27ರಂದು ಪೌರಾಣಿಕ ನಾಟಕಗಳ ಏಕಪಾತ್ರಾಭಿನಯ ಸ್ಪರ್ಧೆ

KannadaprabhaNewsNetwork |  
Published : Mar 25, 2026, 01:30 AM IST
24ಕೆಡಿವಿಜಿ1-ದಾವಣಗೆರೆಯಲ್ಲಿ ಮಂಗಳವಾರ ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಮಾ.27ರಂದು ಇಲ್ಲಿಯ ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯಲ್ಲಿ ಪೌರಾಣಿಕ ನಾಟಕಗಳ ಏಕಪಾತ್ರಾಭಿನಯ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಹೇಳಿದ್ದಾರೆ.

- ಏ.10ರಿಂದ 5 ದಿನ ರಾಷ್ಟ್ರೀಯ ವೃತ್ತಿ ರಂಗೋತ್ಸವ: ಮಲ್ಲಿಕಾರ್ಜುನ ಕಡಕೋಳ ಮಾಹಿತಿ । ವಿವಿಧ ನಾಟಕಗಳ ಪ್ರದರ್ಶನ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಮಾ.27ರಂದು ಇಲ್ಲಿಯ ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯಲ್ಲಿ ಪೌರಾಣಿಕ ನಾಟಕಗಳ ಏಕಪಾತ್ರಾಭಿನಯ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.10ರಿಂದ 14ರವರೆಗೆ ದಾವಣಗೆರೆಯಲ್ಲಿ ನಡೆಯುವ ರಾಷ್ಟ್ರೀಯ ವೃತ್ತಿ ರಂಗೋತ್ಸವದ ಭಾಗವಾಗಿ ಪೌರಾಣಿಕ ನಾಟಕಗಳ ಏಕಪಾತ್ರಾಭಿನಯ ಸ್ಪರ್ಧೆಗಳನ್ನು ಆಯೋಜಿಸಿದ್ದು, ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು ಎಂದರು.

ಮಾ.27ರ ಬೆಳಗ್ಗೆ 10.30ಕ್ಕೆ ಮಲ್ಲಿಕಾರ್ಜುನ ಕಡಕೋಳ ಅಧ್ಯಕ್ಷತೆಯಲ್ಲಿ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ತುಮಕೂರಿನ ಡಾ.ಲಕ್ಷ್ಮಣ ದಾಸ್‌ ಏಕವ್ಯಕ್ತಿ ಪಾತ್ರಾಭಿನಯ ಸ್ಪರ್ಧೆ ಉದ್ಘಾಟಿಸುವರು. ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸತೀಶ ಪಿ. ವಲ್ಲೇಪುರೆ, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಡಾ. ಕೆ.ನಾಗರತ್ನಮ್ಮ, ಹರಪನಹಳ್ಳಿ ಸಮಸ್ತರು ಬಿ.ಪರಶುರಾಮ, ಹಿರಿಯ ರಂಗಕರ್ಮಿ ಎಸ್.ಎಸ್.ಸಿದ್ದರಾಜು ನೀನಾಸಂ ಭಾಗವಹಿಸುವರು. ಡಿ.ಎಸ್.ದೇವಸೇನಾ ನಿರ್ವಹಣೆ ಮಾಡಲಿದ್ದು, ರಂಗಾಯಣದ ವಿಶೇಷಾಧಿಕಾರಿ ರವಿಚಂದ್ರ ಸ್ವಾಗತಿಸುವರು ಎಂದು ಅವರು ಹೇಳಿದರು.

ಏ.10ರಂದು ರಾಷ್ಟ್ರೀಯ ವೃತ್ತಿ ರಂಗೋತ್ಸವವನ್ನು ನಾಡೋಜ ಬರಗೂರು ರಾಮಚಂದ್ರಪ್ಪ ಉದ್ಘಾಟಿಸಿ, ನೆನಪು ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ರಾಷ್ಟ್ರೀಯ ವೃತ್ತಿ ರಂಗೋತ್ಸವದಲ್ಲಿ ಬೆಳಿಗ್ಗೆ ವಿಚಾರ ಸಂಕಿರಣವಿದೆ. ಐದೂ ದಿನಗಳ ಬೆಳಗ್ಗೆ ವಿಚಾರ ಸಂಕಿರಣಗಳಿವೆ. ಸಂಜೆ 6ರಿಂದ ನಾಟಕಗಳ ಪ್ರದರ್ಶನವಿರುತ್ತದೆ. ಮೊದಲ ದಿನ ತೆಲುಗಿನ ಬಾಲನಾಗಪ್ಪ, ಏ.11ರಂದು ತಮಿಳಿನ ದ್ರೌಪತಿ, ಏ.12ಕ್ಕೆ ಮಲೆಯಾಳಂನ ಕುಹೂ..., ಏ.13ಕ್ಕೆ ಕನ್ನಡದ ನಾಟಕ, ಏ.14ಕ್ಕೆ ಮರಾಠಿಯ ಕಟ್ಯಾರ್ ಕಾಳಜಾತ್ ಘುಸ್ಲಿ... ನಾಟಕಗಳ ಪ್ರದರ್ಶನವಿದೆ. ನಿತ್ಯವೂ ಮೂವರು ಹಿರಿಯ ರಂಗಕರ್ಮಿಗಳಿಗೆ ರಂಗ ಗೌರವ ನೀಡಿ, ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಪ್ರಥಮ ಬಾರಿಗೆ ಟಿಕೆಟ್ ಶೋ:

