ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಿಸಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಫೆ.27ರಿಂದ ಮಾರ್ಚ್ 9 ರವರೆಗೆ ಜಾತ್ರೆ ನಡೆಯಲಿದ್ದು, ಮಾರ್ಚ್ 6ರಂದು ರಥೋತ್ಸವ ಜರುಗಲಿದೆ. ಜಾತ್ರೆಗೆ ಚಿತ್ರದುರ್ಗ ಜಿಲ್ಲೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರ ವಹಿಸಬೇಕು. ನೀರಿನ ಟ್ಯಾಂಕ್‍ಗಳನ್ನು ಕಡ್ಡಾಯವಾಗಿ ಸ್ವಚ್ಛಗೊಳಿಸಬೇಕು. ನೀರು ಕಲುಷಿತವಾಗಂತೆ ಕ್ರಮವಹಿಸುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಪಂಚಾಯತ್‍ನ ನೀರು ಪರೀಕ್ಷಾ ಘಟಕದಿಂದ ವರದಿ ಪಡೆದುಕೊಳ್ಳಬೇಕು. ನೀರು ಪೂರೈಕೆಯ ಮೂಲ ಮತ್ತು ವಿತರಣಾ ಕೇಂದ್ರ ಎರಡು ಕಡೆಗಳಲ್ಲಿ ನೀರಿನ ಮಾದರಿಯನ್ನು ಪಡೆದು, ಗುಣಮಟ್ಟ ಪರಿಶೀಲಿಸಬೇಕು ಎಂದು ತಾಕೀತು ಮಾಡಿದರು.
ಜಾತ್ರೆಗೆ ಬರುವ ಜಾನುವಾರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಈಗಾಗಲೇ ಇರುವ ನೀರಿನ ತೊಟ್ಟಿಗಳನ್ನು ತಕ್ಷಣವೇ ದುರಸ್ತಿಗೊಳಿಸಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ಕ್ರಮವಹಿಸಬೇಕು ಎಂದು ತಿಳಿಸಿದರು.ಪ್ರಸ್ತುತ ಬಿಸಿಲಿನ ತಾಪ ಹೆಚ್ಚಾಗುತ್ತಿರುವುದರಿಂದ ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಜಾತ್ರೆಗೆ ಬರುವ ಭಕ್ತಾದಿಗಳಿಗೆ ಬಿಸಿಲಿನ ತಾಪ ತಟ್ಟದಂತೆ ಮುನ್ನೆಚ್ಚರಿಕೆ ವಹಿಸಿ, ಸ್ಥಳೀಯವಾಗಿ ಓಆರ್‍ಎಸ್ ಪ್ಯಾಕೆಟ್‍ಗಳು ಮತ್ತು ಅಗತ್ಯ ಔಷಧಗಳನ್ನು ಸನ್ನದ್ಧವಾಗಿಟ್ಟುಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಯಾವುದೇ ತುರ್ತು ಪರಿಸ್ಥಿತಿ ಎದುರಿಸಲು ಜಾತ್ರಾ ಸಮಯದಲ್ಲಿ ನಾಲ್ಕು ಪ್ರಥಮ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಇದರೊಂದಿಗೆ ನಾಲ್ಕು ಆ್ಯಂಬುಲೆನ್ಸ್‌ಗಳನ್ನು ದಿನದ 24 ಗಂಟೆಯೂ ಕಾರ್ಯಾಚರಣೆಯಲ್ಲಿರುವಂತೆ ನಿಯೋಜಿಸಲಾಗಿದೆ ಎಂದು ಚಳ್ಳಕೆರೆ ತಾಲೂಕು ಆರೋಗ್ಯಾಧಿಕಾರಿ ಡಾ.ಕಾಶೀ ಮಾಹಿತಿ ನೀಡಿದರು.ಜಾತ್ರಾ ಮಹೋತ್ಸದಲ್ಲಿ ಎಲ್ಲ ಪಾರ್ಕಿಂಗ್ ಸ್ಥಳಗಳಲ್ಲಿಯೂ ಲೈಟಿಂಗ್ ವ್ಯವಸ್ಥೆ ಕಣ್ಗಾವಲು ಹೆಚ್ಚಿಸಲು ಈಗಾಗಲೇ ಇರುವ 24 ಸಿಸಿ ಟಿವಿಗಳ ಜತೆಗೆ ಹೆಚ್ಚುವರಿಯಾಗಿ 50 ಹೊಸ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕಿದೆ. ಎನ್.ಡಿ.ಆರ್.ಎಫ್ ತಂಡ ನಿಯೋಜನೆ, ಜನಸಂದಣಿ ನಿಯಂತ್ರಿಸಲು ಮತ್ತು ಅಗತ್ಯ ಮಾಹಿತಿ ನೀಡಲು ಜಾತ್ರೆಯ ವಿವಿಧೆಡೆ ಧ್ವನಿವರ್ಧಕಗಳ ಅಳವಡಿಸಬೇಕು ಎಂದು ಪೊಲೀಸ್ ಅಧಿಕಾರಿಗಳು ಸಲಹೆ ನೀಡಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪ ವಿಭಾಗಾಧಿಕಾರಿ ಕಾಂತರಾಜ್, ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ ಕಾರ್ಯನಿರ್ವಾಹಣಾಧಿಕಾರಿ ಗಂಗಾಧರ್, ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವೆಂಕಟೇಶ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ.ಕಾಳೇಸಿಂಗೆ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್ ಇದ್ದರು.