;Resize=(412,232))
ಮೈಸೂರು : ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಬುಧವಾರವೇ ಮೈಸೂರಿಗೆ ಆಗಮಿಸಿದ್ದ ಗಜಪಡೆಯನ್ನು ಶುಕ್ರವಾರ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಅರಮನೆಗೆ ಬರಮಾಡಿಕೊಳ್ಳಲಾಯಿತು.
ವಿವಿಧ ಆನೆ ಶಿಬಿರಗಳಿಂದ ಆಗಮಿಸಿದ ಧನಂಜಯ, ಮಹೇಂದ್ರ, ಏಕಲವ್ಯ, ಶ್ರೀಕಂಠ, ಪ್ರಶಾಂತ, ಶ್ರೀರಾಮ, ಗೋಪಿ, ಕಾವೇರಿ ಹಾಗೂ ಲಕ್ಷ್ಮೀ ಆನೆಗಳಿಗೆ ಚಾಮುಂಡಿಬೆಟ್ಟದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್, ಅರ್ಚಕ ಪ್ರಹ್ಲಾದ್ ರಾವ್ ಪೂಜೆ ಸಲ್ಲಿಸಿದರು. ಶುಕ್ರವಾರ ಬೆಳಗ್ಗೆ 9.52ರಿಂದ 10.19ರೊಳಗೆ ಸಲ್ಲುವ ಶುಭ ತುಲಾ ಲಗ್ನದಲ್ಲಿ ಜಿಲ್ಲಾಡಳಿತ ಹಾಗೂ ಅರಮನೆ ಮಂಡಳಿ ವತಿಯಿಂದ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಸ್ವಾಗತಿಸಲಾಯಿತು. ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಶಾಸಕರಾದ ಜಿ.ಟಿ.ದೇವೇಗೌಡ, ಟಿ.ಎಸ್.ಶ್ರೀವತ್ಸ, ಕೆ.ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ, ರಘು ಕೌಟಿಲ್ಯ ಸೇರಿದಂತೆ ಇತರರು ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ನೆರವೇರಿಸಿ ಗಜಪಡೆಯನ್ನು ಅರಮನೆಗೆ ಬರ ಮಾಡಿಕೊಂಡರು.
ಇದಕ್ಕೂ ಮೊದಲು ಅಶೋಕಪುರಂನ ಅರಣ್ಯ ಭವನದಲ್ಲಿಯೂ ಆನೆಗಳಿಗೆ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು. ಅಲ್ಲಿಂದ ಕಾಲ್ನಡಿಗೆಯಲ್ಲಿ ಹೊರಟ ಆನೆಗಳು 9.50ರ ಸುಮಾರಿಗೆ ಅರಮನೆಯ ಜಯಮಾರ್ತಾಂಡ ದ್ವಾರದ ಬಳಿಗೆ ಆಗಮಿಸಿದವು. ಈ ವೇಳೆ ಆನೆಗಳ ಪಾದ ತೊಳೆದು, ಕುಂಕುಮ, ಅರಿಶಿಣ ಹಚ್ಚಿ, ಗರಿಕೆ, ಬೆಲ್ಲ, ಕಬ್ಬು, ಮೋದಕ, ಕಡುಬು, ಪಂಚಕಜ್ಜಾಯ, ಎಲೆ, ಅಡಿಕೆಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು. ಪೂಜೆಯ ಬಳಿಕ ನಗರ ಪೊಲೀಸ್ ವಾದ್ಯ ವೃಂದದವರು ಸಂಗೀತ ನುಡಿಸಿದರು. ಪೊಲೀಸ್ ಇಲಾಖೆ ವತಿಯಿಂದ ಗಜಪಡೆ ಮತ್ತು ಗಣ್ಯರಿಗೆ ಗೌರವ ವಂದನೆ ಸಲ್ಲಿಸಲಾಯಿತು. ನಂತರ ಗಣ್ಯರು ಆನೆಗಳಿಗೆ ಪುಷ್ಪವೃಷ್ಟಿ ಗೈದು ಅರಮನೆ ಅಂಗಳಕ್ಕೆ ಸ್ವಾಗತಿಸಿದರು.
ಆನೆಗಳ ಆಗಮನವಾಗುತ್ತಿದ್ದಂತೆಯೇ ಅರಮನೆ ಆವರಣದಲ್ಲಿ ದಸರಾ ವೈಭವ ಮರಕುಳಿಸಿದಂತೆ ಆಯಿತು. ಗಜಪಡೆ ಅರಮನೆ ಪ್ರವೇಶ ಆಗುತ್ತಿದ್ದಂತೆಯೇ ವಿವಿಧ ಕಲಾ ತಂಡಗಳು ಮಂಗಳವಾದ್ಯ ನುಡಿಸಿ ವಿಶೇಷ ಮೆರುಗು ನೀಡಿದವು. ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡಿದರು.