ವನವೈಭವ - ಕಡಲ ತೀರದ ರಕ್ಷಣೆಗೆ ಅರಣ್ಯ ಇಲಾಖೆಯಿಂದ ಕಾಂಡ್ಲವನ ನರ್ಸರಿ

Published : Oct 23, 2026, 01:02 PM IST
forest

ಸಾರಾಂಶ

ಕಾರವಾರ ಮತ್ತು ಹೊನ್ನಾವರದಲ್ಲಿ ಅರಣ್ಯ ಇಲಾಖೆ ವಿಶ್ವಬ್ಯಾಂಕ್‌ ಯೋಜನೆಯಡಿ ಕೆ-ಶೋರ್ಸ್‌ 5 ಜಾತಿಯ ಕಾಂಡ್ಲ ಸಸಿಗಳನ್ನು ದೇವಬಾಗ್‌ ನರ್ಸರಿಯಲ್ಲಿ ಬೆಳೆಸಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳ ಪ್ರಯತ್ನ ಈಗ ಫಲ ನೀಡುತ್ತಿದ್ದು, ಕಳೆದ ವರ್ಷ ಕಾರವಾರ ವಿಭಾಗದಲ್ಲಿ 200 ಹೆಕ್ಟೇರ್‌ನಲ್ಲಿ ಕಾಂಡ್ಲ ಸಸಿಗಳನ್ನು ನೆಡಲಾಗಿದೆ.

ಅತಿ ಉದ್ದದ ಕಡಲ ತೀರವನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಸರಿ ಸುಮಾರು 343 ಕಿಲೋ ಮೀಟರ್‌ ಉದ್ದದ ಕರಾವಳಿಯನ್ನು ಹೊಂದಿರುವ ನಮ್ಮ ರಾಜ್ಯ ಅತ್ಯಂತ ಮನಮೋಹಕ ತಾಣಗಳನ್ನೂ ಸಹ ತನ್ನೊಡಲಲ್ಲಿ ತುಂಬಿಕೊಂಡಿದೆ.

ಅರಬ್ಬಿ ಸಮುದ್ರದ ನಮ್ಮ ಕರಾವಳಿ ತೀರಗಳು ಅಸಂಖ್ಯಾತ ಧಾರ್ಮಿಕ ಕ್ಷೇತ್ರಗಳ ತವರೂರು ಎನಿಸಿಕೊಂಡರೆ, ಪ್ರವಾಸಿ ಪ್ರಿಯರಿಗೆ ಇಲ್ಲಿನ ಬೀಚುಗಳು ಮನಮೋಹಕ. ಆದರೆ, ಅರಣ್ಯ ಇಲಾಖೆಗೆ ಈ ಕಡಲ ತೀರಗಳು ಅತ್ಯಂತ ಮಹತ್ವದ ಸಂರಕ್ಷಣಾ ತಾಣಗಳು. ಹೌದು, ನಮ್ಮ ಕರಾವಳಿಯ ಅಳಿವೆ ಪ್ರದೇಶಗಳ (Estuary) ಮಹತ್ವವನ್ನು ಬೇರೆಯದ್ದೇ ರೀತಿಯಲ್ಲಿ ನೋಡುತ್ತಿರುವ ಅರಣ್ಯ ಇಲಾಖೆ ಈ ಮಹತ್ವದ ಪ್ರದೇಶವನ್ನು ಉಳಿಸಿ, ಬೆಳೆಸಲು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ.

ಕಾಂಡ್ಲ ಕಾಡು ಅಥವಾ ಕಾಂಡ್ಲ ವನಗಳು ನಮ್ಮ ಪರಿಸರ ವ್ಯವಸ್ಥೆಯ ಅತ್ಯಂತ ಸೂಕ್ಷ್ಮ ಅರಣ್ಯ ಪ್ರದೇಶ. ಕರಾವಳಿಯನ್ನು ಸಂರಕ್ಷಣೆ ಮಾಡುತ್ತಿರುವ ಅತ್ಯಂತ ಮಹತ್ವದ ಕಾಂಡ್ಲ ವನಗಳು ಅತಿ ಹೆಚ್ಚು ವಾತಾವರಣದಲ್ಲಿನ ಇಂಗಾಲವನ್ನೂ ಸಹ ಹೀರಿ ಅನುಕೂಲ ಮಾಡಿಕೊಡುತ್ತಿವೆ. ಇದನ್ನು ಮನಗಂಡಿರುವ ಅರಣ್ಯ ಇಲಾಖೆ, ಇದೀಗ ನಮ್ಮಲ್ಲಿ ಕಾಂಡ್ಲ ಸಸಿಗಳ ನರ್ಸರಿಯನ್ನೇ ಶುರು ಮಾಡಿದೆ. ಕಡಲಿನ ಸಮೀಪ, ನದಿಗಳು ಕಡಲನ್ನು ಸೇರುವ ಅಳಿವೆ ಪ್ರದೇಶದ ಉಪ್ಪು ಮತ್ತು ಸಿಹಿ ನೀರಿನ ಪ್ರದೇಶದಲ್ಲೇ ಈ ನರ್ಸರಿಗಳಿರುವುದು ಮತ್ತೊಂದು ವಿಶೇಷ. ಈ ನರ್ಸರಿಗೆ ವಿಶ್ವಬ್ಯಾಂಕಿನ ಅಧಿಕಾರಿಗಳೂ ಭೇಟಿ ನೀಡಿ

