ಸ್ವಾವಲಂಬಿ ಜೀವನಕ್ಕೆ ನಬಾರ್ಡ್‌ ನೆರವು

KannadaprabhaNewsNetwork | Published : Jun 2, 2024 1:45 AM

ಸಾರಾಂಶ

ನಬಾರ್ಡ್ ಸಂಸ್ಥೆಯು ಈ ತರಬೇತಿಗೆ ₹ 1 ಲಕ್ಷ ಅನುದಾನ ವಿನಿಯೋಗಿಸಿದ್ದು, ತರಬೇತಿಗೆ 3 ತಿಂಗಳ ಸಿದ್ಧತೆ ಮಾಡಲಾಗಿದೆ.

ಧಾರವಾಡ:

ಗ್ರಾಮೀಣ ಭಾಗದ ಜನರು ತಮ್ಮ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನಬಾರ್ಡ್ ಸಂಸ್ಥೆಯ ಕಿರು ಉದ್ಯಮ ಅಭಿವೃದ್ಧಿ ತರಬೇತಿ ಮೂಲಕ ನೀಡಲಾಗುತ್ತದೆ. ತರಬೇತಿ ಪಡೆದ ಗ್ರಾಮೀಣ ಭಾಗದ ಜನರು ಸ್ವಯಂ ಆಗಿ ತಮ್ಮ ಜೀವನ ರೂಪಿಸಿಕೊಳ್ಳಬೇಕು ಎಂದು ಜಿಲ್ಲಾ ಲೀಡ್‌ ಬ್ಯಾಂಕ್‌ ಮ್ಯಾನೇಜರ್ ಪ್ರಭುದೇವ ಎಂ.ಎನ್. ಹೇಳಿದರು.

ಬೆಂಗಳೂರಿನ ನಬಾರ್ಡ್ ಮತ್ತು ಧಾರವಾಡದ ನಾಭ್‌ಫಿನ್ಸ್ (ನಬಾರ್ಡ್ ಫಿನಾನ್ಸಿಯಲ್ ಸರ್ವಿಸ್ ಲಿ.)ನ ಸಹಯೋಗದಲ್ಲಿ ಕಲಘಟಗಿ ತಾಲೂಕಿನ ಸುರಶೆಟ್ಟಿಕೊಪ್ಪದ ಸರ್ವೋದಯ ಮಹಾಸಂಘದ ಗ್ರಾಮಚೇತನ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ಹೈನುಗಾರಿಕೆಯ 10 ದಿನಗಳ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ, ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.ಸುರಶೆಟ್ಟಿಕೊಪ್ಪ ಹಾಗೂ ನಾಗನೂರು ಗ್ರಾಮದ 30 ಕುಟುಂಬದ ಮಹಿಳೆಯರಿಗೆ ಬೆಂಗಳೂರಿನ ನಬಾರ್ಡ್ ಮತ್ತು ಧಾರವಾಡ ನಾಭ್‌ಫಿನ್ಸ್, ಸುರಶೆಟ್ಟಿಕೊಪ್ಪದ ಸರ್ವೋದಯ ಮಹಾಸಂಘದ ಮೂಲಕ ತರಬೇತಿ ನೀಡಲಾಗಿದೆ ಎಂದರು.

ನಬಾರ್ಡ್ ಸಂಸ್ಥೆಯ ಧಾರವಾಡ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಮಯೂರ್ ಕಾಂಬ್ಳೆ ಮಾತನಾಡಿ, ನಬಾರ್ಡ್ ಸಂಸ್ಥೆಯು ಈ ತರಬೇತಿಗೆ ₹ 1 ಲಕ್ಷ ಅನುದಾನ ವಿನಿಯೋಗಿಸಿದ್ದು, ತರಬೇತಿಗೆ 3 ತಿಂಗಳ ಸಿದ್ಧತೆ ಮಾಡಲಾಗಿದೆ. ಪ್ರಾಥಮಿಕ ಹಂತದಲ್ಲಿ ಮಹಿಳಾ ಫಲಾನುಭವಿಗಳ ಆಯ್ಕೆ ನಂತರ ಅವರ ಸಾಲ ಮರುಪಾವತಿ ಸಾಮರ್ಥ್ಯ ಮತ್ತು ಚರಿತ್ರೆ ನೋಡುವ ಸಿಬಿಲ್ ಸ್ಕೋರ್ ಪರಿಶೀಲನೆ ಮಾಡಲಾಯಿತು ಎಂದರು.

10 ದಿನ ತರಬೇತಿ ನೀಡಲು ಸೂಕ್ತ ತಜ್ಞರನ್ನು ಆಯ್ಕೆ ಮಾಡಿ ತರಬೇತಿ ಆಯೋಜಿಸಲಾಗಿತ್ತು. ತರಬೇತಿಯಲ್ಲಿ ಜಾನುವಾರು ತಳಿ ಆಯ್ಕೆ, ಜಾನುವಾರು ನಿರ್ವಹಣೆ, ಬರುವ ಕಾಯಿಲೆ ಮತ್ತು ಔಷಧೋಪಚಾರ, ಕೊಟ್ಟಿಗೆ ರಚನೆ ನಿರ್ವಹಣೆಗಳ ಕುರಿತು ತಾಂತ್ರಿಕ ಸಿಬ್ಬಂದಿಯಿಂದ ಮಾಹಿತಿ ಮತ್ತು ಕೃಷಿ ಮಹಾವಿದ್ಯಾಲಯಕ್ಕೆ ಅಧ್ಯಯನ ಪ್ರವಾಸ ಕೈಗೊಂಡು ಪ್ರಾತ್ಯಕ್ಷತೆ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.

ತರಬೇತಿ ಪಡೆದ 26 ಸದಸ್ಯರಿಗೆ ಪ್ರಮಾಣಪತ್ರ ವಿತರಿಸಲಾಗಿದೆ. ತರಬೇತಿ ಪಡೆದ ಸದಸ್ಯರಿಗೆ ₹ 12.40 ಲಕ್ಷ ಮೊತ್ತದ ಸಾಲ ವಿತರಿಸಲಾಗಿದ್ದು, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಾದ ಡಿಜಿಟಲ್ ಬ್ಯಾಂಕಿಂಗ್, ಸುರಕ್ಷಾ ಬಿಮಾ ಯೋಜನೆ ಮತ್ತು ಜೀವನ್ ಬಿಮಾ ಯೋಜನೆಯ ಅನುಷ್ಠಾನಗೊಳಿಸಲಾಗಿದೆ ಎಂದರು.

ನಾಭ್‌ಫಿನ್ಸ್‌ನ ಪ್ರಾದೇಶಿಕ ವ್ಯವಸ್ಥಾಪಕ ಶಿವಾನಂದ ನಂದಗಾಂವ್ಕರ ಮಾತನಾಡಿದರು. ಸರ್ವೋದಯ ಮಹಾಸಂಘದ ಸಿಇಒ ಜಿ. ವೀರಣ್ಣ, ಅಧ್ಯಕ್ಷ ಆರ್.ಎಸ್. ಭಾವಿಕಟ್ಟೆ, ನಿರ್ದೇಶಕರಾದ ನಿಂಗಯ್ಯ ಹಿರೆಮಠ, ಸೋಮಶೇಖರ, ಸದಾನಂದ ಮೊರಬದ ಹಾಗೂ ಬ್ಯಾಂಕ್ ಆಫ್ ಬರೋಡಾದ ವ್ಯವಸ್ಥಾಪಕ ರವಿ ನಾಯ್ಕ ಉಪಸ್ಥಿತರಿದ್ದರು.

Share this article