ಮಂಗಳೂರು: ಶ್ರೀಶಾ ಸೌಹಾರ್ದ ಸೊಸೈಟಿಯ ಪ್ರಾಯೋಜಕತ್ವದಲ್ಲಿ ಮತ್ತು ರಾಮಕೃಷ್ಣ ಆಶ್ರಮದ ಸಹಯೋಗದಲ್ಲಿ ದಾಸಸಾಹಿತ್ಯ ಸೇವಾ ಪ್ರತಿಷ್ಠಾನ ರಾಮಕೃಷ್ಣ ಆಶ್ರಮದ ಸಭಾಂಗಣದಲ್ಲಿ ಭಾನುವಾರ ಸಂಜೆ ಆಯೋಜಿಸಿದ ಖ್ಯಾತ ಗಾಯಕ ಮೈಸೂರು ರಾಮಚಂದ್ರಾಚಾರ್ ಅವರ ದಾಸವಾಣಿ ಕಾರ್ಯಕ್ರಮ ಪ್ರೇಕ್ಷಕರ ಮನಸೂರೆಗೊಂಡಿತು.ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಆಸ್ತಿಕರನ್ನು ಮೂರು ಗಂಟೆಗಳ ಕಾಲ ಆಸನದಲ್ಲೇ ಕೂರಿಸಿದ್ದು ರಾಮಚಂದ್ರಾಚಾರ್ ಅವರ ಗಾಯನ ವೈಭವ - ಶೈಲಿ. ಹಾಡುವಾಗ ಸಂಬಂಧಪಟ್ಟ ಕೀರ್ತನೆಯಲ್ಲಿ ಬರುವ ದೇವರ, ಗುರುಗಳ ಚಿತ್ರಗಳನ್ನು ತೋರಿಸುತ್ತಾ ಭಾವಪೂರ್ಣವಾಗಿ ಹಾಡುವ ಪರಿ ಎಲ್ಲರಿಗೂ ಮುದ ನೀಡಿತು. ಜಗನ್ನಾಥದಾಸರ ರಾಯ ಬಾರೋ ತಂದೆ ತಾಯಿ ಬಾರೋ... ಪುರಂದರದಾಸರ ಜನಪ್ರಿಯ ರಚನೆ, ಭಾಗ್ಯದ ಲಕ್ಷ್ಮಿ ಬಾರಮ್ಮ...ಹಾಗೂ ಬಾರೇ ಗೋಪಮ್ಮ ನಿಮ್ಮ ಬಾಲಯ್ಯ ಅಳುತ್ತಾನೆ...; ವಾದಿರಾಜ ಗುರುಸಾರ್ವಭೌಮರ, ಎಷ್ಟು ಸಾಹಸವಂತ ನೀನೇ ಬಲವಂತ... ಮುಂತಾದ ಹರಿದಾಸರ ಕೃತಿ ಕೀರ್ತನೆಗಳು ಪ್ರೇಕ್ಷಕರನ್ನು ಭಕ್ತಿಯ ಪರಾಕಾಷ್ಠೆಗೆ ಕೊಂಡೊಯ್ದವು. ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು, ಶ್ರೀಶಾ ಸೌಹಾರ್ದ ಸೊಸೈಟಿ ಹಾಗೂ ದಾಸಸಾಹಿತ್ಯ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್.ಗುರುರಾಜ್ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಮೈಸೂರು ರಾಮಚಂದ್ರಾಚಾರ್ ಅವರು ದಾಸಸಾಹಿತ್ಯದ ಪ್ರಸ್ತುತತೆ ಬಗ್ಗೆ ವಿವರಣೆ ನೀಡಿದರು. ಶ್ರೀಶಾ ಸೊಸೈಟಿಯ ಉಪಾಧ್ಯಕ್ಷ ಉದಯ ಶಾಸ್ತ್ರೀ, ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ಪುರಾಣಿಕ್ ಸೇರಿದಂತೆ ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಮೂಡಿಬಂತು. ರಾಧಾ ಅವರು ಪ್ರಾರ್ಥಿಸಿದರು. ಸಂಜನಾ ಭಟ್ ನಿರೂಪಿಸಿದರು. ಶ್ರೀನಿವಾಸ ಜೆಟ್ಟಿ ವಂದಿಸಿದರು.