ಕಾರವಾರ ವಿಭಾಗದಲ್ಲಿ ಈ ನರ್ಸರಿಗಳನ್ನು ಸ್ಥಾಪಿಸಲಾಗಿದೆ

ಅರಣ್ಯ ಇಲಾಖೆಯ ಸಿರಸಿ ವೃತ್ತದ ವ್ಯಾಪ್ತಿಗೆ ಬರುವ ಕಾರವಾರ ವಿಭಾಗದಲ್ಲಿ ಈ ನರ್ಸರಿಗಳನ್ನು ಸ್ಥಾಪಿಸಲಾಗಿದೆ. ಕರಾವಳಿಯಲ್ಲಿ ಮೂರು ವಿಧದ ಅರಣ್ಯಗಳನ್ನು ಕಾಣಬಹುದು. ಕಾಂಡ್ಲವನ, ಉಬ್ಬರವಿಳಿತದ ಉಪ್ಪಿನ ಅಂಶವಿರುವ ಜೌಗು ಪ್ರದೇಶ ಮತ್ತು ಕಡಲ ಹುಲ್ಲುಗಾವಲು ಪ್ರದೇಶಗಳೆಂದು ವಿಭಾಗಿಸಲಾಗಿದೆ. ಈ ಕರಾವಳಿಯ ಪರಿಸರ ವ್ಯವಸ್ಥೆಗಳು ನಮ್ಮ ಭೂಮಿಯ ಮೇಲಿನ ಕಾಡುಗಳಿಗಿಂತ ಹತ್ತು ಪಟ್ಟು ಹೆಚ್ಚು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ವಾತಾವರಣದಲ್ಲಿರುವ ಇಂಗಾಲವನ್ನು ಹೀರಿಕೊಳ್ಳುತ್ತವೆ. ಅಷ್ಟೇ ಅಲ್ಲ, ದೀರ್ಘಕಾಲದವರೆಗೆ ಅವುಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವ ಸಾಮರ್ಥ್ಯ ಹೊಂದಿವೆ. ಕಾಂಡ್ಲ, ಉಪ್ಪು ಜವುಗು ಮತ್ತು ಕಡಲ ಹುಲ್ಲುಗಳು ಗಾಳಿಯಲ್ಲಿರುವ ಇಂಗಾಲದ ಡೈ ಆಕ್ಸೈಡನ್ನು ದ್ಯುತಿ ಸಂಶ್ಲೇಷಣ ಕ್ರಿಯೆಯ ಮೂಲಕ ಹೀರಿಕೊಂಡು ತಮ್ಮ ಎಲೆ, ಕಾಂಡ ಮತ್ತು ಬೇರುಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತವೆ. ಕರಾವಳಿಯ ಸಮುದ್ರ ಮತ್ತು ಸಿಹಿ ನೀರಿನ ನದಿ ಸೇರುವ ಅಳಿವೆ ಪ್ರದೇಶದ ನೀರಿನೊಳಗಿನ ಮಣ್ಣಿನ ಜೊತೆಗಿರುವ ಸಸ್ಯಗಳು ಎಲೆ ಅಥವಾ ಸತ್ತ ಭಾಗಗಳು ನೀರಿನ ಕೆಳಗಿನ ಮಣ್ಣಿನೊಳಕ್ಕೆ ಸೇರುತ್ತವೆ. ಈ ಮಣ್ಣಿನಲ್ಲಿ ಆಮ್ಲಜನಕದ ಕೊರತೆ ಇರುವುದರಿಂದ ಇವು ಬೇಗನೆ ಕೊಳೆಯುವುದಿಲ್ಲ. ಆದ್ದರಿಂದಲೇ ಇಲ್ಲಿನ ಮಣ್ಣು ಸಹ ಕಪ್ಪು ಬಣ್ಣದಾಗಿರುತ್ತದೆ. ಹೀಗೆ ಕೊಳೆಯದೇ ಉಳಿಯುವ ಇಂಗಾಲ ಶತಮಾನಗಳ ಕಾಲ ಸಾಗರದ ಈ ಸಸ್ಯಗಳ ತಳದಲ್ಲಿರುವ ಮಣ್ಣಿನಲ್ಲಿ ಹೂತುಹೋಗುತ್ತದೆ. ಭೂಮಿಯ ಮೇಲಿನ ಕಾಡುಗಳು ಕೇವಲ ದಶಕಗಳ ಕಾಲ ಇಂಗಾಲವನ್ನು ಸಂಗ್ರಹಿಸಿದರೆ, ಈ ನೀಲಿ ಕಾರ್ಬನ್‌ ವ್ಯವಸ್ಥೆಗಳು ನೂರಾರು ವರ್ಷಗಳ ಕಾಲ ಅವುಗಳನ್ನು ಮಣ್ಣಿನಲ್ಲಿ ಬಂಧಿಸಿ ಇಡುವ ಶಕ್ತಿ ಹೊಂದಿವೆ.

