ಕನ್ನಡಪ್ರಭ ವಾರ್ತೆ ಮೈಸೂರು
ಹಿಂದೆ ಹಲವಾರು ಕಾನೂನುಗಳು ಚರ್ಚೆಗೆ ಒಳಪಟ್ಟು ತಿದ್ದುಪಡಿಗಳಾಗುತಿದ್ದವು. ಅದರಿಂದಾಗಿ ಉತ್ತಮವಾದ ಕಾನೂನು ರೂಪಿತಗೊಳ್ಳುತಿತ್ತು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಜಿ. ದಿನೇಶ್ ತಿಳಿಸಿದರು.ನಗರದ ಶಾರದಾ ವಿಲಾಸ ಕಾನೂನು ಕಾಲೇಜಿನ ಸಭಾಂಗಣದಲ್ಲಿ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯು ಮಂಗಳವಾರ ಆಯೋಜಿಸಿದ್ದ ಮೈಸೂರು ವಲಯ ಮಟ್ಟದ ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಆದರೆ, ಇತ್ತೀಚಿನ ದಿನಗಳಲ್ಲಿ ಯಾವುದೇ ಚರ್ಚೆಗಳು ಇಲ್ಲದೇ ದೋಷಗಳಿದ್ದರೂ ಕಾನೂನು ಬಿಲ್ ಗಳನ್ನು ಪಾಸ್ ಮಾಡಲಾಗುತ್ತಿದೆ. ಇಂತಹ ದೋಷ ಸರಿಪಡಿಸಲು ನ್ಯಾಯಾಲಯಗಳು ಮಧ್ಯಪ್ರವೇಶಿಸುವವ ಪರಿಸ್ಥಿತಿ ಉದ್ಭವಿಸುತ್ತಿದೆ. ಸಂಸತ್ತಿನಲ್ಲಿ ಕಾನೂನಿನ ಬಗ್ಗೆ ಜ್ಞಾನ ಇಲ್ಲದವರು ಇರುವುದರಿಂದ ಈ ಸಮಸ್ಯೆಗಳಾಗುತ್ತಿವೆ. ಹೀಗಾಗಿ, ಸಂಸತ್ತಿನಲ್ಲಿ ಕಾನೂನಿನ ಪರಿಜ್ಞಾನ ಉಳ್ಳವರ ಅವಶ್ಯಕ ಹೆಚ್ಚಿದೆ ಎಂದು ಅವರು ಹೇಳಿದರು.ಕರ್ನಾಟಕ ಸರ್ಕಾರ 2005ರಲ್ಲಿ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಸ್ಥಾಪಿಸಿದೆ. ಇದರ ಉದ್ದೇಶ ಜಾರಿಯಲ್ಲಿರುವ ಕಾನೂನುಗಳನ್ನು ಪುನರ್ ವಿಮರ್ಶೆಗೊಳಿಸಿ, ಅದರಲ್ಲಿ ಬದಲಾವಣೆ ತರುವುದ್ದಾಗಿದೆ. ಸಾಮಾಜಿಕ ವ್ಯವಸ್ಥೆಗೆ, ಸಾಮಾಜಿಕ ಅಭಿವೃದ್ಧಿಗೆ ಪೂರಕವಾಗಿ ಹೊಸದಾದ ಕಾನೂನು ರೂಪಿಸುವಲ್ಲಿ ಕಾರ್ಯ ನಿರ್ವಹಿಸುತ್ತಿದೆ. ವಿದ್ಯಾರ್ಥಿಗಳಲ್ಲಿ ಹೊಸ ಹೊಸ ಪ್ರತಿಭೆಗಳನ್ನ ಗುರುತಿಸುವಲ್ಲಿ ಕೆಲಸ ಮಾಡುತ್ತಿದೆ. ನಮ್ಮ ಸಂಸತ್ತಿನ ಬಗ್ಗೆ ಜ್ಞಾನ ತಿಳಿಸುವಲ್ಲಿ, ಸಂಶೋಧನೆ ನಡೆಸುವಲ್ಲಿ ಉಪಯುಕ್ತವಾಗುತ್ತದೆ ಎಂದರು.
