ನಾಡಿದ್ದು ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಗೆ ಪರೀಕ್ಷೆ

KannadaprabhaNewsNetwork |  
Published : Jul 31, 2026, 03:00 AM IST
ಷಷಷ | Kannada Prabha

ಸಾರಾಂಶ

ಕರ್ನಾಟಕದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಬೇಕೆಂಬ ಕನಸು ಹೊತ್ತಿರುವ ಅಭ್ಯರ್ಥಿಗಳಿಗೆ ಇದು ಅತ್ಯಂತ ಪ್ರಮುಖ ಹಾಗೂ ಎಚ್ಚರಿಕೆಯ ಸುದ್ದಿಯಾಗಿದೆ. ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಲಿಖಿತ ಪರೀಕ್ಷೆಯು ಆ.2 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಬೆಳಗಾವಿ ನಗರ ಮತ್ತು ಚಿಕ್ಕೋಡಿಯ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕರ್ನಾಟಕದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಬೇಕೆಂಬ ಕನಸು ಹೊತ್ತಿರುವ ಅಭ್ಯರ್ಥಿಗಳಿಗೆ ಇದು ಅತ್ಯಂತ ಪ್ರಮುಖ ಹಾಗೂ ಎಚ್ಚರಿಕೆಯ ಸುದ್ದಿಯಾಗಿದೆ. ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಲಿಖಿತ ಪರೀಕ್ಷೆಯು ಆ.2 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಬೆಳಗಾವಿ ನಗರ ಮತ್ತು ಚಿಕ್ಕೋಡಿಯ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ.

ಬೆಳಗಾವಿ ನಗರದಲ್ಲಿ 46 ಹಾಗೂ ಚಿಕ್ಕೋಡಿಯಲ್ಲಿ 15 ಸೇರಿದಂತೆ ಒಟ್ಟು 61 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ಒಟ್ಟು 25164 ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆಯನ್ನು ಸುಸೂತ್ರ, ಪಾರದರ್ಶಕ ಮತ್ತು ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆಯನ್ನೂ ಜಾರಿಗೊಳಿಸಲಾಗಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪ್ರಾಧಿಕಾರ ನಿಗದಿಪಡಿಸಿರುವ ವಸ್ತ್ರಸಂಹಿತೆ ಮತ್ತು ನಿಷೇಧಿತ ವಸ್ತುಗಳ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಿಯಮಗಳಿಗೆ ವಿರುದ್ಧವಾದ ಉಡುಪು ಧರಿಸಿದರೆ ಅಥವಾ ನಿಷೇಧಿತ ವಸ್ತುಗಳನ್ನು ಹೊಂದಿದ್ದರೆ ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶ ನಿರಾಕರಿಸುವ ಸಾಧ್ಯತೆ ಇದೆ.ಅಭ್ಯರ್ಥಿಗಳು ಪರೀಕ್ಷಾ ಪ್ರವೇಶಪತ್ರದಲ್ಲಿರುವ ಸೂಚನೆಗಳನ್ನು ಸಂಪೂರ್ಣವಾಗಿ ಓದಿಕೊಂಡು, ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಬೇಕು. ವಸ್ತ್ರಸಂಹಿತೆ ಪಾಲಿಸದಿರುವುದು, ನಿಷೇಧಿತ ವಸ್ತುಗಳನ್ನು ತರುವುದು ಅಥವಾ ಭದ್ರತಾ ತಪಾಸಣೆಗೆ ಸಹಕರಿಸದಿರುವುದು ಪರೀಕ್ಷೆಯಿಂದ ವಂಚಿತರಾಗಲು ಕಾರಣವಾಗಬಹುದು. ಕೊನೆಯ ಕ್ಷಣದಲ್ಲಿ ಗೊಂದಲಕ್ಕೆ ಒಳಗಾಗದೆ, ಮುಂಚಿತವಾಗಿಯೇ ಸೂಕ್ತ ಉಡುಪು, ಪ್ರವೇಶಪತ್ರ ಹಾಗೂ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.ಪುರುಷ ಅಭ್ಯರ್ಥಿಗಳಿಗೆ ನಿಯಮಗಳು:

ಪುರುಷ ಅಭ್ಯರ್ಥಿಗಳು ಪೂರ್ಣ ತೋಳಿನ ಶರ್ಟ್ ಧರಿಸುವಂತಿಲ್ಲ. ಅರ್ಧ ತೋಳಿನ ಸರಳ ಶರ್ಟ್ ಅಥವಾ ಟಿ-ಶರ್ಟ್ ಧರಿಸಬೇಕು. ಸಾಧ್ಯವಾದಷ್ಟು ಕಾಲರ್ ಇಲ್ಲದ ಸರಳ ಉಡುಪಿಗೆ ಆದ್ಯತೆ ನೀಡಲಾಗಿದೆ.

