ನಾನು ಮಾತನಾಡಲು ನಿಂತರೆ ಇನ್ನೊಂದು ಒಪನ್ ಹಾರ್ಟ್ ಸರ್ಜರಿ ಆಗುತ್ತದೆ. ನಿಮ್ಮಪ್ಪ ಆರ್ಎಸ್ಎಸ್ಗೇ ಹೆದರಿಲ್ಲ, ಇನ್ನು ನಿಮಗೆ ಹೆದರುವೆನಾ? ನೀವು ತಪ್ಪು ಮಾಡಿದ್ದರೆ ಅರೆಸ್ಟ್ ಮಾಡಿಯೇ ಮಾಡುತ್ತೇವೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಾನು ಮಾತನಾಡಲು ನಿಂತರೆ ಇನ್ನೊಂದು ಒಪನ್ ಹಾರ್ಟ್ ಸರ್ಜರಿ ಆಗುತ್ತದೆ. ನಿಮ್ಮಪ್ಪ ಆರ್ಎಸ್ಎಸ್ಗೇ ಹೆದರಿಲ್ಲ, ಇನ್ನು ನಿಮಗೆ ಹೆದರುವೆನಾ? ನೀವು ತಪ್ಪು ಮಾಡಿದ್ದರೆ ಅರೆಸ್ಟ್ ಮಾಡಿಯೇ ಮಾಡುತ್ತೇವೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದರು.
ವಿಧಾನಸೌಧ ಆವರಣದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿಯವರಿಗೆ ನಾನು ಮರ್ಯಾದೆ ಕೊಟ್ಟು ಮಾತನಾಡುತ್ತಿದ್ದೇನೆ. ಆದರೆ, ನಿಮ್ಮ ಗೌರವ ನೀವೇ ಹಾಳು ಮಾಡಿಕೊಳ್ಳುತ್ತಿದ್ದೀರಿ. ಏಕವಚನದಲ್ಲಿ ಮಾತನಾಡಿದರೆ ನಾನು ಹೆದರುತ್ತೇನೆ ಎಂದು ಭಾವಿಸಿದ್ದರೆ ತಪ್ಪು. ನಿಮ್ಮಪ್ಪ ಆರ್ಎಸ್ಎಸ್ಗೇ ಹೆದರಿಲ್ಲ, ನಿಮಗೇಕೆ ಹೆದರಲಿ? ಎಂದರು.
ತನಿಖೆ ಮಾಡುವುದನ್ನು ಯಾರಪ್ಪನ ಬಳಿಯೂ ಕಲಿಯಬೇಕಿಲ್ಲ. ಕುಮಾರಸ್ವಾಮಿಯಿಂದಲೂ ಕಲಿಯಬೇಕಿಲ್ಲ. ತನಿಖೆಗೆ ಸಹಕಾರ ಮಾಡುವಂತಿದ್ದರೆ ಮಾಡಿ, ಇಲ್ಲದಿದ್ದರೆ ನಾಲಿಗೆ ಮೇಲೆ ಲಗಾಮು ಇಟ್ಟುಕೊಂಡು ಮಾತನಾಡಿ. ನೀವು ಹೇಳಿದ್ದೆಲ್ಲ ಕೇಳಲು ನಾವು ಇದ್ದೀವಾ? ನಿಮ್ಮ ಮನೆಯ ಆಳು ಮಕ್ಕಳಾ ನಾವು? ಎಂದು ಪ್ರಿಯಾಂಕ್ ಕಿಡಿ ಕಾರಿದರು.
