ಗೊಂದಲಗಳಿಗೆ ಶೀಘ್ರ ತೆರೆ: ಸತೀಶ್ ಜಾರಕಿಹೊಳಿ

KannadaprabhaNewsNetwork |  
Published : Feb 24, 2026, 03:45 AM IST
ಅರೇ ಅಂಗಡಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿಯವರನ್ನು ಗೌರವಿಸಲಾಯಿತು. | Kannada Prabha

ಸಾರಾಂಶ

ರಾಜ್ಯ ಕಾಂಗ್ರೆಸ್ಸಿನಲ್ಲಿ ನಡೆಯುತ್ತಿರುವ ಅಧಿಕಾರ ಹಂಚಿಕೆ ವಿದ್ಯಮಾನದ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಶೀಘ್ರದಲ್ಲೆ ತೆರೆ ಎಳೆಯಲಿದ್ದಾರೆ.

ಕನ್ನಡಪ್ರಭ ವಾರ್ತೆ ಹೊನ್ನಾವರ

ರಾಜ್ಯ ಕಾಂಗ್ರೆಸ್ಸಿನಲ್ಲಿ ನಡೆಯುತ್ತಿರುವ ಅಧಿಕಾರ ಹಂಚಿಕೆ ವಿದ್ಯಮಾನದ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಶೀಘ್ರದಲ್ಲೆ ತೆರೆ ಎಳೆಯಲಿದ್ದಾರೆ ಎಂದು ಲೊಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯ ಪ್ರವಾಸದಲ್ಲಿರುವ ಸಚಿವರು ತಾಲೂಕಿನ ಅರೇಅಂಗಡಿಯ ಶ್ರೀಧರ ಶೆಟ್ಟಿ ಮನೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಷಯ ಸದ್ಯ ಚರ್ಚೆ ಇಲ್ಲ‌. ಇದು ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ತೀರ್ಮಾನವಾಗಲಿದೆ. ಕಳೆದ ಆರು ತಿಂಗಳಿನಿಂದ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಹೈಕಮಾಂಡ್ ಗಮನಿಸುತ್ತಿದೆ ಎನ್ನುವ ಮೂಲಕ ಸಿಎಂ ಸಿದ್ದರಾಮಯ್ಯವರೇ ಮುಂದುವರೆಯುವ ಪರೋಕ್ಷ ಸೂಚನೆ ನೀಡಿದರು.

ಗದಗ ಜಿಲ್ಲೆಯ ಶಿರಹಟ್ಟಿಯ ಬಿಜೆಪಿ ಶಾಸಕ ಲಂಚ ಸ್ವೀಕರಿಸಿರುವ ಸಮಯದಲ್ಲಿ ಲೋಕಾಯುಕ್ತರಿಗೆ ಸಿಕ್ಕಿ ಬಿದ್ದ ಬಗ್ಗೆ ಪ್ರಶ್ನಿಸಿದಾಗ, ಈ ಬಗ್ಗೆ ತನಿಖೆ ನಡೆದು ಶಿಕ್ಷೆಯಾದಾಗ ಮಾತ್ರ ಮುಂದಿನ ದಿನದಲ್ಲಿ ಭ್ರಷ್ಟಾಚಾರ ನಿಯಂತ್ರಣವಾಗಲಿದೆ. ಈ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ವಿಶ್ವಾಸವಿದೆ ಎಂದರು.

ಕಳೆದ 20 ವರ್ಷದಿಂದ ನನ್ನ ಕ್ಷೇತ್ರದಲ್ಲಿ ಉತ್ಸವ ಮಾಡುತ್ತಿದ್ದು, ಅದರಂತೆ ಹೊನ್ನಾವರ ಉತ್ಸವ ನೋಡಲು ಆಗಮಿಸಿರುವೆ. ಈ ದಿನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಇಲ್ಲಿಯ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮಳಿಗೆ ವೀಕ್ಷಿಸುತ್ತೇನೆ. ಈಗಾಗಲೇ ಎರಡು ಸೇತುವೆ ಮಂಜೂರಾಗಿದ್ದು, ಇದರ ಶಂಕುಸ್ಥಾಪನೆ ನಡೆಸಲಾಗುವುದು ಎಂದರು.

