ಪಾಸ್‌ಪೋರ್ಟೇ ಇಲ್ಲದಿದ್ದರೂ ಮೈಸೂರಿನಲ್ಲಿದ್ದ ಅಮೆರಿಕನ್‌!

Published : Jul 17, 2026, 07:08 AM IST
arrest

ಸಾರಾಂಶ

ಪ್ರಯಾಣ ದಾಖಲೆಗಳಿಲ್ಲದೆ ಭಾರತದಿಂದ ನೇಪಾಳಕ್ಕೆ ಪ್ರವೇಶಿಸಲು ಯತ್ನಿಸುತ್ತಿದ್ದ ಅಮೆರಿಕದ ಪ್ರಜೆ ಜೋರ್ಡಾನ್‌ ಬ್ರೌನ್‌ (36) ಎಂಬಾತನನ್ನು ಇತ್ತೀಚೆಗೆ ಉತ್ತರ ಪ್ರದೇಶದ ಮಹಾರಾಜ್‌ ಗಂಜ್‌ ಪೊಲೀಸರು ಬಂಧಿಸಿದ್ದಾರೆ.

 ನವದೆಹಲಿ: ಪ್ರಯಾಣ ದಾಖಲೆಗಳಿಲ್ಲದೆ ಭಾರತದಿಂದ ನೇಪಾಳಕ್ಕೆ ಪ್ರವೇಶಿಸಲು ಯತ್ನಿಸುತ್ತಿದ್ದ ಅಮೆರಿಕದ ಪ್ರಜೆ ಜೋರ್ಡಾನ್‌ ಬ್ರೌನ್‌ (36) ಎಂಬಾತನನ್ನು ಇತ್ತೀಚೆಗೆ ಉತ್ತರ ಪ್ರದೇಶದ ಮಹಾರಾಜ್‌ ಗಂಜ್‌ ಪೊಲೀಸರು ಬಂಧಿಸಿದ್ದಾರೆ. ಈತನ ಬಳಿ ಪಾಸ್‌ಪೋರ್ಟ್‌ ಆಗಲಿ, ವೀಸಾ ಆಗಲಿ ಇಲ್ಲ. ಸಮುದ್ರ ಮಾರ್ಗದಿಂದ ಭಾರತಕ್ಕೆ ಬಂದಿದ್ದ ಎಂಬ ಈತ ಬೆಂಗಳೂರು ಹಾಗೂ ಮೈಸೂರಿಗೂ ಆಗಮಿಸಿದ್ದ. ಬೆಂಗಳೂರಲ್ಲಿ 1 ದಿನ ಹಾಗೂ ಮೈಸೂರಲ್ಲಿ 55 ದಿನ ತಂಗಿದ್ದ ಎಂದು ವಿಚಾರಣೆ ವೇಳೆ ಗೊತ್ತಾಗಿದೆ!

ತನ್ನನ್ನು ತಾನು ಅಮೆರಿಕ ನೌಕಾಪಡೆ ಹಾಗೂ ವಿಶೇಷ ಪಡೆಯ ಮಾಜಿ ಸಿಬ್ಬಂದಿ ಎಂದು ಹೇಳಿಕೊಂಡಿರುವ ಆತನ ಭಾರತ ಪ್ರವೇಶಿಸಿದ ರೀತಿಯೇ ತನಿಖಾ ಸಂಸ್ಥೆಗಳನ್ನು ದಂಗಾಗಿಸಿದೆ. ಆತ ತನ್ನ ಪ್ರಯಾಣದ ಬಗ್ಗೆ ವಿವರಿಸುತ್ತಾ, ‘ನಾನು ಪ್ರವಾಸಿ ವೀಸಾದ ಮೇಲೆ ಥಾಯ್ಲೆಂಡ್‌ಗೆ ಹೋಗಿದ್ದೆ. ಅಲ್ಲಿ ನನ್ನ ಪಾಸ್‌ಪೋರ್ಟ್ ಕಳೆದುಹೋಯಿತು. ನಂತರ ಅಲ್ಲಿಂದ ಸಮುದ್ರ ಮಾರ್ಗವಾಗಿ ಶ್ರೀಲಂಕಾಕ್ಕೆ ತಲುಪಿ, ಅಲ್ಲಿಂದ 2025ರ ನವೆಂಬರ್ 2ರಂದು ಸಮುದ್ರ ಮಾರ್ಗದ ಮೂಲಕವೇ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದೆ. ಬಳಿಕ ಗೋವಾದಲ್ಲಿದ್ದೆ’ ಎಂದು ತಿಳಿಸಿದ್ದಾನೆ.

