ಮೈಸೂರು ವಿವಿ: ಮೌಲ್ಯಭವನದಲ್ಲೇ ಇನ್ನುಂದೆ ಸ್ನಾತಕೋತ್ತರ ಪರೀಕ್ಷೆ..!

KannadaprabhaNewsNetwork |  
Published : Jul 11, 2025, 12:31 AM IST
23 | Kannada Prabha

ಸಾರಾಂಶ

ಮೈಸೂರು ವಿಶ್ವವಿದ್ಯಾನಿಲಯದ 54 ವಿಭಾಗಗಳ ವಿದ್ಯಾರ್ಥಿಗಳು ಒಂದೇ ಸೂರಿನಡಿ ಪರೀಕ್ಷೆ ಬರೆದಾಗ ಸಾರ್ಥಕ ಭಾವನೆ ಬರುತ್ತದೆ. ಇದರಿಂದ ವಿದ್ಯಾರ್ಥಿಗಳಿಗೂ ಪರೀಕ್ಷೆಯ ಬಗ್ಗೆ ಶಿಸ್ತು ಬರಲಿದೆ. ಈವರೆಗೆ ಆಯಾ ವಿಭಾಗಗಳಲ್ಲೇ ಪರೀಕ್ಷೆಗಳು ನಡೆಯುತ್ತಿದ್ದಾಗ ಅದೇ ವಿಭಾಗಗಳ ಅಧ್ಯಾಪಕರು, ಪರಿವೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಕನ್ನಡಪ್ರಭ ವಾರ್ತೆ ಮೈಸೂರು

ಶತಮಾನ ಪೂರೈಸಿರುವ ಮೈಸೂರು ವಿಶ್ವವಿದ್ಯಾನಿಲಯವು ಇದೇ ಮೊದಲ ಬಾರಿಗೆ ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಒಂದೇ ಸೂರಿನಡಿ ನಡೆಸುವ ಮೂಲಕ ಪರೀಕ್ಷಾ ಚಟುವಟಿಕೆಗಳಲ್ಲಿ ಸುಧಾರಣೆಗೆ ಮುನ್ನುಡಿ ಬರೆದಿದೆ.

ಈವರೆಗೆ ಆಯಾಯ ಅಧ್ಯಯನ ವಿಭಾಗಗಳಲ್ಲೇ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಆದರೆ, 2025-26ನೇ ಶೈಕ್ಷಣಿಕ ವರ್ಷದಲ್ಲಿ ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಮೈಸೂರು ವಿವಿಯ ಮೌಲ್ಯ ಭವನದಲ್ಲಿ ನಡೆಸಲಾಗುತ್ತದೆ. ಪ್ರಸಕ್ತ ಶೈಕ್ಷಣಿಕ ಸಾಲಿನ 2ನೇ ಮತ್ತು ನಾಲ್ಕನೇ ಸೆಮಿಸ್ಟರ್ ಸ್ನಾತಕೋತ್ತರ ಪದವಿ ಪರೀಕ್ಷೆಗಳು ಜು. 3 ರಿಂದಲೇ ಪ್ರಾರಂಭವಾಗಿದ್ದು, ಈ ಮೂಲಕ ಮೈಸೂರು ವಿವಿಯು ಮಹತ್ವದ ಹೆಜ್ಜೆ ಇರಿಸಿದೆ.

ವಿಶ್ವವಿದ್ಯಾನಿಲಯದ 54 ವಿಭಾಗಗಳ ವಿದ್ಯಾರ್ಥಿಗಳು ಒಂದೇ ಸೂರಿನಡಿ ಪರೀಕ್ಷೆ ಬರೆದಾಗ ಸಾರ್ಥಕ ಭಾವನೆ ಬರುತ್ತದೆ. ಇದರಿಂದ ವಿದ್ಯಾರ್ಥಿಗಳಿಗೂ ಪರೀಕ್ಷೆಯ ಬಗ್ಗೆ ಶಿಸ್ತು ಬರಲಿದೆ. ಈವರೆಗೆ ಆಯಾ ವಿಭಾಗಗಳಲ್ಲೇ ಪರೀಕ್ಷೆಗಳು ನಡೆಯುತ್ತಿದ್ದಾಗ ಅದೇ ವಿಭಾಗಗಳ ಅಧ್ಯಾಪಕರು, ಪರಿವೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈಗ ಬೇರೆ ಬೇರೆ ವಿಭಾಗದವರು ಪರಿವೀಕ್ಷಕರಾಗಿ ಪರೀಕ್ಷೆಯ ಮೇಲ್ವಿಚಾರಣೆ ನಡೆಸುವಂತಾಗಿದೆ. ವಿದ್ಯಾರ್ಥಿಗಳು ಅತ್ತ ಇತ್ತ ತಿರುಗಿ ನೋಡುವ ಪರಿಪಾಟಕ್ಕೂ ಬ್ರೇಕ್ ಬಿದ್ದಿದೆ.