ಮೊದಲ ಬಾರಿಗೆ ಟಿಕೆಟ್ ಶೋ ಮಾಡಲಾಗುತ್ತಿದೆ. 5 ನಾಟಕಗಳ ಸೀಸನ್‌ ಟಿಕೆಟ್ ಹಣ 150 ರು. ಮಾತ್ರ. ಒಂದು ನಾಟಕಕ್ಕೆ ₹50 ನಿಗದಿಪಡಿಸಿದೆ. ರಾಷ್ಟ್ರೀಯ ವೃತ್ತಿ ರಂಗೋತ್ಸವ ಅಂಗವಾಗಿ ವೃತ್ತಿ ರಂಗಭೂಮಿಗೆ ಸಂಬಂಧಿಸಿದ ರಂಗಗೀತೆ, ರಂಗ ನೃತ್ಯ ಪ್ರದರ್ಶನವಿದೆ. ಏ.11ರಿಂದ 13ರವರೆಗೆ ವಿಚಾರ ಸಂಕಿರಣ ನಡೆಯಲಿದೆ. ಬಿ.ಚಂದ್ರಶೇಖರ, ಡಾ. ಸಿ.ಬಸವಲಿಂಗಯ್ಯ, ಬಿ.ಚಂದ್ರೇಗೌಡ ಇತರರು ಭಾಗವಹಿಸುವರು. ಶಂಕರಗೌಡ ಪಾಟೀಲರಿಂದ ರಂಗಭೂಮಿಗೆ ಸಂಬಂಧಿಸಿದ ವಸ್ತು ಪ್ರದರ್ಶನ ಇರುತ್ತದೆ. ರಂಗಾಸಕ್ತರು, ಕಲಾಸಕ್ತರು ಪಾಲ್ಗೊಳ್ಳುವಂತೆ ಮಲ್ಲಿಕಾರ್ಜುನ ಕಡಕೋಳ ಮನವಿ ಮಾಡಿದರು.

ರಂಗಾಯಣದ ವಿಶೇಷಾಧಿಕಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಹಿರಿಯ ರಂಗಕರ್ಮಿ ಎಸ್.ಎಸ್. ಸಿದ್ದರಾಜು, ಡಿ.ಎಸ್. ದೇವಸೇನಾ, ಶಶಿಧರ ಬಸಾಪುರ ಇತರರು ಇದ್ದರು.

- - -

(ಬಾಕ್ಸ್‌) * ಮಂಜೂರಾದ 10 ಎಕರೆ ಜಾಗಕ್ಕೆ ಬೇಲಿ ದಾವಗೆರೆ: ಹರಿಹರ ತಾ. ಕೊಂಡಜ್ಜಿಯಲ್ಲಿ ವೃತ್ತಿ ರಂಗಭೂಮಿ ರಂಗಾಯಣಕ್ಕೆ 10 ಎಕರೆ ಜಾಗವನ್ನು ಸರ್ಕಾರ ಮಂಜೂರು ಮಾಡಿದ್ದು, ₹1 ಕೋಟಿ ಅನುದಾನವನ್ನೂ ಬಿಡುಗಡೆ ಮಾಡಿದೆ. ಸದ್ಯಕ್ಕೆ ಜಾಗಕ್ಕೆ ಬೇಲಿ ಹಾಕುವ ಕೆಲಸವಾಗಿದೆ ಎಂದು ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಂಗಾಯಣಕ್ಕೆ ಮಂಜೂರಾದ ಜಾಗದಲ್ಲಿ ರಂಗ ಮಂದಿರ, 300 ಜನರಿಗೆ ಆಸನದ ವ್ಯವಸ್ಥೆ, ಥೇಟರ್ ಮ್ಯೂಸಿಯಂ, ಕಚೇರಿ, ತಾಲೀಮು ಕೊಠಡಿ ಹೀಗೆ ಸಾಕಷ್ಟು ನಿರ್ಮಾಣ ಕಾರ್ಯಗಳೂ ಆಗಬೇಕಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ವೃತ್ತಿ ರಂಗಭೂಮಿ ರಂಗಾಯಣಕ್ಕೆ ಕಾಯಕಲ್ಪ ನೀಡಲಾಗುವುದು ಎಂದು ಅವರು ಹೇಳಿದರು.

- - -

-24ಕೆಡಿವಿಜಿ1: ದಾವಣಗೆರೆಯಲ್ಲಿ ಮಂಗಳವಾರ ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಡೆದ ಮನಸ್ಸನ್ನು ಬೆಸೆಯುವುದೇ ನಿಜವಾದ ಧರ್ಮ: ರಂಭಾಪುರಿ ಜಗದ್ಗುರು ಶ್ರೀಗಳು
ಪಂಚಮಸಾಲಿ ನೊಗ ಹೊತ್ತಿದ್ದೇನೆ, ಮುಂದೆಯೂ ಹೊರುತ್ತೇನೆ