ಮೈಸೂರು, ಬೆಂಗಳೂರಲ್ಲೂ ವಾಸ:

ಮೂಲಗಳ ಪ್ರಕಾರ, ಬ್ರೌನ್ 2025ರ ನ.2ರಂದು ಭಾರತ ಪ್ರವೇಶಿಸಿದ ಬಳಿಕ 2026ರ ಮೇ 7ರವರೆಗೆ ಗೋವಾದ ಕಾಣಕೋಣದಲ್ಲಿ ಉಳಿದುಕೊಂಡಿದ್ದ. ಬಳಿಕ ಕರ್ನಾಟಕದ ಮೈಸೂರಿಗೆ ಪ್ರಯಾಣ ಬೆಳೆಸಿದ. ಅಲ್ಲಿ ಮೇ 14ರಿಂದ ಜುಲೈ 7ರವರೆಗೆ (55 ದಿನ) ಇದ್ದ. ನಂತರ ಜುಲೈ 8ರಂದು ಬೆಂಗಳೂರಿಗೆ ಮತ್ತು ಜುಲೈ 9ರಂದು ಹೈದರಾಬಾದ್‌ಗೆ ತೆರಳಿದ. ಜುಲೈ 10ರಂದು ಮಧ್ಯಪ್ರದೇಶದ ಬಂದೋಲ್, ಸಿಯೋನಿ ಮೂಲಕ ಪ್ರಯಾಣಿಸಿ ನಂತರ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ ತಲುಪಿದ. ನಂತರ ನೇಪಾಳ ಗಡಿಗೆ ತೆರಳಿದ್ದ.

ಸಿನಿಮೀಯ ಚೇಸ್‌, ಬಂಧನ:

ಜುಲೈ 11ರಂದು ಉ.ಪ್ರದೇಶ-ನೇಪಾಳ ಗಡಿಯ ಸೋನೌಲಿ ಗಡಿಯ ಮೂಲಕ ನೇಪಾಳಕ್ಕೆ ಹೋಗಲು ಯತ್ನಿಸುತ್ತಿದ್ದಾಗ, ನಿಯಮಿತ ತಪಾಸಣೆಯ ವೇಳೆ ಎಸ್‌ಎಸ್‌ಬಿ (ಸೀಮಾ ಸುರಕ್ಷಾ ಬಲ) ಸಿಬ್ಬಂದಿ ಆತನನ್ನು ತಡೆದಿದ್ದಾರೆ. ಈ ವೇಳೆ ಆತ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಕಿಲೋಮೀಟರ್‌ಗಟ್ಟಲೆ ಚೇಸ್ ಬಳಿಕ ಆತನನ್ನು ಸೆರೆಹಿಡಿದಿದ್ದಾರೆ. ಆತನ ಬಳಿ ಆಗ 31 ಸಾವಿರ ರು. ನಗದು ಸಿಕ್ಕಿದೆ. ಯಾವುದೇ ಪ್ರಯಾಣ ದಾಖಲೆ ಇರಲಿಲ್ಲ.

