ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಬಿಜೆಪಿ ಜಿಲ್ಲಾ ಕಾರ್ಯಾಲಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಲ್ ಬಹದ್ದೂರ್ ಶಾಸ್ತ್ರೀ ಅವರು ಸಣ್ಣ ರೈಲು ಅಪಘಾತಕ್ಕೆ ರಾಜೀನಾಮೆ ನೀಡಿದ್ದರು. ಟೆಲಿಫೋನ್ ಕದ್ದಾಲಿಕೆ ಆರೋಪ ಬಂದಾಗ ರಾಮಕೃಷ್ಣ ಹೆಗಡೆ ರಾಜಿನಾಮೆ ನೀಡಿದ್ದರು. ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರು ಹಗರಣದ ವಿಚಾರದಲ್ಲಿ ಸಿದ್ದರಾಮಯ್ಯ ಭಂಡತನ ಪ್ರದರ್ಶನ ಮಾಡುತ್ತಿದ್ದಾರೆ. ಪ್ರಕರಣ ಬಯಲಿಗೆ ಬಂದು ಇಷ್ಟು ದಿನ ಆದರೂ ಸಿಎಂ,ಡಿಸಿಎಂ ಸೇರಿದಂತೆ ಸಚಿವರು ಬಾಯಿ ಬಿಡುತ್ತಿಲ್ಲೆವೆಂದು ದೂರಿದರು.
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ವರ್ಷವಾಗಿದ್ದು ಅಭಿವೃದ್ಧಿ ಶೂನ್ಯ. ಸರ್ಕಾರದ ಖಜಾನೆ ಹಗಲು ದರೋಡೆಯಾಗುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಸೇರಿದ 187 ಕೋಟಿ ರು. ಆಂಧ್ರದ ಒಂಬತ್ತು ಖಾಸಗಿ ಕಂಪನಿಗಳಿಗೆ ಹೋಗಿವೆ. ನೆರೆರಾಜ್ಯಗಳ ಚುನಾವಣೆಗೆ ಬಳಕೆಯಾಗಿರುವ ಗುಮಾನಿ ಇದೆ ಎಂದರು.ಯಾವುದೇ ಸರ್ಕಾರಿ ಅನುದಾನ ಬಳಕೆ ಮಾಡುವಾಗ ಒಂದೇ ಖಾತೆ ಮೂಲಕ ನಿರ್ವಹಣೆ ಮಾಡಲಾಗುತ್ತದೆ. ಆದರೆ ವಾಲ್ಮೀಕಿ ಅಭಿವೃದ್ದಿ ನಿಗಮದ ಹಣಕಾಸು ನಿರ್ವಹಣೆಗೆ ಉಪ ಖಾತೆ ತೆರೆಯುವಂತೆ ಸಚಿವರು ಮೌಖಿಕ ಆದೇಶ ನೀಡಿದ್ದರೆಂಬ ಸಂಗತಿ ಚಂದ್ರಶೇಖರ್ ಅವರ ಡೆತ್ ನೋಟ್ ನಲ್ಲಿ ಉಲ್ಲೇಖವಾಗಿದೆ. ಉಪ ಖಾತೆ ತೆರೆದ ಮೇಲೆ ಚೆಕ್ ಬುಕ್, ಪಾಸ್ ಬುಕ್ ಏಕೆ ಪಡೆದುಕೊಂಡಿಲ್ಲವೆಂದು ಕಾರಜೋಳ ಪ್ರಶ್ನಿಸಿದರು.
ದಾವಣಗೆರೆಯಲ್ಲಿ ಗುತ್ತಿಗೆದಾರ ಗೌಡ ಆತ್ಮಹತ್ಯೆ ಮಾಡಿಕೊಂಡಿದ್ದು, 80 ಲಕ್ಷ ಬಿಲ್ ಕೊಡಲು ಕಮಿಷನ್ ಗೆ ಸತಾಯಿಸಿದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಸಂತೋಷ್ ಪ್ರಕರಣದಲ್ಲಿ ಈಶ್ವರಪ್ಪ ರಾಜಿನಾಮೆ ನೀಡಿದ್ದರು. ಈ ವೇಳೆ ಸಿದ್ದರಾಮಯ್ಯ ಒಂದು ಹೆಜ್ಜೆ ಮುಂದೆ ಹೋಗಿ ಈಶ್ವರಪ್ಪಗೆ ಮರಣದಂಡನೆಗೆ ಗುರಿಪಡಿಸಬೇ ಕೆಂದಿದ್ದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಅನುದಾನದ ವಿಚಾರದಲ್ಲಿ ಸಿದ್ದರಾಮಯ್ಯ ಏಕೆ ಸುಮ್ಮನಿದ್ದಾರೆಂದು ಪ್ರಶ್ನಿಸಿದರು.
ಯಾವುದೇ ಬ್ಯಾಂಕ್ ಅಧಿಕಾರಿ ಹೀಗೆ ಮನಸೋ ಇಚ್ಛೆ ವರ್ಗಾವಣೆ ಮಾಡುವುದಿಲ್ಲ. ಸರ್ಕಾರ ಶಾಮಿಲಾಗಿಯೇ ಈ ಕೆಲಸ ಮಾಡಿದೆ. ಯೂನಿಯನ್ ಬ್ಯಾಂಕಿನವರೇ ಕೇಂದ್ರದ ಆರ್ಥಿಕ ಇಲಾಖೆಗೆ ಪತ್ರ ಬರೆದು ತನಿಖೆ ನಡೆಸುವಂತೆ ವಿನಂತಿಸಿದ್ದಾರೆ. ಸಿಬಿಐ ಎಂಟ್ರಿ ಆದರೆ ನಮ್ಮ ಬುಡಕ್ಕೆ ನೀರು ಬರುತ್ತದೆ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಎಸ್‌ಐಟಿ ಮೂಲಕ ತನಿಖೆ ನಾಟಕವಾಡುತ್ತಿದ್ದಾರೆಂದು ಆರೋಪಿಸಿದರು.