;Resize=(412,232))
ಬಿ. ಶೇಖರ್ ಗೋಪಿನಾಥಂ
ಮೈಸೂರು : ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಆಯೋಜಿಸಿರುವ ಸಾಂಪ್ರದಾಯಿಕ ಕೋಣಗಳ ಓಟದ ಕ್ರೀಡೆಯಾದ ಕಂಬಳದಲ್ಲಿ 2 ಜೊತೆ ಜೋಡಿ ಕೋಣಗಳ ಪ್ರಾಯೋಗಿಕ ಓಟವು ಗುರುವಾರ ಯಶಸ್ವಿಯಾಗಿ ನಡೆಯಿತು.
ಮೈಸೂರಿನ ಹೊರವಲಯದ ಸಾತಗಳ್ಳಿಯ ವಿಟಿಯು ಕಾಲೇಜಿನ ಸಮೀಪದಲ್ಲಿ ಅ.18 ಮತ್ತು 19ರಂದು ನಡೆಯಲಿರುವ ಕಂಬಳದ ಪ್ರಾಯೋಗಿಕ ಓಟಕ್ಕೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಗುರುವಾರ ಚಾಲನೆ ಕೊಟ್ಟರು.
ಮುಚ್ಚೂರು ಕಲ್ಕೂಡೆ ಲೋಕೇಶ್ ಶೆಟ್ಟಿ ಅವರ ಮಾಲೀಕತ್ವದ ಪುಟ್ಟ ಮತ್ತು ಪೋಲಿ ಜೋಡಿ ಕೋಣಗಳನ್ನು ಮೂಡುಬಿದರೆಯ ಪ್ರಮೋದ್ ಕುಮಾರ್, ರಂಗ ಮತ್ತು ಬಿಲ್ಲ ಜೋಡಿ ಕೋಣಗಳನ್ನು ಭರತ್ ಅವರು ನೇಗಿಲು ಹಿರಿಯ ವಿಭಾಗದ ಜೋಡಿ ಕೋಣಗಳನ್ನು 140 ಮೀಟರ್ ಟ್ರ್ಯಾಕ್ನಲ್ಲಿ ಪ್ರಾಯೋಗಿಕ ಓಟವನ್ನು ಯಶಸ್ವಿಯಾಗಿ ಓಡಿಸಿ, ಸಿದ್ಧತೆ ಮತ್ತು ಟ್ರ್ಯಾಕ್ ನಿರ್ಮಾಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಈಗಾಗಲೇ 150 ಜೊತೆ ಕೋಣಗಳು ಕ್ರೀಡೆಯಲ್ಲಿ ಭಾಗವಹಿಸಲು ಆಯ್ಕೆಯಾಗಿವೆ. ಕೋಣಗಳ ಓಟಕ್ಕೆ 140 ಮೀಟರ್ ಉದ್ದದ 2 ಟ್ರ್ಯಾಕ್ ನಿರ್ಮಾಣ, ಟ್ರ್ಯಾಕ್ನ 2 ಬದಿಗಳಲ್ಲಿ ಸುಮಾರು 30 ಸಾವಿರ ವೀಕ್ಷಕರು ಕುಳಿತುಕೊಂಡು ವೀಕ್ಷಣೆ ಮಾಡಲು ಆಸನ ವ್ಯವಸ್ಥೆ ಮಾಡಲಾಗಿದೆ ಎಂದರು.
ಕಂಬಳದಲ್ಲಿ ಭಾಗವಹಿಸುವ ಕೋಣಗಳಿಗೆ ಮೊದಲ ಬಹುಮಾನವಾಗಿ 16 ಗ್ರಾಂ ಚಿನ್ನ ನೀಡುತ್ತೇವೆ. ದ್ವಿತೀಯ ಬಹುಮಾನವಾಗಿ 8 ಗ್ರಾಂ ಚಿನ್ನ ನೀಡುತ್ತೇವೆ. ಉಳಿದವರಿಗೆ ಸರ್ಟಿಫಿಕೇಟ್ ಕೊಡುತ್ತೇವೆ. ಕಂಬಳದಲ್ಲಿ ಭಾಗವಹಿಸುವುದು ಬಹುಮಾನಕ್ಕಲ್ಲ ಬದಲಿಗೆ ಗೌರವದ ಪ್ರತೀಕವಾಗಿ ಎಂದು ರೈ ತಿಳಿಸಿದರು.
ಉಚಿತ ಪ್ರವೇಶ: ಕರಾವಳಿಯ ಜಾನಪದ ಕ್ರೀಡೆ ಕಂಬಳ ಮೈಸೂರಿನಲ್ಲಿ ಆಯೋಜನೆಗೊಳ್ಳುತ್ತಿರುವ ಕಾರಣ ಇಲ್ಲಿನ ಜನರಿಗೆ ಕುತೂಹಲ ಹೆಚ್ಚಾಗಿದೆ. ಹೀಗಾಗಿ ಜನರಿಗೆ ವೀಕ್ಷಿಸಲು ಉಚಿತ ಪ್ರವೇಶ ಕಲ್ಪಿಸಲಾಗಿದೆ. 2 ದಿನ ಕಂಬಳ ನಡೆಯಲಿದೆ.