ಕಾನೂನು ಕ್ರಮ ಮತ್ತು ತನಿಖೆ:

ಮಹಾರಾಜ್‌ಗಂಜ್‌ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಮಾತನಾಡಿ, ‘ಜೋರ್ಡಾನ್ ಬ್ರೌನ್ ಬಳಿ ಯಾವುದೇ ಮಾನ್ಯವಾದ ವೀಸಾ ಅಥವಾ ಪ್ರಯಾಣ ದಾಖಲೆಗಳು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಅಕ್ರಮ ಪ್ರವೇಶ ಪ್ರಕರಣ ದಾಖಲಿಸಲಾಗಿದೆ. ಪ್ರಸ್ತುತ ಅಮೆರಿಕ ಪ್ರಜೆಯ ಹೇಳಿಕೆಗಳನ್ನು ಭದ್ರತಾ ಏಜೆನ್ಸಿಗಳು ಮತ್ತು ಗುಪ್ತಚರ ಇಲಾಖೆಯು ಕೂಲಂಕಷವಾಗಿ ಪರಿಶೀಲಿಸುತ್ತಿದೆ. ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿರುವುದು ದೇಶದ ಭದ್ರತೆಯ ದೃಷ್ಟಿಯಿಂದ ಗಂಭೀರ ವಿಚಾರವಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ’ ಎಂದಿದ್ದಾರೆ.

ಯಾರು ಈ ಭೂಪ?

- ಪ್ರವಾಸಿ ವೀಸಾದ ಮೇಲೆ ಥಾಯ್ಲೆಂಡ್‌ಗೆ ಹೋಗಿದ್ದ ಅಮೆರಿಕದ ಜೋರ್ಡಾನ್‌ ಬ್ರೌನ್‌ ಅಲ್ಲಿ ಪಾಸ್‌ಪೋರ್ಟ್‌ ಕಳೆದುಕೊಂಡಿದ್ದ

- ಸಮುದ್ರ ಮಾರ್ಗವಾಗಿ ಲಂಕಾಕ್ಕೆ ತೆರಳಿ, ಅಲ್ಲಿಂದ ಜಲಮಾರ್ಗದ ಮೂಲಕ ಭಾರತಕ್ಕೆ ನುಸುಳಿ ಗೋವಾದಲ್ಲಿ ಉಳಿದಿದ್ದ

- ಮೈಸೂರಿನಲ್ಲಿ 55 ದಿನ, ಬೆಂಗಳೂರಿನಲ್ಲಿ 1 ದಿನ ಇದ್ದು, ಬಳಿಕ ಹೈದರಾಬಾದ್‌ಗೆ ಹೋಗಿ ಬೇರೆ ಬೇರೆ ಊರುಗಳ ಸುತ್ತಿದ್ದ

- ಇದೀಗ ಉತ್ತರಪ್ರದೇಶ ಗಡಿ ಮೂಲಕ ನೇಪಾಳಕ್ಕೆ ಹೋಗುವಾಗ ಭದ್ರತಾ ಸಿಬ್ಬಂದಿ ತಪಾಸಣೆ. ತಪ್ಪಿಸಿಕೊಳ್ಳಲು ಯತ್ನ

- ಚೇಸ್‌ ಮಾಡಿ ಸೆರೆ ಹಿಡಿದ ಸೀಮಾ ಸುರಕ್ಷಾ ಸಿಬ್ಬಂದಿ. ವಿಚಾರಣೆ ವೇಳೆ ತನ್ನ ವೃತ್ತಾಂತವನ್ನು ಬಯಲು ಮಾಡಿದ ಬ್ರೌನ್‌

PREV
Stay updated with the latest news from Mysore News (ಮೈಸೂರು ಸುದ್ದಿ) — including local governance, city/civic developments, tourism and heritage, culture and festivals, crime reports, environment, education, business and community events from Mysore district and city on Kannada Prabha News.
Read more Articles on

Recommended Stories

ಕೌಟಿಲ್ಯ ರಘು ಸಾಕ್ಷ್ಯಗಳನ್ನಿಟ್ಟು ಮಾತನಾಡಲಿ: ಸುಬ್ರಹ್ಮಣ್ಯ ಸವಾಲು
19ಕ್ಕೆ ನಂಜನಗೂಡಿಲ್ಲಿ ಫೈಲಟ್‌ ಪ್ರಾಜೆಕ್ಟ್‌ಗೆ ಚಾಲನೆ