ಜೀನ್ಸ್ ಪ್ಯಾಂಟ್ ಹಾಗೂ ಕುರ್ತಾ-ಪೈಜಾಮ ಧರಿಸುವುದನ್ನು ನಿಷೇಧಿಸಲಾಗಿದೆ. ಹೆಚ್ಚು ಜೇಬುಗಳಿಲ್ಲದ ಸರಳ ಪ್ಯಾಂಟ್ ಧರಿಸಬೇಕು. ಬಟ್ಟೆಗಳಲ್ಲಿ ಜಿಪ್ ಜೇಬು, ದೊಡ್ಡ ಬಟನ್, ಕಸೂತಿ ಅಥವಾ ಅಲಂಕಾರಿಕ ವಿನ್ಯಾಸ ಇರಬಾರದು.

ಶೂ ಧರಿಸುವಂತಿಲ್ಲ. ತೆಳುವಾದ ಅಡಿಭಾಗ ಹೊಂದಿರುವ ಸ್ಯಾಂಡಲ್ ಅಥವಾ ಚಪ್ಪಲಿ ಮಾತ್ರ ಧರಿಸಬೇಕು. ಕುತ್ತಿಗೆಯ ಲೋಹದ ಸರ, ಕಿವಿಯೋಲೆ, ಉಂಗುರ, ಕಡಗ ಸೇರಿದಂತೆ ಯಾವುದೇ ಲೋಹದ ಆಭರಣಗಳನ್ನು ಧರಿಸಬಾರದು.ಮಹಿಳಾ ಅಭ್ಯರ್ಥಿಗಳಿಗೆ ನಿಯಮಗಳು:

ಮಹಿಳಾ ಅಭ್ಯರ್ಥಿಗಳು ಪೂರ್ಣ ತೋಳಿನ ಉಡುಪು ಹಾಗೂ ಜೀನ್ಸ್ ಪ್ಯಾಂಟ್ ಧರಿಸುವಂತಿಲ್ಲ. ಅರ್ಧ ತೋಳಿನ ಸರಳ ಮತ್ತು ಮುಜುಗರ ಉಂಟಾಗದಂತಹ ಉಡುಪನ್ನು ಧರಿಸಬೇಕು. ಹೂಗಳು, ದೊಡ್ಡ ಬಟನ್‌ಗಳು, ಅಲಂಕಾರಿಕ ಕಸೂತಿ ಇರುವ ಬಟ್ಟೆಗಳಿಗೆ ಅವಕಾಶವಿಲ್ಲ. ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ ಇತರ ಲೋಹದ ಆಭರಣಗಳನ್ನು ಧರಿಸಬಾರದು. ಎತ್ತರವಾದ ಹಿಮ್ಮಡಿ ಅಥವಾ ದಪ್ಪ ಅಡಿಭಾಗ ಹೊಂದಿರುವ ಶೂ ಹಾಗೂ ಚಪ್ಪಲಿಗಳನ್ನು ಧರಿಸುವಂತಿಲ್ಲ. ತೆಳುವಾದ ಅಡಿಭಾಗದ ಸರಳ ಚಪ್ಪಲಿಯನ್ನು ಧರಿಸಬೇಕು.ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ:

ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಲಿಖಿತ ಪರೀಕ್ಷೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಆದೇಶ ಹೊರಡಿಸಿದ್ದಾರೆ.

ಪರೀಕ್ಷೆ ನಡೆಯುವ ಆಗಸ್ಟ್ 2 ರಂದು ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ಪರೀಕ್ಷೆಯಲ್ಲಿ ಯಾವುದೇ ಅಕ್ರಮ, ಅಹಿತಕರ ಘಟನೆ ಅಥವಾ ಗೊಂದಲಕ್ಕೆ ಅವಕಾಶವಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ. ನಿಷೇಧಾಜ್ಞೆ ಜಾರಿಯಲ್ಲಿರುವ ವೇಳೆ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪುಗೂಡುವುದು, ಘೋಷಣೆ ಕೂಗುವುದು, ಮೆರವಣಿಗೆ ನಡೆಸುವುದು, ಶಸ್ತ್ರಾಸ್ತ್ರ ಅಥವಾ ಅಪಾಯಕಾರಿ ವಸ್ತುಗಳನ್ನು ಒಯ್ಯುವುದು ಹಾಗೂ ಧ್ವನಿವರ್ಧಕಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು, ಕರ್ತವ್ಯ ನಿರ್ವಹಿಸುವ ಸಿಬ್ಬಂದಿ, ಪೊಲೀಸ್ ಮತ್ತು ಸರ್ಕಾರಿ ಅಧಿಕಾರಿಗಳು ಹಾಗೂ ಅಗತ್ಯ ಸೇವೆಗಳಿಗೆ ನಿಷೇಧಾಜ್ಞೆಯಿಂದ ವಿನಾಯಿತಿ ನೀಡಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಿಕೋದ್ಯಮದಲ್ಲಿ ಉದ್ಯೋಗ ಕಸಿದುಕೊಳ್ಳುತ್ತಿರುವ ಎಐ
ಮಹಾವೀರ ಸಹಕಾರಿ ಬ್ಯಾಂಕ್‌ಗೆ ₹4.01 ಕೋಟಿ ಲಾಭ