ಕನ್ನಡಪ್ರಭ ವಾರ್ತೆ ಮಡಿಕೇರಿ
ಮೈಸೂರು-ಕುಶಾಲನಗರ ನಡುವಿನ ರಸ್ತೆಯನ್ನು ನಾಲ್ಕು ಪಥದ ರಸ್ತೆಯಾಗಿ ಅಭಿವೃದ್ಧಿಗೊಳಿಸಲಾಗುತ್ತದೆ. ಸುಮಾರು 4130 ಕೋಟಿ ರು.ಗಳ ಯೋಜನೆ ಇದಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಯೋಜನೆಗೆ 2023ರ ಮಾರ್ಚ್ 12 ರಂದು ಶಂಕುಸ್ಥಾಪನೆ ಮಾಡಿದ್ದರು. ಆದರೆ ಇನ್ನೂ ಸಹ ಕಾಮಗಾರಿ ಆರಂಭವಾಗಿಲ್ಲ. ಈ ಯೋಜನೆ ಕುರಿತು ಈಗ ಮಾಜಿ ಸಂಸದ ಪ್ರತಾಪ್ ಸಿಂಹ ಮಾಹಿತಿ ನೀಡಿದ್ದಾರೆ.ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ, ಬೆಂಗಳೂರಿನ ಅರಣ್ಯ ಭವನದಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ಕುಮಾರ್ ದೀಕ್ಷಿತ್ ಅವರನ್ನು ಭೇಟಿ ಮಾಡಿದರು. ಮೈಸೂರು-ಕುಶಾಲನಗರ ನಡುವಿನ ರಸ್ತೆ ಯೋಜನೆ, ಅರಣ್ಯ ಇಲಾಖೆಯಿಂದ ಸಿಗಬೇಕಿರುವ ಒಪ್ಪಿಗೆ ಕುರಿತು ಚರ್ಚೆಯನ್ನು ನಡೆಸಿದ್ದಾರೆ.
ಬಳಿಕ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಪ್ರತಾಪ್ ಸಿಂಹ, ಯೋಜನೆ ಕುರಿತು ಮಾಹಿತಿ ನೀಡಿದ್ದಾರೆ. ಈ ರಸ್ತೆ ಯೋಜನೆಗೆ ಅರಣ್ಯ ಇಲಾಖೆ ವತಿಯಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ ಶೀಘ್ರವೇ ಸಿಗಲಿದೆ ಎಂದು ಹೇಳಿಕೊಂಡಿರುವ ಅವರು ರಸ್ತೆ ಕಾಮಗಾರಿ ಸಹ ಬೇಗನೇ ಆರಂಭವಾಗುವ ನಿರೀಕ್ಷೆ ಇದೆ ಎಂದಿದ್ದಾರೆ.ಪ್ರತಾಪ್ ಸಿಂಹ ಪೋಸ್ಟ್‌ನಲ್ಲಿ ಏನಿದೆ?
ರಾಷ್ಟ್ರೀಯ ಹೆದ್ದಾರಿ -275ರ ಮೈಸೂರು - ಕುಶಾಲನಗರ ಭಾಗದ 93 ಕಿ.ಮೀ. ಉದ್ದದ ರಸ್ತೆ ಕಾಮಗಾರಿಯ ಯೋಜನೆಯನ್ನು 4 ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿದೆ ಮತ್ತು ಈ 4 ಪ್ಯಾಕೇಜ್‌ಗಳನ್ನು 2023ರಲ್ಲಿ ನನ್ನ ಅಧಿಕಾರಾವಧಿಯಲ್ಲಿ 4126 ಕೋಟಿ ರು. ವೆಚ್ಚದಲ್ಲಿ ಮಂಜೂರು ಮಾಡಲಾಗಿತ್ತು ಮತ್ತು ಈ ನಾಲ್ಕು ಪ್ಯಾಕೇಜ್‌ಗಳಿಗೆ ಪ್ರಧಾನ ಮಂತ್ರಿಗಳು ಮಂಡ್ಯದಲ್ಲಿ ಶಿಲಾನ್ಯಾಸ ಮಾಡಿದ್ದರು. ಸದರಿ ಕಾಮಗಾರಿಗೆ ಸಂಬಂಧಿಸಿದಂತೆ ಭೂಸ್ವಾಧೀನದ ಪ್ರಕ್ರಿಯೆಯು ಪ್ರಗತಿಯಲ್ಲಿದ್ದು, ಪ್ಯಾಕೇಜ್ -2ರಲ್ಲಿ ಸುಮಾರು ಶೇ.84, ಪ್ಯಾಕೇಜ್-3ರಲ್ಲಿ ಸುಮಾರು ಶೇ.80, ಪ್ಯಾಕೇಜ್-4ರಲ್ಲಿ ಸುಮಾರು ಶೇ.70 ಮತ್ತು ಪ್ಯಾಕೇಜ್-5ರಲ್ಲಿ ಸುಮಾರು ಶೇ.84 ಕಾಮಗಾರಿಯನ್ನು ಕೈಗೊಳ್ಳಲು ಭೂಮಿ ಲಭ್ಯವಿರುತ್ತದೆ, ಆದರೆ ಕಾಮಗಾರಿಯನ್ನು ಪ್ರಾರಂಭಿಸಲು ಅರಣ್ಯ ಇಲಾಖೆ ವತಿಯಿಂದ ನಿರಾಕ್ಷೇಪಣಾ ಪ್ರಮಾಣ ಪತ್ರದ ಅಗತ್ಯವಿರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಗುರುವಾರ ನಾನು ಬೆಂಗಳೂರಿನಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಬ್ರಿಜೇಶ್ ಕುಮಾರ್ ದೀಕ್ಷಿತ್ ಅವರನ್ನು ಖುದ್ದು ಭೇಟಿ ಮಾಡಿ, ಮೈಸೂರು ಮತ್ತು ಕೊಡಗು ಜನರಿಗೆ ಅನುಕೂಲವಾಗುವಂತೆ ಮತ್ತು ಮಂಗಳೂರಿನ ಬಂದರು ಸಂಪರ್ಕವನ್ನು ಸುಧಾರಿಸುವ ಮತ್ತು ಶಿರಾಡಿ ಘಾಟ್‌ನ ರಸ್ತೆ ಮುಚ್ಚುವ ಸಮಯದಲ್ಲಿ ಪರ್ಯಾಯ ಮಾರ್ಗ ಸಂಪರ್ಕವನ್ನು ಒದಗಿಸುವ ಮೈಸೂರು - ಕುಶಾಲನಗರ ನಡುವಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಕೈಗೊಳ್ಳಲು ಅನುಗುಣವಾಗಿ ಅರಣ್ಯ ಇಲಾಖೆ ವತಿಯಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ ತುರ್ತಾಗಿ ನೀಡುವಂತೆ ಕೋರಿ ಮನವಿ ಮಾಡಲಾಯಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಕೂಡಲೇ ಅನುಮೋದನೆ ನೀಡುವ ಭರವಸೆ ನೀಡಿದ್ದಾರೆ.