ಸದ್ಯ ಸ್ನಾತಕೋತ್ತರ ಪದವಿಯ 2ನೇ ಮತ್ತು 4ನೇ ಸೆಮಿಸ್ಟರ್‌ ಗಳಲ್ಲಿ ಒಟ್ಟು 4,500 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷೆಗಳು ಎರಡು ಅವಧಿಗಳಲ್ಲಿ ನಡೆಯುತ್ತಿವೆ ಎನ್ನುತ್ತಾರೆ ಮೈಸೂರು ವಿಶ್ವವಿದ್ಯಾನಿಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಎನ್. ನಾಗರಾಜು.

ಈ ಹಿಂದೆ ಪರೀಕ್ಷಾ ಸಮಯದಲ್ಲಿ ನಿತ್ಯ ಆಯಾ ವಿಭಾಗಕ್ಕೆ ಹೋಗಿ ಪ್ರಶ್ನೆ ಪತ್ರಿಕೆ ನೀಡುವುದು, ಬಳಿಕ ಉತ್ತರ ಪತ್ರಿಕೆ ಸಂಗ್ರಹಿಸುವ ಕಾರ್ಯ ಮಾಡಲಾಗುತ್ತಿತ್ತು. ಇದರಿಂದ ವಿವಿ ಆರ್ಥಿಕತೆಗೂ ಪಟ್ಟು ಬೀಳುತ್ತಿತ್ತು. ಆದರೆ, ಇದೀಗ ಎಲ್ಲಾ ವಿಭಾಗಗಳ ಪರೀಕ್ಷೆಗಳು ಒಂದೇ ಸೂರಿನಡಿ ನಡೆಯುವುದರಿಂದ ವಿವಿಗೆ ಆರ್ಥಿಕ ಅನುಕೂಲ ಆಗಲಿದೆ. ಅಲ್ಲದೇ, ಈ ಹೊಸ ವ್ಯವಸ್ಥೆಗೆ ವಿದ್ಯಾರ್ಥಿಗಳೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೌಲ್ಯಭವನದಲ್ಲಿ ಪರೀಕ್ಷೆಗಳು ಯಾವುದೇ ಸಮಸ್ಯೆಗಳಿಲ್ಲದೆ ನಡೆಯುತ್ತದೆ.

ಐಎಎಸ್‌, ಕೆಎಎಸ್‌, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ

ಮೈಸೂರು: ನಗರದ ಜ್ಞಾನಬುತ್ತಿ ಸಂಸ್ಥೆಯಿಂದ ಐಎಎಸ್‌, ಕೆಎಎಸ್‌ ಮತ್ತು ಕರ್ನಾಟಕ ಸರ್ಕಾರವು ಶೀಘ್ರದಲ್ಲಿಯೇ ಲಿಖಿತ ಪರೀಕ್ಷೆ ಮೂಲಕ ನೇಮಕಾತಿ ಮಾಡಿಕೊಳ್ಳಲಿರುವ ವಿವಿಧ ಹುದ್ದೆಗಳ ನೇಮಕಾತಿಗೆ ನಡೆಸಲಿರುವ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಗೆ ಉಚಿತ ತರಬೇತಿ ನೀಡಲಿದೆ. ಆಸಕ್ತರು ಜು. 12ರೊಳಗೆ ಸಂಜೆ 5.30 ರಿಂದ 7.30ರವರೆಗೆ ನಗರದ ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಆವರಣದಲ್ಲಿರುವ ಜ್ಞಾನಬುತ್ತಿ ಸಂಸ್ಥೆಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಸಂಸ್ಥೆಯ ಕಾರ್ಯದರ್ಶಿ ಎಚ್‌.ಬಾಲಕೃಷ್ಣ, ಮೊ. 94481174455 ಸಂಪರ್ಕಿಸಬಹುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುಪ್ರಿಮ್‌ ಶಾಲೆಯಲ್ಲಿ ಮಕ್ಕಳು ವಿವಿಧ ಸಾಂಸ್ಕೃತಿಕ ಸಂಭ್ರಮೋತ್ಸವ
ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಶ್ರೀಗಳ ಸಂತಾಪ