ಸುತ್ತೂರು ಮಠದಲ್ಲಿ ಯುಗಾದಿ, ಅಲ್ಲಮಪ್ರಭು ಜಯಂತಿ, ಪಂಚಾಂಗ ಪಠಣ, ಸಂವಾದ

KannadaprabhaNewsNetwork | Published : Apr 1, 2025 12:45 AM

ಸಾರಾಂಶ

ಅಲ್ಲಮಪ್ರಭುಗಳೆಂದರೆ ಅದೊಂದು ಬೆಳಕು, ಬೆಡಗು, ಬೆರಗು ಹಾಗೂ ಆಧ್ಯಾತ್ಮಿಕ ಮಾರ್ಗದಲ್ಲಿ ನಡೆಯುವವರಿಗೆ ಸೋಜಿಗ ಮತ್ತು ಸವಾಲು.

ಕನ್ನಡಪ್ರಭ ವಾರ್ತೆ ಸುತ್ತೂರುಸುತ್ತೂರು ಶ್ರೀಮಠದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳವರ ಸಾನ್ನಿಧ್ಯದಲ್ಲಿ ಯುಗಾದಿ, ಅಲ್ಲಮಪ್ರಭು ಜಯಂತಿ ಹಾಗೂ ಪಂಚಾಂಗ ಪಠಣ ಮತ್ತು ಸಂವಾದ ಕಾರ್ಯಕ್ರಮಗಳು ಜರುಗಿದವು.ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಕರ್ತೃಗದ್ದುಗೆಯಲ್ಲಿ ಮಹಾ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ, ಬೆಳ್ಳಿರಥ ಪ್ರಾಕಾರೋತ್ಸವ ನೆರವೇರಿದವು. ಶ್ರೀ ಸೋಮೇಶ್ವರ, ಶ್ರೀ ಮಹದೇಶ್ವರ, ಶ್ರೀ ವೀರಭದ್ರೇಶ್ವರ, ಶ್ರೀ ನಂಜುಂಡೇಶ್ವರ ಮತ್ತು ಶ್ರೀ ನಾರಾಯಣಸ್ವಾಮಿ ದೇವಸ್ಥಾನಗಳಲ್ಲಿಯೂ ವಿಶೇಷ ಪೂಜೆ ನಡೆದವು.ಕೆ.ಆರ್. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಮೈಸೂರು ಕೃಷ್ಣಮೂರ್ತಿ ಅವರು ಶಿವಪಥದ ಬೆಳಕಿನ ಕಿರಣ ಅಲ್ಲಮಪ್ರಭು ವಿಷಯ ಕುರಿತು ಉಪನ್ಯಾಸ ನೀಡಿ, ಅಲ್ಲಮಪ್ರಭುಗಳೆಂದರೆ ಅದೊಂದು ಬೆಳಕು, ಬೆಡಗು, ಬೆರಗು ಹಾಗೂ ಆಧ್ಯಾತ್ಮಿಕ ಮಾರ್ಗದಲ್ಲಿ ನಡೆಯುವವರಿಗೆ ಸೋಜಿಗ ಮತ್ತು ಸವಾಲು. ಇವರು ನರ ಹರನಾಗುವ ಪರಿಯನ್ನು ತೋರಿದ ನಿಜಗುರು. ಇವರು ಹನ್ನೆರಡನೇ ಶತಮಾನದ ಶರಣರಿಗೆ ಮಾತ್ರ ಗುರುವಲ್ಲ ಎಲ್ಲ ಕಾಲದ ಜನರಿಗೂ ನಿತ್ಯಗುರುವಾಗಿ ಸತ್ಯಗುರುವಾಗಿದ್ದಾರೆ. ಅಲ್ಲಮಪ್ರಭುಗಳು ಗುರುಗಳ ಗುರು, ಜ್ಞಾನಿಗಳಲ್ಲಿ ಜ್ಞಾನಿ, ವಿರಕ್ತರಲ್ಲಿ ಪ್ರಪ್ರಥಮರು. ಜಗತ್‌ಕಲ್ಯಾಣಕ್ಕಾಗಿ ತಮ್ಮ ಅರಿವನ್ನು ತಿಳಿಸಿದವರು. ಅಲ್ಲಮರು ಭಕ್ತಿಯೆಂಬ ಪೃಥ್ವಿಯ ಮೇಲೆ ಅಂಕುರಿಸಿದ ಗುರುವೆಂಬ ಬೀಜ, ಶಿವನಂತೆ ಎಲ್ಲರನ್ನೂ ನೋಡಿದವರು. ಆದ್ದರಿಂದಲೇ ಶಿವಪಥದಲ್ಲೇ ನಡೆದವರು. ಮನುಷ್ಯ ಸರಿ ಹೋದರೆ ಲೋಕ ತನ್ನಷ್ಟಕ್ಕೆ ತಾನೇ ಸರಿಹೋಗುತ್ತದೆ ಎಂದು ಕಥಾಪ್ರಸಂಗದ ಮೂಲಕ ತಿಳಿಸಿದರು. ಶಿವಪಥಕ್ಕಿಂತ ಗುರುಪಥವೇ ಮೊದಲು ಆದ್ದರಿಂದ ಗುರುಪಥ ಬಿಟ್ಟು ಶಿವಪಥ ಅರಿಯುವುದು ಅಸಾಧ್ಯ. ಬಸವೇಶ್ವರರು ಮತ್ತು ಅಲ್ಲಮಪ್ರಭುಗಳು ಸಂಶೋಧಿಸಿದ ಮಾರ್ಗ ಅತ್ಯಂತ ವೈಜ್ಞಾನಿಕ, ಹನ್ನೆರಡನೇ ಶತಮಾನದ ಶರಣ ಸಮುದಾಯಕ್ಕೆ ಶಿವನ ಸಾಕ್ಷಾತ್ಕಾರ ತೋರಿಸಿದರು. ಅಲ್ಲಮಪ್ರಭುಗಳ ಜಯಂತಿ ಜಾಗತಿಕ ಮಹತ್ವದ ಕಾರ್ಯಕ್ರಮ ಎಂದು ತಿಳಿಸಿದರು. ಮೈಸೂರಿನ ಭಾರತೀಯ ಜ್ಯೋತಿರ್ವಿಜ್ಞಾನ ಸಂಶೋಧನಾ ಕೇಂದ್ರದ ಅಧ್ಯಕ್ಷರು ಹಾಗೂ ಪಂಚಾಂಗಕರ್ತರಾದ ಸಿದ್ಧಾಂತಿ ಡಾ. ಕೆ. ಜಿ. ಪುಟ್ಟಹೊನ್ನಯ್ಯನವರು ಪಂಚಾಂಗ ಪಠಣ ಮಾಡಿ, ಈ ವರ್ಷದ ಶ್ರೀ ವಿಶ್ವಾವಸುನಾಮ ಸಂವತ್ಸರ ಪಂಚಾಂಗದ ಮಹತ್ವವನ್ನು ಕುರಿತು ಮಾತನಾಡಿ, ಈ ವರ್ಷವು ಉತ್ತಮ ಮಳೆ, ಬೆಳೆಯನ್ನು ತರಲಿದೆ. ಸುತ್ತೂರು ಶ್ರೀ ಶಿವರಾತ್ರೀಶ್ವರ ಪಂಚಾಂಗವು ರಾಷ್ಟ್ರೀಯ ಪಂಚಾಂಗದ ವಿವರಗಳನ್ನು ಒಳಗೊಂಡಿದೆ ಎಂದು ತಿಳಿಸಿದರು. ನಂತರ ಶ್ರೋತೃಗಳೊಂದಿಗೆ ಸಂವಾದ ನಡೆಸಿದರು. ಶ್ರೀಮಠ ಹಾಗೂ ಗ್ರಾಮದ ಹೊನ್ನೇರುಗಳನ್ನು ಶ್ರೀಮಠದಿಂದ ಮಂಗಳವಾದ್ಯ ಹಾಗೂ ವಿವಿಧ ಜನಪದ ಕಲಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ಜಮೀನುಗಳಿಗೆ ತೆರಳಿ ಭೂಮಿತಾಯಿಗೆ ಪೂಜೆ ಸಲ್ಲಿಸಿ ಹೊಸ ವರ್ಷದ ಕೃಷಿ ಕಾಯಕಕ್ಕೆ ಚಾಲನೆ ನೀಡಲಾಯಿತು. ಶ್ರೀ ಕುದೇರು, ಮುಡಿಗುಂಡ, ಹಂಚೀಪುರ, ಮಾಡ್ರಹಳ್ಳಿ, ಪೊನ್ನಚ್ಚಿ, ಬರಗೂರು (ತಮಿಳುನಾಡು), ಚಿಕ್ಕಿಂದುವಾಡಿ, ಕೆಸ್ತೂರು, ಚಿಲಕವಾಡಿ, ಮಡಿವಾಳಸ್ವಾಮಿ ಮಠ, ಹೊನ್ನಲಗೆರೆ, ವೀರಪ್ಪ ಒಡೆಯರಹುಂಡಿ, ದಂಡಿಕೆರೆ, ಮೊದಲಾದ ಮಠಗಳ ಶ್ರೀಗಳು, ಶ್ರೀ ಶಂಕರ್ ದೇವನೂರು, ಮೊದಲಾದ ಗಣ್ಯರು ಹಾಗೂ ಸುತ್ತಮುತ್ತಲ ಗ್ರಾಮಗಳ ಭಕ್ತಾದಿಗಳು ಭಾಗವಹಿಸಿದ್ದರು.ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಜಿ. ಶಿವಸ್ವಾಮಿ ಸ್ವಾಗತಿಸಿದರು, ಪಂಚಾಕ್ಷರಿ ವಂದಿಸಿದರು, ಅಂದಯ್ಯ ಶಿರೂರಮಠ ನಿರೂಪಿಸಿದರು.

Share this article