ಬಳ್ಳಾರಿಯಲ್ಲಿ ಮೈಸೂರಿನ ಯದುವೀರ್ ಚುನಾವಣಾ ಪ್ರಚಾರ

KannadaprabhaNewsNetwork |  
Published : May 05, 2024, 02:01 AM IST
ಬಳ್ಳಾರಿಯ ಜೈನ್ ಮಾರುಕಟ್ಟೆಯಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಮೈಸೂರಿನ ರಾಜಮನೆತನದ ಯದುವೀರ್ ಅವರನ್ನು ಜೈನ್ ಸಮಾಜದ ಮಹಿಳೆಯರು ಸ್ವಾಗತಿಸಿಕೊಂಡರು.  | Kannada Prabha

ಸಾರಾಂಶ

ಬಳ್ಳಾರಿ ಜೀನ್ಸ್ ಉದ್ಯಮ ಪ್ರಗತಿಗೂ ನರೇಂದ್ರ ಮೋದಿ ಕ್ರಮ ವಹಿಸಲಿದ್ದಾರೆ. ಕೇಂದ್ರದ ಅನೇಕ ನಿಲುವಿನಿಂದ ವ್ಯಾಪಾರಿಗಳಿಗೂ ಅನುಕೂಲವಾಗಿದೆ.

ಬಳ್ಳಾರಿ: ನಗರದ ಜೈನ ಮಾರುಕಟ್ಟೆ, ತಾಲೂಕಿನ ಗೋನಾಳ್ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರ ಮೈಸೂರಿನ ರಾಜಮನೆತನದ ಯದುವೀರ್ ಶನಿವಾರ ಪ್ರಚಾರ ನಡೆಸಿದರು.

ಇಲ್ಲಿನ ಜೈನ ಮಾರುಕಟ್ಟೆಗೆ ಭೇಟಿ ನೀಡಿದ ಯದುವೀರ್‌ ಸ್ಥಳೀಯರು, ಮುಖಂಡರ ಸಭೆ ನಡೆಸಿ, ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಚುನಾಯಿಸುವಂತೆ ಮನವಿ ಮಾಡಿದರು.

ಬಳ್ಳಾರಿ ಜೀನ್ಸ್ ಉದ್ಯಮ ಪ್ರಗತಿಗೂ ನರೇಂದ್ರ ಮೋದಿ ಕ್ರಮ ವಹಿಸಲಿದ್ದಾರೆ. ಕೇಂದ್ರದ ಅನೇಕ ನಿಲುವಿನಿಂದ ವ್ಯಾಪಾರಿಗಳಿಗೂ ಅನುಕೂಲವಾಗಿದೆ. ಮೈಸೂರು ಅರಸರಿಗೂ ಜೈನರಿಗೂ ಅವಿನಾಭಾವ ಸಂಬಂಧವಿದೆ. ಇದು ಮುಂದುವರಿದುಕೊಂಡು ಬಂದಿದೆ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಚುನಾಯಿಸುವ ಮೂಲಕ ನರೇಂದ್ರ ಮೋದಿ ಕೈ ಬಲಪಡಿಸಬೇಕು ಎಂದರು.

ದಲಿತ ಕೇರಿಯಲ್ಲಿ ಯದುವೀರ್ ಪ್ರಚಾರ:

ನಗರದ 17ನೇ ವಾರ್ಡ್ ವ್ಯಾಪ್ತಿಯ ಗೋನಾಳ್ ಗ್ರಾಮದ ದಲಿತಕೇರಿಗೆ ಯದುವೀರ್ ಭೇಟಿ ನೀಡಿದಾಗ ಸ್ಥಳೀಯರು ಪುಷ್ಪಾರ್ಪಣೆ ಮಾಡಿ ಸ್ವಾಗತಿಸಿಕೊಂಡರು. ಮನೆಮನೆಗೆ ತೆರಳಿ ಪ್ರಚಾರ ನಡೆಸಿದ ಯುದುವೀರ್, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸುವಂತೆ ಸ್ಥಳೀಯರಲ್ಲಿ ಮನವಿ ಮಾಡಿದರು. ಇದೇ ವೇಳೆ ದಲಿತ ಮಹಿಳೆಯ ಮನೆಗೆ ಭೇಟಿ ನೀಡಿದ ಯದುವೀರ್ ಎಳನೀರು ಸ್ವೀಕರಿಸಿದರು.

ನೀವು ಬಂದದ್ದು ಬಹಳಷ್ಟು ಸಂತಸವಾಗಿದೆ. ರಾಜರನ್ನು ಹುಡುಕಿಕೊಂಡು ಹೋಗುವ ಕಾಲವಿತ್ತು. ಆದರೆ, ರಾಜಮನೆತನದ ಯದುವೀರ್ ದಲಿತ ಕೇರಿಗೆ ಆಗಮಿಸಿದ್ದು ಸಂತಸ ತಂದಿದೆ ಎಂದು ಸ್ಥಳೀಯರು ಸಂಭ್ರಮದಿಂದ ಹೇಳಿಕೊಂಡರು.

ಇದೇ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಯದುವೀರ್, ಇದೇ ಮೊದಲ ಬಾರಿಗೆ ಬಳ್ಳಾರಿಗೆ ಬಂದಿರುವೆ. ಈ ಹಿಂದೆ ಅಂಜನಾದ್ರಿ ಬೆಟ್ಟಕ್ಕೆ ಸಾಕಷ್ಟು ಬಾರಿ ಬಂದಿರುವೆ. ಶಾಲಾ ದಿನಗಳ ಪ್ರವಾಸದಲ್ಲಿ ಹಂಪಿಗೆ ಆಗಮಿಸಿ, ವಿರೂಪಾಕ್ಷೇಶ್ವರ ದರ್ಶನ ಪಡೆದಿದ್ದೇನೆ. ಇದೀಗ ಶ್ರೀರಾಮುಲು ಪರ ಪ್ರಚಾರ ನಡೆಸಲು ಬಳ್ಳಾರಿಗೆ ಬಂದಿರುವೆ ಎಂದರು.

ಮೈಸೂರು ಮಹಾರಾಜರು ಈ ಹಿಂದಿನಿಂದಲೂ ಜನಸಾಮಾನ್ಯರೊಂದಿಗೆ ಇದ್ದವರು. ಮಹಾರಾಜರ ಕಾಲದಲ್ಲಿಯೇ ಮೀಸಲಾತಿ ಜಾರಿಗೆ ಬಂದಿದ್ದು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ರಾಜ ಕುಟುಂಬದವನಾದರೂ ನಾನು ಜನರ ಜೊತೆ ಇರಲು ಬಯಸುತ್ತೇನೆ ಎಂದರು.

ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ, ಮಾಜಿ ಬುಡಾಧ್ಯಕ್ಷ ಮಾರುತಿ ಪ್ರಸಾದ್, ಎಚ್‌.ಹನುಮಂತಪ್ಪ, ಡಾ.ಮಹಿಪಾಲ್, ಕೆ.ಎಂ. ಮಹೇಶ್ವರಸ್ವಾಮಿ ಇದ್ದರು. ದಲಿತಕೇರಿಯ ಯುವಕರು, ಮಕ್ಕಳು ಯದುವೀರ್‌ ಜತೆ ಫೋಟೋ ಕ್ಲಿಕ್ಕಿಸಿಕೊಂಡರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?