ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ನಂದಿ ಭವನದಲ್ಲಿ ಪ್ರಥಮವಾಗಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ೨೦೨೫-೨೬ನೇ ಸಾಲಿನ ಸರ್ವ ಸದಸ್ಯರ ೭೨ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚಾಮರಾಜನಗರ ಜಿಲ್ಲೆಯಲ್ಲಿ ಪ್ರಥಮವಾಗಿ ವಾರ್ಷಿಕ ಮಹಾಸಭೆಯನ್ನು ಆಯೋಜನೆ ಮಾಡಿರುವುದು ಸಂತಸ ತಂದಿದೆ. ಸಹಕಾರಿ ಬ್ಯಾಂಕಿಂಗ್ ಉದ್ದಿಮೆಗೆ ಅನೇಕ ಸ್ಪರ್ಧೆಗಳು ಎದುರಾಗಿದ್ದರೂ, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು, ತನ್ನ ಹಣಕಾಸು ಸಾಮರ್ಥ್ಯವನ್ನು ಬಲಪಡಿಸಿಕೊಂಡು ವರದಿಯ ಸಾಲಿನಲ್ಲಿ ಪ್ರಗತಿ ಪಥದಲ್ಲಿರುತ್ತದೆ ಎಂದು ಹೇಳಿದರು.ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ೩೦ ಸಾವಿರ ರು. ಷೇರು ಬಂಡವಾಳದೊಂದಿಗೆ ೧೯೫೫ನೇ ಸಾಲಿನಲ್ಲಿ ಪ್ರಾರಂಭವಾಗಿರುತ್ತದೆ. ಮೈಸೂರು ಮತ್ತು ಚಾಮರಾಜನಗರ ಎರಡೂ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮೈಸೂರಿನಲ್ಲಿ ಕೇಂದ್ರ ಕಚೇರಿ ಹೊಂದಿದೆ. ಬ್ಯಾಂಕ್ ಬಹುಮುಖ್ಯವಾಗಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಸಾಲ ಸೌಲಭ್ಯ ನೀಡುತ್ತಿದ್ದು, ೨೦೨೫-೨೬ ನೇ ಸಾಲಿಗೆ ಎರಡೂ ಜಿಲ್ಲೆಯಲ್ಲಿರುವ ೨೯೩ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ೧೦೭೪೭೬ ರೈತರಿಗೆ ೧೨೮೦.೨೪ ಕೋಟಿ ರು.ಶೂನ್ಯ ಬಡ್ಡಿದರದಲ್ಲಿ ಕೃಷಿ ಸಾಲ ಮತ್ತು ೯.೩೫ ಕೋಟಿ ರು. ಮಧ್ಯಮಾವಧಿ ಸಾಲವನ್ನು ಶೇ.೩ ರ ದರದಲ್ಲಿ ವಿತರಿಸಲಾಗಿದೆ ಎಂದರು.
ಬ್ಯಾಂಕಿನ ವ್ಯವಹಾರಗಳನ್ನು ಸಂಪೂರ್ಣವಾಗಿ ಕೋರ್ ಬ್ಯಾಂಕಿಂಗ್ ತಂತ್ರಜ್ಞಾನದಡಿ ಗಣಕೀಕರಣಗೊಳಿಸಿದ್ದು, ಗ್ರಾಹಕರು ತಮ್ಮ ವ್ಯವಹಾರವನ್ನು ಯಾವುದೇ ಶಾಖೆಗಳಲ್ಲಿ ವ್ಯವಹಾರ ನಡೆಸಬಹುದಾಗಿದೆ. ಎಲ್ಲಾ ಶಾಖೆಗಳಲ್ಲಿ ಗ್ರಾಹಕರಿಗೆ ಅನುಕೂಲವಾಗುವ ದೇಶಾದ್ಯಂತ ಹಣ ವರ್ಗಾವಣೆ ಮಾಡುವ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಲಾಗಿದೆ. ಕರ್ನಾಟಕ ರಾಜ್ಯದಲ್ಲೇ ಮೊಟ್ಟಮೊದಲು ಗಣಕೀಕರಣ ಲೆಕ್ಕ ಪರಿಶೋಧನೆಯನ್ನು ಪೂರ್ಣಗೊಳಿಸಿದ್ದಕ್ಕಾಗಿ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಚನ್ನಂಗೆರೆ ಪ್ರಾಥಮಿಕ ಕೃಷಿ ಸಹಕಾರ ಸಂಘ ಹಾಗೂ ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಭಾರತ ಸರ್ಕಾರದ ಸಹಕಾರ ಸಚಿವಾಲಯ ಗುರುತಿಸಿ ಪುರಸ್ಕರಿಸಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನಾ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಅಧ್ಯಕ್ಷರು, ಚಾಮರಾಜನಗರ ಜಿಲ್ಲೆಗೆ ಪ್ರತ್ಯೇಕ ಬ್ಯಾಂಕ್ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ನಬಾರ್ಡ್ ಸೂಚನೆಯಂತೆ ಬ್ಯಾಂಕ್ ಅನ್ನು ಪ್ರತ್ಯೇಕಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೆ ಮತ್ತೋರ್ವ ನಿರ್ದೇಶಕ ಆರ್.ನರೇಂದ್ರ ಧ್ವನಿಗೂಡಿಸಿ, ಈ ಬಾರಿ ಚಾಮರಾಜನಗರದಲ್ಲಿ ಡಿಸಿಸಿ ಬ್ಯಾಂಕ್ ಆಗುತ್ತದೆ ಎಂದು ಹೇಳಿದರು.
ಸಂಘದ ಸದಸ್ಯರಾದ ಕೆರೆಹಳ್ಳಿ ನವೀನ್, ಡಿ. ನಾಗೇಂದ್ರ, ಪು. ಶ್ರೀನಿವಾಸನಾಯಕ,ಪಿ. ವೃಷಬೇಂದ್ರಪ್ಪ, ಕಿಲಗೆರೆ ಬಸವರಾಜು ಸೇರಿದಂತೆ ಅನೇಕರು ಮಾತನಾಡಿ ಎಂಡಿಸಿಸಿ ಬ್ಯಾಂಕಿನ ಅಧಿಕಾರಿಗಳು ಲೋಪ ಮತ್ತು ಸಂಘಕ್ಕೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಪ್ರಸ್ತಾಪಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ವೈ.ಎಂ.ಜಯರಾಮು, ಆರ್.ನರೇಂದ್ರ, ಎಸ್.ಚಂದ್ರಶೇಕರ್, ಬಿ.ಎಸ್.ಸದಾನಂದ, ಎಂ.ಕೆಂಚಪ್ಪ, ಜಿ.ಎನ್.ಮಂಜುನಾಥ್, ಇ.ಸಿ.ಲೋಕೇಶ್, ಟಿ.ಪಿ.ಬೋರೇಗೌಡ, ಬೀರೇಂದ್ರ, ರಾಜಣ್ಣ ಕೇಂದ್ರ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ವಿನೋದಕುಮಾರ್, ಸದಸ್ಯರು ಹಾಜರಿದ್ದರು.