ಈ ಕಾಂಡ್ಲ ವನಗಳು ಹವಾಮಾನ ವೈಪರೀತ್ಯ ಮತ್ತು ಜಾಗತಿಕ ತಾಪಮಾನವನ್ನು ಕಡಿಮೆ ಮಾಡಲು ಮತ್ತು ಹಸಿರು ಮನೆ ಅನಿಲಗಳನ್ನು ನಿಯಂತ್ರಿಸಲು ಪ್ರಕೃತಿಯ ನೀಡಿದ ಅತ್ಯುತ್ತಮ ಅಸ್ತ್ರಗಳಾಗಿವೆ. ಸುನಾಮಿ ಮತ್ತು ಚಂಡಮಾರುತದಂತಹ ಪ್ರಾಕೃತಿಕ ವಿಕೋಪದಂತಹ ಸಂದರ್ಭದಲ್ಲಿ ದಟ್ಟವಾದ ಮ್ಯಾಂಗ್ರೋವ್‌ ಬೇರುಗಳು ಕರಾವಳಿ ಪ್ರದೇಶಗಳಿಗೆ ನೈಸರ್ಗಿಕ ಗೋಡೆಯಂತೆ ತಡೆದು ಕೆಲಸ ಮಾಡುತ್ತವೆ. ಇವು ಪ್ರಬಲ ಅಲೆಗಳು, ಸುನಾಮಿ ಮತ್ತು ಚಂಡಮಾರುತಗಳ ತೀವ್ರತೆಯನ್ನು ಕಡಿಮೆ ಮಾಡಿ ಕರಾವಳಿಯ ಮಣ್ಣಿನ ಸವೆತವನ್ನು ನಿಯಂತ್ರಿಸುತ್ತವೆ.

ಈ ಕರಾವಳಿಯ ಪರಿಸರ ವ್ಯವಸ್ಥೆ ಅನೇಕ ಅಪರೂಪದ ಜೀವಿಗಳಿಗೂ ಆಶ್ರಯತಾಣಗಳು. ಮೀನು, ಏಡಿ, ಸೀಗಡಿ ಮತ್ತು ಅನೇಕ ಕಡಲ ಜೀವಿಗಳಿಗೆ ಇವು ಸಂತಾನೋತ್ಪತ್ತಿಯ ಕೇಂದ್ರಗಳು. ಕಡಲ ತೀರಗಳಲ್ಲಿ ಅನಗತ್ಯ ಅಭಿವೃದ್ಧಿ ಕೆಲಸಗಳನ್ನು ಮಾಡಲು ಶುರು ಮಾಡಿದರೆ, ಈ ಪರಿಸರ ವ್ಯವಸ್ಥೆಯನ್ನು ನಾಶಪಡಿಸಿದರೆ ನೂರಾರು ವರ್ಷಗಳಿಂದ ಮಣ್ಣಿನಲ್ಲಿ ಬಚ್ಚಿಟ್ಟಿದ್ದ ಕೋಟ್ಯಂತರ ಟನ್‌ ಇಂಗಾಲವನ್ನು ಮತ್ತೆ ವಾತಾವರಣಕ್ಕೆ ಬಿಡುಗಡೆ ಮಾಡಿ ಜಾಗತಿಕ ತಾಪಮಾನ ಹೆಚ್ಚಳಕ್ಕೆ ನಾವೇ ಕಾರಣೀಕರ್ತರಾಗುತ್ತೇವೆ.