ಕರ್ಕಿ ಪಾವಿನಕುರ್ವಾ ಗ್ರಾಮದ ತೂಗುಸೇತುವೆ ವೀಕ್ಷಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದರು. ಹೊನ್ನಾವರ ಮೆಣಸಿ ರಾಜ್ಯ ಹೆದ್ದಾರಿ ಬಗ್ಗೆ ಸ್ಥಳೀಯರಿಂದ ಮನವಿ ಸ್ವೀಕರಿಸಿ ಅರಣ್ಯ ಇಲಾಖೆಯಿಂದ ಅನುಮೋದನೆ ಪಡೆದು ಕಾಮಗಾರಿ ಆರಂಭಿಸುವ ಮೂಲಕ ದಶಕಗಳ ಬೇಡಿಕೆ ಈಡೇರಿಸುವುದಾಗಿ ಸಚಿವರು ಭರವಸೆ ನೀಡಿದರು.

ಕುಮಟಾ ಹೊನ್ನಾವರ ಕ್ಷೇತ್ರದಲ್ಲಿ ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ 3ನೇ ಸ್ಥಾನ ಪಡೆಯುವ ಮೂಲಕ ಹೀನಾಯ ಸ್ಥಿತಿ ತಲುಪಿರುವ ಬಗ್ಗೆ ಪ್ರಶ್ನಿಸಿದಾಗ, ಪಕ್ಷ ಸಂಘಟನೆಗೆ ಒತ್ತು ನೀಡಲು ಆಗಾಗ ಭೇಟಿ ನೀಡುತ್ತಿದ್ದೇವೆ. ಮುಂದಿನ ದಿನದಲ್ಲಿ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.

ಅರೇಅಂಗಡಿ ಸರ್ಕಲ್ ನಿರ್ಮಾಣದ ಬಗ್ಗೆ ಸ್ಥಳ ಪರಿಶೀಲನೆ ಮಾಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಮೀಪದಲ್ಲೆ ಇರುವ ಲಲಿತಾ ಹುಲಸ್ವಾರ ಇವರ ಮನೆಗೆ ಭೇಟಿ ನೀಡಿ ಪ್ರಾಣಿ ಸಾಕಾಣಿಕೆಯನ್ನು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಮಾಜಿ ಶಾಸಕಿ ಶಾರದಾ ಶೆಟ್ಟಿ, ಜಿಪಂ ಮಾಜಿ ಸದಸ್ಯ ಶಿವಾನಂದ ಹೆಗಡೆ ಕಡತೋಕಾ, ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಅಲಿ ಗೊರವನಕೊಳ್ಳ, ಮುಖಂಡರಾದ ಮಂಜುನಾಥ ನಾಯ್ಕ, ರವಿಕುಮಾರ ಶೆಟ್ಟಿ, ವಿನಾಯಕ ಶೆಟ್ಟಿ, ಸಂದೇಶ ಶೆಟ್ಟಿ, ವಿನೋದ ನಾಯ್ಕ ಕರ್ಕಿ ಸೇರಿದಂತೆ ನೂರಾರು ಕಾರ್ಯಕರ್ತರು, ಸಾರ್ವಜನಿಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೌಷ್ಟಿಕ ಆಹಾರ ಸೇವಿಸಿ ಸದೃಢರಾಗಿ: ಡಾ. ಪ್ರಕಾಶ ಸಂಕನೂರ
ಅಂಗನವಾಡಿ ಕಾರ್ಯಕರ್ತೆ ನೇಮಿಸುವಂತೆ ಒತ್ತಾಯ