ಮೈಸೂರು ರಾಜಪರಂಪರೆ ಅನಾವರಣಗೊಳಿಸಿದ ಗೊಂಬೆ ಉತ್ಸವ

KannadaprabhaNewsNetwork |  
Published : Oct 16, 2026, 02:00 AM IST
ಸಸಸ | Kannada Prabha

ಸಾರಾಂಶ

ಚಿಕ್ಕಮಗಳೂರುಶರನ್ನವರಾತ್ರಿ ಹಬ್ಬದ ಅಂಗವಾಗಿ ನಗರದ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾ ಆಯೋಜಿಸಿರುವ 11 ದಿನಗಳ ಗೊಂಬೆ ಉತ್ಸವ ಮೈಸೂರು ರಾಜಪರಂಪರೆ ವೈಭವ, ಭಾರತೀಯ ಸಂಸ್ಕೃತಿ ಹಾಗೂ ಸನಾತನ ಸಂಪ್ರದಾಯಗಳ ಶ್ರೀಮಂತಿಕೆ ಅನಾವರಣಗೊಳಿಸಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಶರನ್ನವರಾತ್ರಿ ಹಬ್ಬದ ಅಂಗವಾಗಿ ನಗರದ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾ ಆಯೋಜಿಸಿರುವ 11 ದಿನಗಳ ಗೊಂಬೆ ಉತ್ಸವ ಮೈಸೂರು ರಾಜಪರಂಪರೆ ವೈಭವ, ಭಾರತೀಯ ಸಂಸ್ಕೃತಿ ಹಾಗೂ ಸನಾತನ ಸಂಪ್ರದಾಯಗಳ ಶ್ರೀಮಂತಿಕೆ ಅನಾವರಣಗೊಳಿಸಿದೆ.

ವೈವಿಧ್ಯಮಯ ಗೊಂಬೆಗಳ ಸುಂದರ ಜೋಡಣೆ, ಪೌರಾಣಿಕ ಪ್ರಸಂಗಗಳ ಜೀವಂತ ಚಿತ್ರಣ ಹಾಗೂ ಅಪರೂಪದ ಪಾರಂಪರಿಕ ವಸ್ತುಗಳ ಸಂಗ್ರಹ ನೋಡುಗರನ್ನು ಆಕರ್ಷಿಸುತ್ತಿದೆ.

ನವರಾತ್ರಿ ಪ್ರಯುಕ್ತ ಪ್ರದರ್ಶನಕ್ಕಿಡಲಾದ ಸಾಂಪ್ರದಾಯಿಕ ಗೊಂಬೆಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ. ಕೆಂಪು ಚಂದನದ ಮರದಲ್ಲಿ ಕೆತ್ತಲಾದ ಯದುವಂಶಸ್ಥರ ಪರಂಪರೆಯ ಪಟ್ಟದ ಗೊಂಬೆಗಳು, ಮೈಸೂರು ಮಹಾರಾಜರ ದರ್ಬಾರ್‌, ಜಂಬೂ ಸವಾರಿ ಹಾಗೂ ವಿಶ್ವವಿಖ್ಯಾತ ಮೈಸೂರು ಅರಮನೆ ಪ್ರತಿಕೃತಿಗಳು ರಾಜವೈಭವವನ್ನು ಕಣ್ಣಮುಂದೆ ತೆರೆದಿಡುತ್ತಿವೆ. ಯದುವಂಶಸ್ಥರ ಸಾಂಸ್ಕೃತಿಕ ಆಚರಣೆ ಮತ್ತು ಸಂಪ್ರದಾಯಗಳ ಅನಾವರಣ ನೋಡುಗರಿಗೆ ಹಿಂದಿನ ಕಾಲದ ವೈಭವ ನೆನಪಿಸುತ್ತಿದೆ.

