ಮೈಷುಗರ್ ಮಾಜಿ ನೌಕರನಿಂದ ಆತ್ಮಹತ್ಯೆ ಬೆದರಿಕೆ

KannadaprabhaNewsNetwork |  
Published : Aug 30, 2025, 01:00 AM IST
೨೯ಕೆಎಂಎನ್‌ಡಿ-೨ಹೆಚ್.ಎನ್.ಮಹದೇವಸ್ವಾಮಿ | Kannada Prabha

ಸಾರಾಂಶ

ಕಾನೂನು ಅಭಿಪ್ರಾಯದಲ್ಲಿ ಸ್ವಯಂನಿವೃತ್ತಿ ಸೌಲಭ್ಯ, ಇತರೆ ಆರ್ಥಿಕ ಸೌಲಭ್ಯವನ್ನು ನನಗೆ ನೀಡಲು ತಿಳಿಸಿರುತ್ತದೆ. ಈ ವಿಷಯವನ್ನು ಸಭೆಯಲ್ಲಿ ತಿಳಿಸಿದ್ದು, ೨೩.೩.೨೦೨೩ರಂದು ೧೦೦ ರು. ಛಾಪಾಕಾಗದದಲ್ಲಿ ಮುಚ್ಚಳಿಕೆ ಬರೆದುಕೊಟ್ಟು ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದೆನು.

ಕನ್ನಡಪ್ರಭ ವಾರ್ತೆ ಮಂಡ್ಯ

ಸ್ವಯಂ ನಿವೃತ್ತ ಹಣ ಬಿಡುಗಡೆಗೊಳಿಸದೆ ಅನ್ಯಾಯ ಮಾಡುತ್ತಿರುವುದಾಗಿ ಆರೋಪಿಸಿ ಮೈಷುಗರ್ ಕಾರ್ಖಾನೆ ಮಾಜಿ ನೌಕರನೊಬ್ಬ ಆತ್ಮಹತ್ಯೆ ಬೆದರಿಕೆಯ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಅದೀಗ ವೈರಲ್ ಆಗಿದೆ.

ಕಾರ್ಖಾನೆಯ ಆಡಳಿತ ಮಂಡಳಿಯಿಂದ ಆಗುತ್ತಿರುವ ವಂಚನೆ ವಿರುದ್ಧ ದಯಾಮರಣ ನೀಡುವಂತೆ ಕೋರಿ ಮಾಜಿ ನೌಕರ ಎಚ್.ಎನ್.ಮಹದೇವಸ್ಥಾಮಿ ಅವರು ಆ.೧೩ರಂದೇ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಈವರೆಗೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಾಗಾಗಿ ಸೋಮವಾರದವರೆಗೆ ಗಡುವು ನೀಡುತ್ತಿದ್ದು, ಅಷ್ಟರೊಳಗೆ ನನಗೆ ಸ್ವಯಂ ನಿವೃತ್ತಿ ಹಣವನ್ನು ಬಿಡುಗಡೆಗೊಳಿಸದಿದ್ದರೆ ನನ್ನ ಸಾವಿಗೆ ಕಾರಣರಾದವರೆಲ್ಲರ ಹೆಸರನ್ನು ಬರೆದಿಟ್ಟು ಮಂಗಳವಾರ ಆತ್ಮಹತ್ಯೆಗೆ ಶರಣಾಗುತ್ತೇನೆ. ಇದು ನಿಶ್ಚಿತ ಎಂದು ವೀಡಿಯೋದಲ್ಲಿ ತಿಳಿಸಿದ್ದಾನೆ.

ಮೈಷುಗರ್ ಕಾರ್ಖಾನೆಯಲ್ಲಿ ಮಹದೇವಸ್ವಾಮಿ ಅವರು ೧೪ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ೩.೮.೨೦೧೫ರಂದು ಅವರನ್ನು ಅನಧಿಕೃತ ಗೈರು ಹಾಜರಿ ಎಂಬ ಆರೋಪದಡಿ ಕಂಪನಿ ಸೇವೆಯಿಂದ ವಜಾಗೊಳಿಸಲಾಗಿತ್ತು. ಇದು ಕಾನೂನುಬಾಹೀರವೆಂದು ಮಹದೇವಸ್ವಾಮಿ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ೯.೩.೨೦೨೦ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ವಜಾಗೊಂಡ ನೌಕರರ ವಿವರಗಳನ್ನು ಆಡಳಿತ ಮಂಡಳಿಯು ಸುದೀರ್ಘ ಚರ್ಚೆ ನಡೆಸಿ ನೌಕರರು ನ್ಯಾಯಾಲಯದಿಂದ ಪ್ರಕರಣವನ್ನು ಹಿಂಪಡೆದ ನಂತರ ಆಡಳಿತ ಮಂಡಳಿ ಸಭೆಗೆ ಮಂಡಿಸಲು ನಿರ್ಣಯಿಸಿತ್ತು. ನ್ಯಾಯಾಲಯದಲ್ಲಿ ದಾಖಲಿಸಿರುವ ಪ್ರಕರಣವನ್ನು ಹಿಂಪಡೆದು, ಅದಕ್ಕೆ ದಾಖಲೆಯನ್ನು ಸಲ್ಲಿಸಿದಲ್ಲಿ ಮಂಡಳಿ ನಿರ್ಣಯದಂತೆ ಮುಂದಿನ ಕ್ರಮ ವಹಿಸುವುದಾಗಿ ತಿಳಿವಳಿಕೆ ಪತ್ರವನ್ನು ನೀಡಿದ್ದರು ಎಂದು ಹೇಳಿದ್ದಾರೆ.

