ಕನ್ನಡಪ್ರಭ ವಾರ್ತೆ ಮೈಸೂರುಚುನಾವಣಾ ಆಯೋಗದ ಸರ್ವಾಧಿಕಾರಿ ನಡೆ ಖಂಡಿಸಿ, ಎಸ್‌ಐಆರ್ ಪ್ರಕ್ರಿಯೆಯನ್ನು ಪ್ರಜಾತಾಂತ್ರಿಕಗೊಳಿಸಲು ಆಗ್ರಹಿಸಿ ಎಸ್‌ಐಆರ್ ವಿರೋಧಿ ಜಾತ್ಯತೀತ ಪಕ್ಷಗಳು, ಜನಪರ ಸಂಘಟನೆಗಳ ಒಕ್ಕೂಟದಿಂದ ಬಾಯಿಗೆ ಕಪ್ಪುಪಟ್ಟಿ ಧರಿಸಿ ಜಿಲ್ಲಾಧಿಕಾರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟಿಸಿದರು.ಎಸ್‌ಐಆರ್ ಪ್ರಕ್ರಿಯೆಯನ್ನು ಪ್ರಜಾತಾಂತ್ರಿಕಗೊಳಿಸಲು ನಾಲ್ಕು ಪ್ರಮುಖ ಹಕ್ಕೊತ್ತಾಯಗಳನ್ನು ಪರಿಗಣಿಸಿ ಉತ್ತರಿಸಬೇಕು ಎಂದು ರಾಜ್ಯಾದ್ಯಂತ ಪ್ರತಿಭಟಿಸಲಾಗಿತ್ತು. ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿರೋಧ ಸಮಾವೇಶದಲ್ಲಿ ಹಕ್ಕೊತ್ತಾಯ ಸ್ವೀಕರಿಸಿ, ನಾವು ಹೇಳುತ್ತಿರುವುದರಲ್ಲಿ ತಪ್ಪೇನು ಎನ್ನುವುದನ್ನಾದರೂ ನಾಗರಿಕ ಸಮಾಜಕ್ಕೆ ಸ್ಪಷ್ಟನೆ ಕೊಡಬೇಕು ಎಂದು ಆಹ್ವಾನ ನೀಡಿದ್ದೇವು. ಸಾಹಿತಿಗಳು, ಚಿಂತಕರು, ಕಲಾವಿದರು, ರಂಗಕರ್ಮಿಗಳು ಕೂಡ ಬಹಿರಂಗ ಪತ್ರ ಬರೆದಿದ್ದರು. ಅಲ್ಲದೆ, ರಾಜ್ಯ ಸರ್ಕಾರ ಬರೆದಿರುವ ಪತ್ರಕ್ಕೂ ಚುನಾವಣಾ ಆಯೋಗ ಉತ್ತರಿಸುತ್ತಿಲ್ಲ ಎಂದು ಅವರು ಆರೋಪಿಸಿದರು.ಇದ್ಯಾವುದಕ್ಕೂ ಪ್ರತಿಕ್ರಿಯೆ ಕೊಡದೇ ಇರುವುದು ಪ್ರಜಾತಾಂತ್ರಿಕ ನಡವಳಿಕೆ ಅಲ್ಲ. ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಪ್ರತಿಯೊಂದು ಸಾರ್ವಜನಿಕ ಸಂಸ್ಥೆಯೂ ಸಾರ್ವಜನಿಕ ಪ್ರಶ್ನೆಗಳಿಗೆ ಉತ್ತರಿಸಬೇಕಿರುವುದು ಆಯೋಗದ ಕರ್ತವ್ಯ. ಇದು ಮೂಲಭೂತ ಕರ್ತವ್ಯಗಳ ಉಲ್ಲಂಘನೆ. ಸಂವಿಧಾನ ವಿರೋಧಿ ನಡೆ ಎಂದು ಅವರು ಕಿಡಿಕಾರಿದರು.ಕೂಡಲೇ ಚುನಾವಣಾ ಆಯೋಗ ತನ್ನ ಸರ್ವಾಧಿಕಾರಿ ಧೋರಣೆ ತೊರೆದು, ನಮ್ಮ ಹಕ್ಕೊತ್ತಾಯಗಳಿಗೆ ಉತ್ತರಿಸಬೇಕು. ನಾಗರಿಕ ಸಮಾಜದ ಹಕ್ಕೊತ್ತಾಯಗಳನ್ನು ಪರಿಶೀಲಿಸಬೇಕು. ಲಾಜಿಕಲ್ ಡಿಪೆನ್ಸಿ ಸಾಫ್ಟ್ ವೇರ್ ಬಳಸಿ ಲಕ್ಷಾಂತರ ಜನರ ಹೆಸರನ್ನು ಡಿಲೀಟ್ ಮಾಡಬಾರದು. ಸಾರ್ವಜನಿಕರಿಗೆ ಅಪೀಲ್ ಹಾಕಲು ಸೂಕ್ತ ಸಮಯಾವಕಾಶ ನೀಡಬೇಕು. ಇಲ್ಲದಿದ್ದರೆ ಬೃಹತ್ ಜನಾಂದೋಲನ ರೂಪಿಸಲಾಗುವುದು ಎಂದು ಅವರು ಎಚ್ಚರಿಸಿದರು.ಒಕ್ಕೂಟದ ಪ್ರೊ. ಕಾಳಚನ್ನೇಗೌಡ, ಇ. ರತಿರಾವ್, ವರದಯ್ಯ, ಜೀವಿಕ ಉಮೇಶ್, ಜವರಯ್ಯ, ಪ್ರೊ. ಸಹಿಬಾ ಭೂಮಿಗೌಡ, ನಾಗರಾಜ್, ವಿನೋದ್ ರಾವ್, ಬಸವರಾಜ್, ಚಂದ್ರಶೇಖರಮೂರ್ತಿ, ಬಿ.ಆರ್. ರಾಜು, ಡಾ. ಮಹೇಶ್ ದಳಪತಿ, ಡಾ.ಮ.ಪು. ಪೂರ್ಣಾನಂದ, ಬಸವರಾಜ್, ಅಕ್ಬರ್ ಪಾಷ, ಕಮಲ್ ಗೋಪಿನಾಥ್, ರೂಪಾ, ನೆಲೆಹಿನ್ನಲೆ ಗೋಪಾಲಕೃಷ್ಣ, ಏಜಾಜ್ ಪಾಷ, ಮಾದಪ್ಪ, ಪ್ರದೀಪ್, ಶಿವರಾಜ್, ಶಿವಪ್ಪ ಶೆಟ್ಟಿ, ಬಸವರಾಜ್, ಲಕ್ಷ್ಮಮ್ಮ, ಚಲುವರಾಜ್, ಲೋಕೇಶ್, ಪ್ರದೀಪ್ ಮೊದಲಾದವರು ಇದ್ದರು.