ಕಾಂಡ್ಲ ಸಸಿಗಳನ್ನು ದೇವಬಾಗ್‌ ನರ್ಸರಿಯಲ್ಲಿ ಬೆಳೆಸಲಾಗುತ್ತಿದೆ

ಕಾರವಾರ ಮತ್ತು ಹೊನ್ನಾವರದಲ್ಲಿ ಅರಣ್ಯ ಇಲಾಖೆ ವಿಶ್ವಬ್ಯಾಂಕ್‌ ಯೋಜನೆಯಡಿ ಕೆ-ಶೋರ್ಸ್‌ 5 ಜಾತಿಯ ಕಾಂಡ್ಲ ಸಸಿಗಳನ್ನು ದೇವಬಾಗ್‌ ನರ್ಸರಿಯಲ್ಲಿ ಬೆಳೆಸಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳ ಪ್ರಯತ್ನ ಈಗ ಫಲ ನೀಡುತ್ತಿದ್ದು, ಕಳೆದ ವರ್ಷ ಕಾರವಾರ ವಿಭಾಗದಲ್ಲಿ 200 ಹೆಕ್ಟೇರ್‌ನಲ್ಲಿ ಕಾಂಡ್ಲ ಸಸಿಗಳನ್ನು ನೆಡಲಾಗಿದೆ. ಈ ವರ್ಷವೂ 200 ಹೆಕ್ಟೇರ್‌ ಗುರಿ ಹೊಂದಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಸುಮಾರು 1100 ಹೆಕ್ಟೇರ್‌ ಸರ್ಕಾರಿ ಭೂಮಿಯಲ್ಲಿ ಕಾಂಡ್ಲ ವನ ಇದೆ. ಈ ಪ್ರದೇಶದಲ್ಲಿ ಕಾಂಡ್ಲವನಗಳ ಪುನಶ್ಚೇತನ ಮತ್ತು ಹೊಸ ವನಗಳ ಅಭಿವೃದ್ಧಿಗೆ ಇಲಾಖೆ ಶ್ರಮಿಸುತ್ತಿದೆ. ಕಾಳಿ, ಅಘನಾಶಿನಿ, ಶರಾವತಿ, ಗಂಗಾವಳಿ ಸೇರಿದಂತೆ ಅನೇಕ ನದಿಗಳು ಅರಬ್ಬಿ ಸಮುದ್ರವನ್ನು ಸೇರುವ ಪ್ರದೇಶಗಳು ಅಲ್ಲದೇ, ಅನೇಕ ಝರಿಗಳು ಸಹ ಕಾಂಡ್ಲ ಮತ್ತು ಇತರೆ ಪರಿಸರ ವ್ಯವಸ್ಥೆಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.

ಕರಾವಳಿ ಭಾಗದ ಈ ಅತಿ ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ. ಸುನಾಮಿ ಅಪ್ಪಳಿಸಿದ್ದಾಗ ಅನೇಕ ಸಾವು ನೋವುಗಳನ್ನು ತಡೆದಿದ್ದು ಇದೇ ಕಾಂಡ್ಲವನಗಳು. ಎಲ್ಲಕ್ಕಿಂತ ಹೆಚ್ಚಾಗಿ ಅತಿ ವಿಶಿಷ್ಟ ಜಲ ಪರಿಸರ ವ್ಯವಸ್ಥೆಯನ್ನು ಇವು ಪೋಷಿಸುವುದರಿಂದ ಇಲ್ಲಿ ಯಾವುದೇ ಪರಿಸರಕ್ಕೆ ಮಾರಕ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ಅನಾಹುತಕಾರಿಯಾಗಲಿದೆ. ಆದ್ದರಿಂದಲೇ ಕರಾವಳಿ ನಿಯಂತ್ರಣ ಪ್ರದೇಶ ಮತ್ತು ಅರಣ್ಯ ಇಲಾಖೆ ಕಡಲ ತೀರ ಪ್ರದೇಶಗಳಲ್ಲಿ ಪರಿಸರಕ್ಕೆ ಧಕ್ಕೆ ತರುವ ಯೋಜನೆಗಳಿಗೆ ಅನುಮತಿ ನೀಡುವುದಿಲ್ಲ.

PREV
Stay updated with the latest news from Mysore News (ಮೈಸೂರು ಸುದ್ದಿ) — including local governance, city/civic developments, tourism and heritage, culture and festivals, crime reports, environment, education, business and community events from Mysore district and city on Kannada Prabha News.
Read more Articles on

Recommended Stories

ದಸರಾ ದಿನಗಳಲ್ಲಿ ಮೈಸೂರಿಗೆ ಜನವೋ ಜನ!
ಕುಕ್ಕೆ ಪಂಚಾಮೃತ ಮಹಾಭಿಷೇಕ ಸೇವೆ ದರ ₹11 ಸಾವಿರಕ್ಕೆ ಹೆಚ್ಚಳ