ಕನ್ನಡಪ್ರಭ ವಾರ್ತೆ ಮೈಸೂರು
ಮಹಿಳೆಯರು ತಮ್ಮದೇ ಆದ ಅಸ್ತಿತ್ವವನ್ನು ಸೃಷ್ಠಿಸಿಕೊಳ್ಳಬೇಕು ಎಂದು ಮೈಸೂರು ವಿವಿ ಕುಲಸಚಿವೆ ಎಂ.ಕೆ. ಸವಿತಾ ತಿಳಿಸಿದರು.ನಗರದ ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಗುರುತಿಸಿಕೊಳ್ಳಲು ಸದೃಢ ಆತ್ಮವಿಶ್ವಾಸವನ್ನು ಹೊಂದಿರಬೇಕು. ಸಮಾಜದಲ್ಲಿ ಮಹಿಳೆಯರಿಗೆ ನಿರ್ಭೀತ ವಾತಾವರಣ ನಿರ್ಮಾಣ ಮಾಡಬೇಕು. ರಾಷ್ಟ್ರವನ್ನು ಬಲಪಡಿಸುವಲ್ಲಿ ಮಹಿಳೆಯರು ಅತ್ಯಂತ ಮಹತ್ವದ ಪಾತ್ರವಹಿಸುತ್ತಾರೆ ಎಂದು ಹೇಳಿದರು. ಜೊತೆಯಾಗಿ ಸಾಗಬೇಕುಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಕುಲಪತಿ ಪ್ರೊ. ಪದ್ಮಾಶೇಖರ್ ಮಾತನಾಡಿ, ಸಮಾಜದಲ್ಲಿ ಸಮತೋಲನ ನಿರ್ಮಾಣ ಮಾಡಲು ಮಹಿಳೆಯರು ಮತ್ತು ಪುರುಷರು ಜೊತೆಯಾಗಿ ಸಾಗಬೇಕು. ಪುರುಷರಿಗಿಂತ ಮಹಿಳೆಯರು ಹೆಚ್ಚು ಸಹಾನುಭೂತಿ ಹೊಂದಿದ್ದಾರೆ. ಅದು ಅವರ ವ್ಯಕ್ತಿತ್ವವನ್ನು ನಿರ್ಮಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು ಪುರುಷರ ಪಾತ್ರವು ಮುಖ್ಯವಾದದ್ದು. ವಿದ್ಯಾವಂತ ಮಹಿಳೆ ಆರ್ಥಿಕ ಸದೃಢತೆ ಹೊಂದಿ ಬದುಕು ರೂಪಿಸಿಕೊಳ್ಳುವುದಕ್ಕ್ಕೆ ಸಾಧ್ಯವಿದೆ ಎಂದು ಅವರು ತಿಳಿಸಿದರು.ಕಾಲೇಜಿನ ಹಿರಿಯ ವಿದ್ಯಾರ್ಥಿನಿ, ಸುದ್ದಿ ನಿರೂಪಕಿ ಸಿಂಧೂರಾ ಗಂಗಾಧರ್ ಮಾತನಾಡಿ, ಮಹಿಳಾ ದಿನಾಚರಣೆ ಸಂಭ್ರಮ ಮಾತ್ರವಲ್ಲ ಅದು ಒಂದು ಜವಾಬ್ದಾರಿ. ಹೆಣ್ಣು ಸಾಧನೆಯ ಹಾದಿಯಲ್ಲಿ ಬರುವ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸುವ ಆತ್ಮಸ್ಥೈರ್ಯವನ್ನು ಹೊಂದಬೇಕು. ಹೆಣ್ಣು ಸ್ವತಂತ್ರವಾಗಿರಲು ಏಕೈಕ ಮಾರ್ಗವೆಂದರೆ ಶಿಕ್ಷಣ. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಶ್ರೇಷ್ಟವಾದದ್ದು. ಹೆಣ್ಣು ಸಾಧನೆಯ ಮೆಟ್ಟಿಲೇರಿದಾಗ ಅದು ಮನದಲ್ಲಿರಬೇಕೆ ಹೊರತು ತಲೆಗೇರಿಸಿಕೊಂಡು ಅಹಂಕಾರ ಪಡಬಾರದು ಎಂದು ಹೇಳಿದರು.ಕಾಲೇಜಿನ ಪ್ರಾಂಶುಪಾಲ ಡಾ. ರೇಚಣ್ಣ, ಯೂತ್ ರೆಡ್ ಕ್ರಾಸ್ ಸಂಚಾಲಕಿ ಎನ್. ನಾಗಲಾಂಬಿಕೆ, ಮಹಿಳಾ ಸಬಲೀಕರಣ ಕೋಶ ಸಂಚಾಲಕಿ ಪಿ. ವಸುಮತಿ ಇದ್ದರು. ಧಾತ್ರಿ ಮತ್ತು ವೃಂದದವರು ಪ್ರಾರ್ಥಿಸಿದರು. ಜೆ. ಪುಷ್ಪಲತಾ ನಿರೂಪಿಸಿದರು.