ವೈಯಕ್ತಿಕವಾಗಿ ನನ್ನ ಬಗ್ಗೆ ಮಾತನಾಡಿದರೆ ನಾನು ಕೇಳಿಸಿಕೊಂಡು ಸುಮ್ಮನಿರಲ್ಲ. ನಿಮ್ಮ ಕುರ್ಚಿಗೆ, ವಯಸ್ಸಿಗೆ ಗೌರವ ಕೊಟ್ಟು ಸಾಕಾಗಿದೆ. ನಾನು ಮಾತನಾಡಲು ಆರಂಭಿಸಿದರೆ ಇನ್ನೊಂದು ಓಪನ್ ಹಾರ್ಟ್ ಸರ್ಜರಿ ಆಗುತ್ತದೆ. ನೀವು ನನಗೆ ನಿಂದಿಸುವುದರಿಂದ ಯಾವುದೇ ಪ್ರಯೋಜನ ಇಲ್ಲ. ದಯವಿಟ್ಟು ನಿಮ್ಮ ನಾಲಿಗೆ ಮೇಲೆ ಹಿಡಿತ ಇರಲಿ. ನನ್ನ ಬಾಯಿ ತೆಗೆಸಬೇಡಿ. ನನಗಿಂತ ವಯಸ್ಸಲ್ಲಿ ದೊಡ್ಡವರು ಎಂದು ಭಾವಿಸಿದ್ದೆ. ಆದರೆ, ನೀವು ಸುಧೀರ್ಘ ರಾಜಕೀಯದಲ್ಲಿ ಏನನ್ನೂ ಕಲಿತಿಲ್ಲ ಎಂದು ಪ್ರಿಯಾಂಕ್ ವಾಗ್ದಾಳಿ ನಡೆಸಿದರು.
ಮಾಹಿತಿ ಆಧರಿಸಿ ವಶಕ್ಕೆ: ಸ್ಟಿಂಗ್ ಆಪರೇಷನ್ ದೂರಿನ ವಿಚಾರಣೆ ವೇಳೆ ಕೆಲ ಹೆಸರುಗಳು ಕೇಳಿ ಬಂದಿದ್ದವು. ಹೀಗಾಗಿ, ಸಂಬಂಧಿಸಿದವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅದನ್ನು ಬಿಟ್ಟು ಕುಮಾರಸ್ವಾಮಿ ಹೇಳಿದಂತೆ ತನಿಖೆ ನಡೆಸಬೇಕಾ? ಅವರಿಂದ ನಾವು ತನಿಖೆಯ ಪಾಠ ಕಲಿಯಬೇಕಿಲ್ಲ? ಆರೋಪಿಗಳು ಯಾರು ಎಂಬ ಮಾಹಿತಿ ನಿಮ್ಮ ಬಳಿ ಇದೆಯೇ? ಅವರೇನು ಕಾವಲು ಕಾಯುತ್ತಿದ್ದಾರಾ? ಎಂದು ಖರ್ಗೆ ಪ್ರಶ್ನಿಸಿದರು.
ಕುಮಾರಸ್ವಾಮಿಯವರು ಸಾಕ್ಷಿ ಇದ್ದರೆ ಪೊಲೀಸರಿಗೆ ಅಥವಾ ನ್ಯಾಯಾಲಯಕ್ಕೆ ಸಲ್ಲಿಸಲಿ. ಪೊಲೀಸರು ತನಿಖೆ ಮಾಡುತ್ತಾರೆ. ಅದನ್ನು ಬಿಟ್ಟು ನನ್ನ ತಂದೆಯವರ ಬಗ್ಗೆ ಮಾತನಾಡಿದರೆ ಎಲ್ಲಾ ಬಯಲಿಗೆ ಬರುತ್ತದೆ. ಗಾಳಿಯಲ್ಲಿ ಗುಂಡು ಹೊಡೆಯುವುದು ನಿಲ್ಲಿಸಬೇಕು. ಕುಮಾರಸ್ವಾಮಿ ಅವರನ್ನು ನಾನು ಅರೆಸ್ಟ್ ಮಾಡುತ್ತೇನೆ ಎಂದು ಹೇಳಿದ್ದೇನಾ? ಸಾಕ್ಷಿ ಇದ್ದರೆ ತಪ್ಪಿತಸ್ಥರನ್ನು ಒಳಗೆ ಹಾಕುತ್ತೇವೆ ಎಂದು ಖರ್ಗೆ ತಿಳಿಸಿದರು.ತಪ್ಪು ಮಾಡಿದ್ದರೆ ಅರೆಸ್ಟ್:
