ಧಾರವಾಡ:
ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಈ ಅಧ್ಯಯನ ಜವಾಬ್ದಾರಿಯನ್ನು ಕರ್ನಾಟಕ ವಿವಿಗೆ ವಹಿಸಿದ್ದು, 11 ತಿಂಗಳು ರಾಜ್ಯದ 25 ಜಿಲ್ಲೆಗಳಲ್ಲಿನ 5,800 ಕುಟುಂಬಗಳನ್ನು ಭೇಟಿಯಾದ ಕುಲಶಾಸ್ತ್ರಿಯ ಅಧ್ಯಯನ ಯೋಜನಾ ನಿರ್ದೇಶಕ ಪ್ರೊ. ಟಿ.ಟಿ. ಬಸವನಗೌಡ ಅವರ ತಂಡವು 250 ಪುಟಗಳ ವರದಿ ಸಿದ್ಧಪಡಿಸಿದೆ. ಅದನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗುತ್ತಿದೆ ಎಂದು ಶುಕ್ರವಾರ ಕರ್ನಾಟಕ ವಿವಿ ಕುಲಪತಿ ಪ್ರೊ. ಎ.ಎಂ. ಖಾನ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ರಾಜ್ಯದಲ್ಲಿ ನದಾಫ್-ಪಿಂಜಾರ್ ಸಮುದಾಯದವರು ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ಗಾದಿ ತಯಾರಿಕೆ ಇವರ ಮೂಲ ವೃತ್ತಿಯಾಗಿದ್ದು ಇದೀಗ ರೆಡಿಮೆಡ್ ಬೆಡ್‌ಗಳ ಮಾರಾಟ ಹೆಚ್ಚಿದ್ದರಿಂದ ಅವರ ಬದುಕು ಮತ್ತಷ್ಟು ನಿಕೃಷ್ಟ ಸ್ಥಿತಿಯಲ್ಲಿದೆ. ಬಹುತೇಕ ಈ ಕುಟುಂಬಗಳು ಕೊಳಚೆ ಪ್ರದೇಶಗಳಲ್ಲಿವೆ. ಹೀಗಾಗಿ ಅವರ ಶ್ರೇಯೋಭಿವೃದ್ಧಿ ಅಗತ್ಯತೆಯನ್ನು ತಿಳಿಸುವ ಅಂಶಗಳೊಂದಿಗೆ ವರದಿ ಸಿದ್ಧಪಡಿಸಲಾಗಿದೆ ಎಂದರು.ನದಾಫ್ -ಪಿಂಜಾರ್ ಸಮುದಾಯದವರು ರಾಜಕೀಯವಾಗಿ ಅಸ್ತಿತ್ವವನ್ನೇ ಪಡೆದಿಲ್ಲ. ಸಾಮಾಜಿಕವಾಗಿಯೂ ಹಿಂದುಳಿದಿದ್ದಾರೆ. ಅವರ ಜನನ, ಮರಣ ಸಂದರ್ಭದ ಆಚರಣೆ ಪದ್ಧತಿಯನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮೇಲು-ಕೀಳು ಎಂಬ ಭಾವನೆಯಲ್ಲಿ ಝರ್ಜರಿತರಾಗಿದ್ದಾರೆ. ಹೆಣ್ಣುಮಕ್ಕಳಂತೂ ಶೈಕ್ಷಣಿಕವಾಗಿ ತೀರ ಹಿಂದುಳಿದಿದ್ದಾರೆ ಎಂಬ ಅಂಶಗಳು ವರದಿಯಲ್ಲಿ ಇರುವುದನ್ನು ಈ ಸಂದರ್ಭದಲ್ಲಿ ಪ್ರೊ. ಖಾನ್ ತಿಳಿಸಿದರು.
ದುರ್ಗಮರ್ಗ ಸಮುದಾಯದವರ ಕುಲಶಾಸ್ತ್ರೀಯ ಅಧ್ಯಯನದ ಜವಾಬ್ದಾರಿಯನ್ನು ಸಹ ವಿವಿಗೆ ವಹಿಸಲಾಗಿದೆ. ಈ ಸಮುದಾಯ ಅಳವಿನಂಚಿನಲ್ಲಿದೆ. ಇವರು ಕೆಟಗೇರಿ-1ರಲ್ಲಿ ಇದ್ದರೂ ಚಿತ್ರದುರ್ಗ, ಹಾವೇರಿ, ದಾವಣಗೆರೆ ಜಿಲ್ಲೆಗಳಲ್ಲಿ ಎಸ್‌ಸಿ ಕೆಟಗೇರಿಯ ಸಿಂಧೋಳಿ ಜಾತಿಗೆ ಸೇರ್ಪಡೆ ಆಗುತ್ತಿದ್ದಾರೆ. ಕಾಗಿನೆಲೆಯಲ್ಲಿ ಮಹಿಳೆಯೊಬ್ಬರು ಎಸ್‌ಟಿ ಪ್ರಮಾಣ ಪತ್ರ ಪಡೆದು ಗ್ರಾಪಂಗೆ ಸ್ಪರ್ಧಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಹೀಗಾಗಿ ಈ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ನಡೆಸಲಾಗುವುದು. ದಕ್ಷಿಣ ಭಾರತದಲ್ಲಿ ದರ್ವೇಶ ಅಲೆಮಾರಿ-ಅರೇಅಲೆಮಾರಿ ಸಮುದಾಯದವರು ಇದ್ದು ಉತ್ತರ ಭಾರತದಲ್ಲಿ ಅವರನ್ನು ಬುಡಬುಕಕಿ ಎಂಬ ಹೆಸರಿಯಲ್ಲಿ ಕರೆಯಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ನೇಕಾರ ಸಮುದಾಯದ 11 ಉಪಪಂಗಡಗಳ ಬಗ್ಗೆಯೂ ಕುಲಶಾಶ್ತ್ರೀಯ ಅಧ್ಯಯನಕ್ಕೆ ಸರ್ಕಾರ ನಿರ್ದೇಶನ ನೀಡಿದ್ದು, ಮುಂದಿನ 12 ತಿಂಗಳಲ್ಲಿ ಅಧ್ಯಯನ ಪೂರ್ಣಗೊಳಿಸಲಾಗುವುದು ಎಂದು ಕುಲಪತಿ ಡಾ. ಎ.ಎಂ. ಖಾನ್ ತಿಳಿಸಿದರು.