---ಕನ್ನಡಪ್ರಭ ವಾರ್ತೆ ಮೈಸೂರುನಾವೆಲ್ಲರೂ ಕೆಂಪೇಗೌಡರ ತತ್ತ್ವ, ಆದರ್ಶಗಳನ್ನು ಮೈಗೂಡಿಸಿಕೊಂಡು ಬಡವರ ಪರವಾಗಿ ಕೆಲಸ ಮಾಡಬೇಕು. ಕೆಂಪೇಗೌಡರ ಆಡಳಿತ ಜನಪರವಾಗಿದ್ದು, ಅವರನ್ನು ನೆನೆದು ಸ್ಫೂರ್ತಿಪಡೆಯಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ ಹೇಳಿದರು.ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವ್ಯವಸ್ಥಾಪನ ಮಂಡಳಿ ಸಭಾಂಗಣದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡ ಅಧ್ಯಯನ ಮತ್ತು ವಿಸ್ತರಣಾ ಕೇಂದ್ರ ಮತ್ತು ಡೀನ್ (ಶೈಕ್ಷಣಿಕ) ವಿಭಾಗದ ವತಿಯಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.ಅಭಿವೃದ್ಧಿ, ಶಾಂತಿ, ಸೌಹಾರ್ಧತೆ, ನಗರಾಭಿವೃದ್ಧಿ, ನೀರಾವರಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ನಾಡಪ್ರಭುಗಳು ಹಾಕಿಕೊಟ್ಟ ಹಾದಿಯಲ್ಲಿ ಸಾಗೋಣ. ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಬದ್ಧತೆಯಿಂದ ಶ್ರಮಿಸೋಣ. ನಾಡಪ್ರಭುಗಳು ಬೆಂಗಳೂರಿನ ನಿರ್ವಾತೃ, ಅಪ್ರತಿಮ ಆಡಳಿತಗಾರರಷ್ಟೇ ಆಗಿರಲಿಲ್ಲ, ಅವರೊಬ್ಬರು ಅನನ್ಯ ದಾರ್ಶನಿಕರು, ಶಾಂತಿ ಪ್ರಿಯರು, ಸಾರ್ವಜನಿಕರ ಶ್ರೇಯಸ್ಸಿಗಾಗಿ ದುಡಿದ ಮಹಾನ್ ಮಾನವತಾವಾದಿ ಎಂದರು.ಕೆಂಪೇಗೌಡರು ಸರ್ವರಿಗೂ ಸಮಬಾಳು, ಸಮಪಾಲು ಎನ್ನುವ ಆದರ್ಶ ಹೊಂದಿದ್ದರು. ಅವರು ಯಾರದ್ದೇ ಜಾತಿ ನೋಡಲಿಲ್ಲ. ರಾಜಕಾರಣಿ, ಅಧಿಕಾರಿಗಳು ಕೆಂಪೇಗೌಡರ ಆದರ್ಶವನ್ನು ಅನುಸರಿಸಬೇಕು. ಈ ಬಗ್ಗೆ ನಾವೆಲ್ಲರೂ ಹೆಮ್ಮೆ ಪಡಬೇಕಿದೆ. ರಾಜ್ಯ ಹಾಗೂ ದೇಶಕ್ಕೆ ಕೆಂಪೇಗೌಡರ ಕೊಡುಗೆ ಅಪಾರವಾಗಿದೆ. ಆಗಿನ ಕಾಲದಲ್ಲೇ ಎಲ್ಲಾ ವರ್ಗದ ಜನರಿಗೆ, ಅವರವರ ಕಸುಬುಗಳಿಗೆ ತಕ್ಕಂತೆ ಪೇಟೆ ನಿರ್ಮಿಸಿಕೊಟ್ಟಿದ್ದಾರೆ ಎಂದು ಹೇಳಿದರು.ಕೆಂಪೇಗೌಡರು ಯುದ್ಧಪ್ರಿಯ ರಾಜನಾಗದೆ, ಧರ್ಮ ಪ್ರಭುವಾಗಿದ್ದರು. ತಮ್ಮ ಸಾಮಾಜಿಕ ಸೇವೆಯಿಂದಲೇ ನಾಡಿನಾದ್ಯಂಥ ಮನೆ ಮಾತಾದವರು. ಶ್ರೇಷ್ಠ ಸಾಧಕರು. ಉತ್ತಮ ರಾಜತಾಂತ್ರಿಕರು. ನಿಪುಣ ಮುತ್ಸದ್ಧಿಯಾಗಿದ್ದರು. ಅವರ ಕೊಡುಗೆ ರಾಜ್ಯಕ್ಕೆ ಅಪಾರವಾಗಿದೆ. ಬೆಂಗಳೂರು ಇಂದು ಅಪಾರ ಸಂಪತ್ತನ್ನು ಹೊಂದಿಕೊಂಡು, ರಾಜಧಾನಿಯಾಗಿ ಕೋಟಿ ಜನರಿಗೆ ನೆರಳು ಕೊಡಲು ಕೆಂಪೇಗೌಡರ ಶ್ರಮ ಕಾರಣ ಎಂದು ಅವರು ತಿಳಿಸಿದರು.ಮುಕ್ತ ವಿವಿ ಕುಲಸಚಿವ ಪ್ರೊ.ನವೀನಕುಮಾರ್, ವರೀಕ್ಷಾಂಗ ಕುಲಸಚಿವ ಪ್ರೊ.ಸಿ.ಎಸ್. ಆನಂದಕುಮಾರ್, ಹಣಕಾಸು ಅಧಿಕಾರಿ ಎಸ್. ನಿರಂಜನ್ ರಾಜ್, ಡೀನ್ ಡಾ.ಎನ್. ಆನಂದಗೌಡ, ನಾಡಪ್ರಭು ಕೆಂಪೇಗೌಡ ಅಧ್ಯಯನ ಮತ್ತು ವಿಸ್ತರಣಾ ಕೇಂದ್ರ ನಿರ್ದೇಶಕ ಡಾ.ಸಿ. ರಾಮೇಗೌಡ, ಡೀನ್ ಪ್ರೊ.ಎಂ. ರಾಮನಾಥಂ ನಾಯ್ಡು, ಇದ್ದರು.