ಮರ್ಯಾದಾ ಪುರುಷೋತ್ತಮ ಶ್ರೀರಾಮ, ಅಯೋಧ್ಯೆಯ ಶ್ರೀರಾಮಲಲ್ಲಾ, ಅಷ್ಟಲಕ್ಷ್ಮಿಯರು, ನವದುರ್ಗೆಯರು ಸೇರಿ ದಂತೆ ವಿವಿಧ ದೇವಾನುದೇವತೆಗಳ ಆಕರ್ಷಕ ಗೊಂಬೆಗಳು ಭಕ್ತಿಭಾವ ಮೂಡಿಸುತ್ತಿವೆ. ಕಲಿಯುಗದ ದೈವವೆಂದೇ ಆರಾಧಿ ಸಲ್ಪಡುವ ಪದ್ಮಾವತಿ ಅಮ್ಮಹಾಗೂ ಶ್ರೀನಿವಾಸನ ವಿವಾಹ ಬಿಂಬಿಸುವ ಶ್ರೀನಿವಾಸ ಕಲ್ಯಾಣದ ಗೊಂಬೆಗಳು ವಿಶೇಷ ಆಕರ್ಷಣೆ. ವರನ ದಿಬ್ಬಣದ ಸ್ವಾಗತ, ವರಪೂಜೆ, ಮಾಂಗಲ್ಯಧಾರಣೆ, ಸಪ್ತಪದಿ ಸೇರಿದಂತೆ ವಿವಾಹದ ವಿವಿಧ ವಿಧಿವಿಧಾನ ಗೊಂಬೆಗಳ ಮೂಲಕ ಮನೋಜ್ಞವಾಗಿ ಚಿತ್ರಿಸಲಾಗಿದೆ.

ಭಗವಾನ್ ಶ್ರೀಕೃಷ್ಣನ ಗೀತೋಪದೇಶ, ಮಹಾವಿಷ್ಣುವಿನ ದಶಾವತಾರ, ಶ್ರೀರಾಮನ ವಿಗ್ರಹ, ರಾವಣ ದರ್ಬಾರ್‌, ಸಪ್ತನದಿಗಳು, ಕೃಷಿ ಚಟುವಟಿಕೆಗಳು, ಸಂತೆ ದೃಶ್ಯಗಳು ಹಾಗೂ ಭಾರತೀಯ ಹಬ್ಬ-ಹರಿದಿನಗಳ ಆಚರಣೆಗಳನ್ನು ಬಿಂಬಿಸುವ ನೂರಾರು ಗೊಂಬೆಗಳು ಭಾರತೀಯ ಇತಿಹಾಸ, ಪೌರಾಣಿಕ ಪರಂಪರೆ ಮತ್ತು ಗ್ರಾಮೀಣ ಬದುಕಿನ ಸೊಗಡನ್ನು ಪರಿಚಯಿಸುತ್ತಿವೆ.

ನೆನಪುಗಳ ಅನಾವರಣ

ಗೊಂಬೆಗಳ ಜತೆಗೆ ಅಪರೂಪದ ಹಳೆ ವಸ್ತುಗಳ ಸಂಗ್ರಹವೂ ಪ್ರದರ್ಶನದ ಮೆರುಗು ಹೆಚ್ಚಿಸಿದೆ. ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಬಳಕೆಯಲ್ಲಿದ್ದ ಸ್ಥಿರ ದೂರವಾಣಿ, ಹಿಂದಿನ ತಲೆಮಾರಿನವರು ಬಳಸುತ್ತಿದ್ದ ಕರಕುಶಲ ವಸ್ತುಗಳು, ಅಜ್ಜ-ಅಜ್ಜಿ ಯರ ಕಾಲದ ಅಡಕೆ ಡಬ್ಬಿ, ಕುಟ್ಟಾಣಿ, ಮರದ ಬಳಪ, ಪೆನ್ಸಿಲ್ ಹಾಗೂ ಹಿತ್ತಾಳೆ ಗೃಹೋಪಯೋಗಿ ವಸ್ತುಗಳು ಹಿಂದಿನ ನೆನಪುಗಳನ್ನು ಮರುಕಳಿಸುತ್ತಿವೆ. ವಿದೇಶಿ ನಾಣ್ಯ, ಅಂಚೆಚೀಟಿಗಳು ಹಾಗೂ 108 ವರ್ಷಗಳಷ್ಟು ಹಳೆಯ ಭಗವದ್ಗೀತೆ ಗ್ರಂಥ ನೋಡುಗರಲ್ಲಿ ಕುತೂಹಲ ಮೂಡಿಸಿವೆ.ಮಣ್ಣಿನ ಮತ್ತು ನೈಸರ್ಗಿಕ ಕಲಾಕೃತಿಗಳು, ಮರದ ವಸ್ತುಗಳು, ದೇವಾನುದೇವತೆಗಳ ವಿಗ್ರಹಗಳು ಹಾಗೂ ಆಧುನಿಕ ಗೊಂಬೆಗಳು ಪ್ರದರ್ಶನಕ್ಕೆ ಮತ್ತಷ್ಟು ವೈವಿಧ್ಯ ತುಂಬಿವೆ. ಹಳೆ ಕಾಲದ ಕಲಾಪರಂಪರೆಯಿಂದ ಇಂದಿನ ಆಧುನಿಕ ಕಲಾ ಕೃತಿಗಳವರೆಗೆ ವಿವಿಧ ಆಯಾಮಗಳನ್ನು ಒಂದೇ ಸೂರಿನಡಿ ಪರಿಚಯಿಸಿರುವುದು ಉತ್ಸವದ ವಿಶೇಷ.