ತಾಕತ್ತಿದ್ದರೆ ನನ್ನನ್ನು ಅರೆಸ್ಟ್ ಮಾಡಲಿ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಅವರನ್ನು ಅರೆಸ್ಟ್ ಮಾಡಲು ಹೇಗೆ ಸಾಧ್ಯ? ತಾಕತ್ತಿದ್ದರೆ ದಾಖಲೆ ಕೊಡಲಿ. ದಾಖಲೆ ಇಲ್ಲದೇ ಹೇಗೆ ಅರೆಸ್ಟ್ ಮಾಡಲು ಬರುತ್ತದೆ? ನೀವು ತಪ್ಪು ಮಾಡಿದ್ದರೆ ಅರೆಸ್ಟ್ ಮಾಡಿಯೇ ಮಾಡುತ್ತೇವೆ ಎಂದರು. ನನಗೆ 4ನೇ ಬಾರಿಗೆ ಹಾರ್ಟ್ ಸರ್ಜರಿ ಆಗ್ಲೆಂದು ಪ್ರಿಯಾಂಕ್ ಬಯಕೆ: ಎಚ್ಡಿಕೆ;‘ಬ್ಲಾಕ್ ಮೇಲ್ ಮಾಡೋರಿಗೆ ರಕ್ಷಣೆ ಕೊಡುವುದಕ್ಕೆ ಹಾಗೂ ಇಷ್ಟ ಬಂದವರನ್ನೆಲ್ಲ ಕರೆಸಿ ವಿಚಾರಣೆ ನಡೆಸುವುದಕ್ಕೆ ಗೃಹ ಇಲಾಖೆ ಏನು ನಿಮ್ಮ ಅಪ್ಪ ನಿಮಗೆ ಕೊಟ್ಟ ಬಳುವಳಿ ಅಲ್ಲ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾಚಿಕೆ ಇಲ್ಲದೆ ಬ್ಲಾಕ್ ಮೇಲ್ ಮಾಡುವ ದುಷ್ಟರಿಗೆ ರಕ್ಷಣೆ ಕೊಡುತ್ತಾರೆ. ಅದನ್ನು ಪ್ರಶ್ನಿಸಿದ ನನ್ನನ್ನು ವಿಚಾರಣೆಗೆ ಕರೆಯುತ್ತಾರಂತೆ. ನಾನೇನು ನಿಮ್ಮಪ್ಪನ ಗಂಟು ತಿಂದಿದ್ದೀನಾ? ಬಂದು ಟಚ್ ಮಾಡಿ ನೋಡೋಣ. ಏನ್ ನಿನಗೆ ಇಷ್ಟ ಬಂದೋರೆನ್ನೆಲ್ಲ ಕರೆಸಿ ವಿಚಾರಣೆ ಮಾಡೋದಕ್ಕೆ ಗೃಹ ಇಲಾಖೆಯನ್ನು ನಿಮ್ಮಪ್ಪ ಕೊಟ್ಟಿಲ್ಲ ದರ್ಬಾರ್ ಮಾಡೋದಕ್ಕೆ ಎಂದು ಹರಿಹಾಯ್ದರು.ಜನರ ಹಿತಕ್ಕಾಗಿ ದುಡಿಯುತ್ತಿರುವ ನನಗೆ ಅವರ ಇಚ್ಛೆಯಂತೆಯೇ ನಾಲ್ಕನೇ ಬಾರಿ ಹೃದಯಾಘಾತ ಆಗಲಿ. ಅವರು ನನ್ನ ಸಾವು ಬಯಸುತ್ತಿದ್ದಾರೆ. ಆದರೆ, ನಾನು ಜನರ ಹಿತದ ದೃಷ್ಟಿಯಿಂದ ಹೋರಾಟ ನಡೆಸುತ್ತಿದ್ದೇನೆ. ನನಗೆ ನಾಲ್ಕನೇ ಬಾರಿ ಹೃದಯಾಘಾತ ಆಗಿಬಿಡಲಿ, ಓಪನ್ ಹಾರ್ಟ್ ಸರ್ಜರಿ ಆಗಲಿ ಎನ್ನುವುದು ಗೃಹ ಸಚಿವರ ಬಯಕೆ ಎಂದು ತಿರುಗೇಟು ನೀಡಿದರು.ನಿಮ್ಮ ಮುಖ್ಯಮಂತ್ರಿ ಅವರು ಸ್ಟಿಂಗ್ ಆಪರೇಷನ್ ಮಾಡುವವರ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ. ಸ್ಟಿಂಗ್ ಮಾಡೋನು ರಾಜಾರೋಷವಾಗಿ ತಿರುಗುತ್ತಿದ್ದಾನೆ. ಅವನನ್ನು ಟಚ್ ಮಾಡುವುದಕ್ಕೆ ನಿಮಗೆ ಯೋಗ್ಯತೆ ಇಲ್ಲ. ಇಲ್ಲಿ ಬಂದು ಜೆಡಿಎಸ್ ಹುಡುಗರಿಗೆ ಹೆದರಿಸುವುದಕ್ಕೆ ಬರುತ್ತಿರಿ. ಬಂದು ನೋಡು, ನನ್ನನ್ನು ಮತ್ತು ನನ್ನ ಕಾರ್ಯಕರ್ತರನ್ನು ಮುಟ್ಟಿ ನೋಡು. ಆಮೇಲೆ ಏನಾಗುತ್ತದೆ ಎಂಬುದನ್ನು ನೋಡುವಿಯಂತೆ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.
