ಕನಕಪುರ: ಶ್ರೀ ದೇಗುಲ ಮಠದ ಡಾ. ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ನೇತೃತ್ವದಲ್ಲಿ ಗೌರಿ- ಗಣೇಶ ಹಬ್ಬದ ಪ್ರಯುಕ್ತ ನಗರದಾದ್ಯಂತ ಎರಡು ದಿನ ಗುರು ಕೋರಣ್ಯ ಕಾರ್ಯಕ್ರಮ ನಡೆಯಿತು.
ಶ್ರೀ ದೇಗುಲ ಮಠದಿಂದ ಭಾದ್ರಪದ ಮಾಸದ ವಾರ್ಷಿಕ ಗುರುಕೋರಣ್ಯ ಕಾಯಕ ಹಿಂದಿನಿಂದಲೂ ಬೆಳೆದು ಬಂದಿರುವ ಸಂಪ್ರದಾಯ. ಯಾವುದೇ ಮಠ ತನ್ನದೇ ಆದ ಆಸ್ತಿಯನ್ನು ಹೊಂದಿದ್ದರೂ ಅಲ್ಲಿ ನಡೆಯುವ ಅನ್ನದಾಸೋಹ, ವಿದ್ಯಾ ದಾಸೋಹ ಮತ್ತು ಜ್ಞಾನ ದಾಸೋಹಗಳನ್ನ ನಿರ್ವಹಿಸಲು ಗುರುಕೋರಣ್ಯ ಪದ್ಧತಿ ನಡೆದುಕೊಂಡು ಬಂದಿದೆ. ಈ ಪದ್ಧತಿಯನ್ನು ಹಿಂದಿನಿದಲೂ ಶ್ರೀ ದೇಗುಲಮಠದ ಗುರು ಪರಂಪರೆಯನ್ನ ಅನೂಚಾನವಾಗಿ ನಡೆಸಿಕೊಂಡು ಬರುತ್ತಿದೆ. ವಿಶೇಷವಾಗಿ ಈ ಬಾರಿ ಐವರು ಸ್ವಾಮೀಜಿಗಳು ಶ್ರೀ ದೇಗುಲ ಮಠಾಧ್ಯಕ್ಷ ಡಾ. ಮುಮ್ಮಡಿ ನಿರ್ವಾಣ ಸ್ವಾಮಿಗಳವರ ನೇತೃತ್ವದಲ್ಲಿ ಗುರುಕೋರಣ್ಯ ಕಾಯಕವನ್ನು ಕೋಟೆ, ಕೆಂಕೇರಮ್ಮ ರಸ್ತೆ, ಹೌಸಿಂಗ್ ಬೋರ್ಡ್, ಪೈಪ್ ಲೈನ್ ರಸ್ತೆ ಮಹದೇಶ್ವರ ಬಡಾವಣೆ ಎಂ.ಜಿ.ರಸ್ತೆ, ಮುನಿಸಿಪಲ್ ಹೈಸ್ಕೂಲ್ ರಸ್ತೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಕೋರಣ್ಯ ಮಾಡಿದರು.
ಪೂಜ್ಯರನ್ನು ಭಕ್ತ ವೃಂದ ಭಕ್ತಿಭಾವದಿಂದ ಸ್ವಾಗತಿಸಿ, ತಮ್ಮ ಶಕ್ತಿಯನುಸಾರ ಕಾಣಿಕೆ ದವಸ ಧಾನ್ಯ, ಎಣ್ಣೆ, ತರಕಾರಿ ಇತ್ಯಾದಿ ದಾಸೋಹ ಪರಿಕರಗಳನ್ನು ಹಾಗೂ ಕಾಣಿಕೆ ಸಮರ್ಪಿಸಿ ಸತ್ಕರಿಸಿದರು.