ಕನ್ನಡಪ್ರಭ ವಾರ್ತೆ ಮಡಿಕೇರಿ
ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎನ್.ಬಿ ಜಯಲಕ್ಷ್ಮೀ ಅವರು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಯುವ ಜನತೆ ತಂಬಾಕು ಎನ್ನುವ ವ್ಯಸನಕ್ಕೆ ಬಲಿಯಾಗಿ ತಮ್ಮ ಅಮೂಲ್ಯವಾದ ಜೀವನವನ್ನು ಹಾಳುಮಾಡಿಕೊಳ್ಳದೆ ಉತ್ತಮ ಜೀವನ ನಿರ್ಮಾಣ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕರಾದ ಡಾ. ವಿಶಾಲ್ ಅವರು ಮಾತನಾಡಿ, ತಂಬಾಕುವಿನ ಸೇವನೆಗೆ ಹೆಚ್ಚಾಗಿ ಯುವ ಜನತೆ ಮಾರುಹೋಗುತ್ತಿದ್ದಾರೆ. ಇದರಿಂದ ಅನೇಕ ಅಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ತಂಬಾಕನ್ನು ಮಕ್ಕಳಿಂದ ದೂರವಿರಿಸಿ ಮಕ್ಕಳನ್ನು ರಕ್ಷಿಸಿ ಎಂದು ತಿಳಿಸಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ಅವರು ತಂಬಾಕು ಸೇವನೆಯಿಂದ ಉಂಟಾಗುವ ತೊಂದರೆಗಳು, ಜಿಲ್ಲಾ ತಂಬಾಕು ನಿಯಂತ್ರಣ ಕೋಶವು ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ಮತ್ತು ಕೋಟ್ಪಾ ಕಾಯಿದೆ 2003ರ ಬಗ್ಗೆ ಸವಿವರವಾಗಿ ಅಂಕಿ ಅಂಶಗಳ ಸಹಿತ ತಿಳಿಸಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವಿಮಲ ಅವರು ನಶಾ ಮುಕ್ತ ಜಿಲ್ಲೆ ಮಾಡಬೇಕಾದರೆ ಯುವ ಜನತೆಯ ಪಾತ್ರದ ಬಗ್ಗೆ ತಿಳಿಸಿದರು.
ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಟಿ.ಎನ್. ಪಾಲಾಕ್ಷ ಅವರು ವಿಶ್ವ ತಂಬಾಕು ರಹಿತ ದಿನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ನಂತರ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿದ್ಯಾರ್ಥಿಗಳು ತಂಬಾಕಿನಿಂದಾಗುವ ತೊಂದರೆ ಬಗ್ಗೆ ಕಿರು ನಾಟಕ ಪ್ರದರ್ಶಿಸಿದರು. ಹಿರಿಯ ಆರೋಗ್ಯನಿರೀಕ್ಷಣಾಧಿಕಾರಿ ಶ್ರೀನಾಥ್ ಅವರು ವಂದಿಸಿದರು.