ಸಂವಿಧಾನ ಕಾರಣಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ನಿರ್ದೇಶಕ ಡಾ.ಸಿ.ಎಸ್. ಪಾಟೀಲ್ ಮಾತನಾಡಿ, ಸಾವಿರಾರು ರಾಜಕಾರಣಿಗಳು ಬಂದು ಹೋದರೂ ನಮ್ಮ ಸಂವಿಧಾನವು ಸುಭದ್ರವಾದ ದೇಶವಾಗಿ ಮುನ್ನಡೆಸಿಕೊಂಡು ಹೋಗುತ್ತಿದೆ. ಇದಕ್ಕೆಲ್ಲಾ ಶ್ರೇಷ್ಠ ವ್ಯಕ್ತಿಗಳು ಸಂವಿಧಾನ ರೂಪಿಸಿದ್ದು ಕಾರಣವಾಗಿದೆ ಎಂದರು.
ಯಾವುದೇ ದೇಶದ ಸಂವಿಧಾನಗಳು 30 ರಿಂದ 40 ವರ್ಷಗಳವರೆಗೆ ಉಳಿದರೆ ಅತಿಷಯ. ಅಂತಹದರಲ್ಲಿ ನಮ್ಮ ಸಂವಿಧಾನ ತುಂಬಾ ಉತ್ಕೃಷ್ಟವಾದ, ಗುಣಮಟ್ಟದ ಸಂವಿಧಾನ. 75 ವರ್ಷಗಳಾದರೂ ನಮ್ಮ ಸಂವಿಧಾನ ಇನ್ನೂ ಸಮಸ್ಯೆಗಳಿಗೆ ಪರಿಹಾರ ನೀಡಿ ರಾಷ್ಟ್ರವನ್ನ ಮುನ್ನಡೆಸಿಕೊಂಡು ಹೋಗುತ್ತಿರುವುದು ಹೆಮ್ಮೆ ಮತ್ತು ಅಚ್ಚರಿಯ ಸಂಗತಿ ಎಂದು ಅವರು ಹೇಳಿದರು.ಭವಿಷ್ಯದಲ್ಲಿ ವಿದ್ಯಾರ್ಥಿಗಳು ಎಷ್ಟೇ ಉನ್ನತ ಮಟ್ಟಕ್ಕೆ ಬೇಕಾದರು ಏರಬಹುದು. ಇದಕ್ಕೆಲ್ಲಾ ಒಂದೇ ದಾರಿ ಶಿಕ್ಷಣ. ವಿದ್ಯಾರ್ಥಿಗಳು ಹೆಚ್ಚು ಓದಬೇಕು. ವಿದ್ಯಾರ್ಥಿ ದಿಸೆಯ ಸಮಯ ಅತ್ಯಮೂಲ್ಯವಾದದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಿ ಎಂದು ಅವರು ಕಿವಿಮಾತು ಹೇಳಿದರು.
ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಸಂಶೋಧನಾ ಮುಖ್ಯಸ್ಥ ಡಾ. ರೇವಯ್ಯ ಒಡೆಯರ್, ಶಾರದ ವಿಲಾಸ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಯ ಹಿರಿಯ ಸದಸ್ಯ ಎಸ್.ಎಲ್. ರಾಮಚಂದ್ರ, ಶಾರದ ವಿಲಾಸ ಕಾನೂನು ಕಾಲೇಜು ಪ್ರಾಂಶುಪಾಲ ಡಾ.ಬಿ.ಪಿ. ಮಹೇಶ್, ಡೀನ್ ಎ.ಎಂ. ಬೋಳಮ್ಮ ಇದ್ದರು.