ಅಧಿಕಾರದ ಮದ ಇಳಿಸುವುದು ಗೊತ್ತಿದೆ:ಗೃಹ ಸಚಿವರ ಉದ್ದಟತನ, ಆ ಅಧಿಕಾರದ ಮದ ಇದೆಯಲ್ಲ ಅದನ್ನು ಇಳಿಸುವುದು ಹೇಗೆ ಎಂದು ನಮಗೆ ಗೊತ್ತಿದೆ. ಅದನ್ನು ಇಳಿಸೋಣಂತೆ ಎಂದು ಗುಡುಗಿದರು.
ಯಾವ ಕೆಪಿಎಸ್ಸಿ ಬಗ್ಗೆ ಇವತ್ತು ಯಾವ ಉತ್ತರ ಕೊಟ್ಟಿದ್ದೀರಿ ಪ್ರಿಯಾಂಕ್ ಖರ್ಗೆಯವರೇ? ನಾಲ್ಕು ಅಧಿಕಾರಿಗಳ ನೇಮಕವನ್ನು ಹೈಕೋರ್ಟ್ ಆದೇಶಿಸಿದರೆ ಸುಪ್ರೀಂಕೋರ್ಟ್ಗೆ ಯಾಕೆ ಹೋದಿರಿ? ನಿಮ್ಮ ಗೃಹ ಇಲಾಖೆಯಲ್ಲಿ ನಿಮಗೆ ಬೇಕಾದವರನ್ನೇ ಹಾಕಬೇಕು ಅಂತ ತೀರ್ಮಾನ ಮಾಡಿದ್ದೀರಿ. ನಿಮಗೆ ಬೇಕಾದ ರೀತಿಯಲ್ಲಿ ತನಿಖೆ ಬರೆಸಿಕೊಳ್ಳುತ್ತಿರುವುದನ್ನು ನೋಡಿದರೆ ಗೊತ್ತಾಗುವುದಿಲ್ಲವೇ ನಿಮ್ಮ ಹಣೆಬರಹ ಎಂದು ಲೇವಡಿ ಮಾಡಿದರು.ಮುಖ್ಯಮಂತ್ರಿಗಳು ತಮ್ಮ ಬಗ್ಗೆ ಮಾತನಾಡುತ್ತಿಲ್ಲ, ಆದರೆ ಗೃಹ ಸಚಿವರು ಪ್ರತಿದಿನ ಬೆಳಗ್ಗೆ ಎದ್ದು ಮಾತನಾಡುತ್ತಿದ್ದಾರೆ. ಆ ಗೃಹ ಸಚಿವರಿಗೆ ಮೊದಲು ಲಗಾಮು ಹಾಕಿ. ಲಗಾಮು ಇಟ್ಟುಕೊಂಡು ಸರಿಯಾದ ದಾರಿಯಲ್ಲಿ ಕೆಲಸ ಮಾಡಿ. ನೀವು ಕೆರಳಿಸಿ ಮಾತನಾಡುವುದರಿಂದಲೇ ನಾವು ನಿಮಗೆ ಅದೇ ಭಾಷೆಯಲ್ಲಿ ಪ್ರತ್ಯುತ್ತರ ಕೊಡಬೇಕಾಗಿದೆ ಎಂದು ಕುಮಾರಸ್ವಾಮಿ ತೀಕ್ಷ್ಣವಾಗಿ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.