ಅದರಂತೆ ೨.೧೧.೨೦೨೦ರಂದು ನ್ಯಾಯಾಲಯದಲ್ಲಿ ದಾಖಲು ಮಾಡಿದ ಪ್ರಕರಣವನ್ನು ಹಿಂಪಡೆದು ದಾಖಲೆಗಳನ್ನು ಆಡಳಿತ ಮಂಡಳಿಗೆ ಸಲ್ಲಿಸಿದ್ದರು. ವಜಾಗೊಂಡ ನೌಕರರಿಗೆ ಕಾನೂನು ಸಲಹೆ ಪಡೆದು ಯಾವ ಯಾವ ನೌಕರರಿಗೆ ಪರಿಹಾರ ನೀಡಬೇಕೆಂದು ವಕೀಲರು ಅಭಿಪ್ರಾಯ ವ್ಯಕ್ತಪಡಿಸಿರುವರೋ ಅವರಿಗೆ ಪರಿಹಾರ ನೀಡಲು ವ್ಯವಸ್ಥಾಪಕ ನಿರ್ದೇಶಕರಿಗೆ ಅಧಿಕಾರ ನೀಡಲಾಗಿತ್ತು. ಈ ಸಂಬಂಧ ಚರ್ಚಿಸಲು ೧೦.೩.೨೦೨೩ರಂದು ಮಂಡ್ಯದ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ಹಾಜರಿರುವಂತೆ ತಿಳಿವಳಿಕೆ ಪತ್ರ ನೀಡಿದ್ದರು. ಅಂದೇ ಹಾಜರಾಗಿ ಚರ್ಚಿಸಿ ಸ್ವಯಂನಿವೃತ್ತಿ ಪಡೆಯಲು ಒಪ್ಪಿದ್ದಾಗಿ ತಿಳಿಸಿದ್ದಾರೆ.

ಕಾನೂನು ಅಭಿಪ್ರಾಯದಲ್ಲಿ ಸ್ವಯಂನಿವೃತ್ತಿ ಸೌಲಭ್ಯ, ಇತರೆ ಆರ್ಥಿಕ ಸೌಲಭ್ಯವನ್ನು ನನಗೆ ನೀಡಲು ತಿಳಿಸಿರುತ್ತದೆ. ಈ ವಿಷಯವನ್ನು ಸಭೆಯಲ್ಲಿ ತಿಳಿಸಿದ್ದು, ೨೩.೩.೨೦೨೩ರಂದು ೧೦೦ ರು. ಛಾಪಾಕಾಗದದಲ್ಲಿ ಮುಚ್ಚಳಿಕೆ ಬರೆದುಕೊಟ್ಟು ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದೆನು.

ಆನಂತರ ಬಂದ ಮೂವರು ವ್ಯವಸ್ಥಾಪಕ ನಿರ್ದೇಶಕರು ನನಗೆ ಸ್ವಯಂ ನಿವೃತ್ತಿ ಹಣವನ್ನು ಕೊಡುವಂತೆ ಆದೇಶ ಮಾಡಿದ್ದರೂ ಇಲ್ಲಿಯತನಕ ನನಗೆ ಹಣವನ್ನು ನೀಡಿರುವುದಿಲ್ಲ. ನಾನು ಜೀವನ ನಡೆಸುವುದು ತುಂಬಾ ಕಷ್ಟವಾಗಿರುವುದರಿಂದ ಜಿಲ್ಲಾಧಿಕಾರಿಗೆ ದಯಾಮರಣವನ್ನು ಕೋರಿ ಮನವಿ ಸಲ್ಲಿಸಿದ್ದೆ. ಅವರಿಂದಲೂ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಬಾರದಿರುವುದರಿಂದ ಸೋಮವಾರದವರೆಗೆ ಗಡುವು ನೀಡಿ ಮಂಗಳವಾರ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿರುವುದಾಗಿ ವೀಡಿಯೋದಲ್ಲಿ ತಿಳಿಸಿದ್ದಾರೆ.

PREV

Recommended Stories

ಜಿಎಸ್ಟಿ ಸ್ಲ್ಯಾಬ್‌ ಕಡಿತದಿಂದ 2.5 ಲಕ್ಷ ಕೋಟಿ ರು. ನಷ್ಟ
ಯುದ್ಧಪೀಡಿತ ಉಕ್ರೇನಿಯರಿಗೆ ಆರ್ಟ್ ಆಫ್ ಲಿವಿಂಗ್ ಆಸರೆ