ತಹಸೀಲ್ದಾರ್‌ ರೇಷ್ಮಾ ಶೆಟ್ಟಿ, ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಹರಿ ಓಂ ಉಪಾಧ್ಯಾಯ ಮಾತನಾಡಿದರು. ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಪಿ. ಮಂಜುನಾಥ ಜೋಷಿ ಅಧ್ಯಕ್ಷತೆ ವಹಿಸಿದ್ದರು. ಅಜ್ಜಂಪುರ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ್‌, ಗೊಂಬೆ ಪ್ರದರ್ಶನದ ರೂವಾರಿಗಳಾದ ಕಿನಾರೇಶ್ವರಿ, ಅರ್ಚನಾ, ನಾಗಶ್ರೀ, ತನುಶ್ರೀ, ಡಾ. ಸೌಮ್ಯಶ್ರೀ ಹಾಗೂ ಕನಕ ಶಂಕರೇಗೌಡ ಬಿಎಂಎಸ್‌ ಪದಾಧಿಕಾರಿ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.

----ಕೋಟ್‌---

ಗೊಂಬೆಗಳ ಪ್ರದರ್ಶನ ಕಣ್ಮನ ತಣಿಸುವಂತಿದ್ದು, ಇಂತಹ ಸಾಂಸ್ಕೃತಿಕ ಪರಂಪರೆ ಮುಂದಿನ ತಲೆಮಾರಿಗೂ ಮುಂದುವರಿಯಬೇಕು.

- ಡಾ. ಶುಭ ವಿಜಯ್, ವೈದ್ಯಕೀಯ ನಿರ್ದೇಶಕಿ, ಆಶ್ರಯ ಆಸ್ಪತ್ರೆ

-- ಕೋಟ್‌--

ಇಂದಿನ ಮಕ್ಕಳು ಕಾರ್ಟೂನ್‌, ಕೃತಕ ಬುದ್ಧಿಮತ್ತೆ ಹಾಗೂ ಅನಿಮೇಷನ್‌ಗಳ ಆಕರ್ಷಣೆಯಲ್ಲಿ ಮುಳುಗಿದ್ದಾರೆ. ಮೊಬೈಲ್‌ ಯುಗದ ಪ್ರಭಾವದಿಂದ ನಮ್ಮ ಹಿಂದಿನ ಸಂಪ್ರದಾಯ ಮತ್ತು ಪರಂಪರೆ ಮರೆಯುವಂತಾಗಿದೆ. ಇಂತಹ ಸಂದರ್ಭದಲ್ಲಿ ಸಾಂಪ್ರದಾಯಿಕ ಗೊಂಬೆಗಳನ್ನು ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸಿರುವುದು ಶ್ಲಾಘನೀಯ.

- ಪಲ್ಲವಿ ಸಿ.ಟಿ.ರವಿ, ಸಮಾಜ ಸೇವಕಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿ.15ರ ವರೆಗೆ ಕಾಲುವೆಗೆ ನೀರು ಹರಿಸಲು ರೈತ ಸಂಘ ಅಧ್ಯಕ್ಷ ಮಾಧವರೆಡ್ಡಿ ಆಗ್ರಹ
ಪ್ರಸಿದ್ಧ ಯಕ್ಷಗಾನ ಕಲಾವಿದ ಶ್ರೀಪಾದ ಭಟ್ ಥಂಡಿಮನೆ ಅಸ್ತಂಗತ