸಂಸ್ಥೆಯೊದು 690.30 ಕೋಟಿ ರು.ಗಳಿಗೆ ಪಡೆದುಕೊಂಡಿದೆ. ಪಿ-4 ಇಲವಾಲ ಕೆ.ಆರ್‌ನಗರ ಜಂಕ್ಷನ್‌ನಿಂದ ಹುಣಸೂರು ಕೆ.ಆರ್‌ನಗರ ರಸ್ತೆ ಜಂಕ್ಷನ್ ವರೆಗಿನ 26.5 ಕಿ.ಮೀ ರಸ್ತೆಯಾಗಿದ್ದು ಈ ಕಾಮಗಾರಿಯ ಟೆಂಡರ್ ಅದೇ ಸಂಸ್ಥೆ 650 ಕೋಟಿ ರು.ಗೆ ಪಡೆದಿದೆ.ಪಿ-3 ಕಾಮಗಾರಿಯು ಹುಣಸೂರು ಕೆ.ಆರ್‌ನಗರ ರಸ್ತೆ ಜಂಕ್ಷನ್ ನಿಂದ ಪಿರಿಯಾಪಟ್ಟಣ-ಹಾಸನ ರಸ್ತೆಯ ಹೆಮ್ಮಿಗೆ ಗ್ರಾಮದ ವರೆಗಿನ 24.1 ಕಿ.ಮೀ ಆಗಿದ್ದು, ಈ ಕಾಮಗಾರಿಯನ್ನು 575 ಕೋಟಿ ರು.ಗೆ ಮತ್ತೊಂದು ಸಂಸ್ಥೆ ಗುತ್ತಿಗೆ ಪಡೆದಿದೆ. ಪಿ-2 ಕಾಮಗಾರಿ ಪಿರಿಯಾಪಟ್ಟಣದ ಹಾಸನ ರಸ್ತೆ ಜಂಕ್ಷನ್‌ನಿoದ 22.7 ಕಿ.ಮೀ ಸಾಗಿ ಕುಶಾಲನಗರದ ಗುಡ್ಡೆಹೊಸೂರು ಸಮೀಪ ಬಸವನಹಳ್ಳಿ ಬಳಿ ತಲುಪಲಿದೆ. ಈ ಕಾಮಗಾರಿಯ ಟೆಂಡರನ್ನು ಸಂಸ್ಥೆ ಯೊಂದು 585.84 ಕೋಟಿ ರು.ಗಳಿಗೆ ಪಡೆದುಕೊಂಡಿದೆ.ವಿಸ್ತರಣೆಯಲ್ಲ, ಇದು ಹೊಸ ರಸ್ತೆ: ಈ ಹಿಂದೆ ರಾಷ್ಟಿಯ ಹೆದ್ದಾರಿ 275 ಅನ್ನು ಎರಡೂ ಬದಿಗಳಲ್ಲಿ ವಿಸ್ತರಿಸುವ ಯೋಜನೆ ಇತ್ತು. ಎನ್‌ಎಚ್ 275 ನ್ನು ಅಗಲಗೊಳಿಸಬೇಕಾದರೆ, ಆರ್‌ಎಂಪಿ ಮತ್ತು ಅರಣ್ಯ ಇಲಾಖೆ ಭೂಮಿಯನ್ನು ನೀಡಬೇಕು. ಇದು ದೀರ್ಘಾವಧಿ ಪ್ರಕ್ರಿಯೆಯಾಗಿರುವುದರಿಂದ ಈಗಿರುವ ರಸ್ತೆಯ ಅಗಲೀಕರಣ ಯೋಜನೆ ಕೈಬಿಡಲಾಗಿದೆ. ಇದರ ಬದಲು ಸಂಪೂರ್ಣ ಹೊಸ ಎಕ್ಸ್‌ಪ್ರೆಸ್ ವೇ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈ ರಸ್ತೆಯು ಕೆಲವು ಕಡೆಗಳಷ್ಟೇ ರಾಷ್ಟ್ರೀಯ ಹೆದ್ದಾರಿ 275 ರ ಸಂಪರ್ಕಕ್ಕೆ ಬರಲಿದ್ದು, ಉಳಿದಂತೆ ಎಲ್ಲಾ ಪ್ರಮುಖ ಪಟ್ಟಣಗಳಲ್ಲಿಯೂ ಬೈಪಾಸ್ ಆಗಿ ಹಾದು ಹೋಗುವ ಸಂಪೂರ್ಣ ಹೊಸ ರಸ್ತೆಯಾಗಿದೆ.
ಎಲ್ಲಿಂದ ಎಲ್ಲಿಯವರೆಗೆ?: ಕುಶಾಲನಗರದ ಗುಡ್ಡೆಹೊಸೂರು - ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿ: ಟ್ಟು ಯೋಜನಾ ವೆಚ್ಚ: 4,129 ಕೋಟಿ ರು., ಒಟ್ಟು ಉದ್ದ : 92.3 ಕಿ.ಮೀ, ಪೂರ್ಣಗೊಳಿಸುವ ಗುರಿ: 2026.ಮೈಸೂರು-ಕೊಡಗು ಚತುಷ್ಪಥ ಎಕ್ಸ್‌ಪ್ರೆಸ್ ವೇ ಒಟ್ಟು 5 ಹಂತಗಳ ಯೋಜನೆಯಾಗಿದ್ದು, ಸದ್ಯ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಿಂದ ಕುಶಾಲನಗರದ ಗುಡ್ಡೆಹೊಸೂರಿನ ವರೆಗೆ 4 ಹಂತಗಳ ಕಾಮಗಾರಿ ನಡೆಯಲಿದೆ. ಈ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಈಗಾಗಲೇ ಮುಕ್ತಾಯವಾಗಿದ್ದು , ಭೂಸ್ವಾಧೀನ ಪೂರ್ಣಗೊಂಡು ಪ್ರಾಥಮಿಕ ಹಂತದ ಕಾಮಗಾರಿ ನಡೆದಿದೆ. ಇದಕ್ಕಾಗಿ ಗುತ್ತಿಗೆದಾರರು ಈಗಾಗಲೇ ಸಾಮಾಗ್ರಿಗಳ ದಾಸ್ತಾನು, ಲೇಬರ್ ಕ್ಯಾಂಪ್ ಕೂಡಾ ಮಾಡಿಕೊಂಡಿದ್ದಾರೆ ಎಂದು ರಾ.ಹೆ. ಮಡಿಕೇರಿ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಜಿ.ಎಚ್.ಗಿರೀಶ್ ಹೇಳಿದರು.