ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲೆಯ 50 ಹಾಸಿಗೆಯ ಆಸ್ಪತ್ರೆ ಹಾಗೂ ನವನಗರದ ಮಹಿಳಾ ಪೊಲೀಸ್ ಠಾಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನಾಗಲಕ್ಷ್ಮೀ ಚೌಧರಿ ಅವರು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸುತ್ತಿದ್ದ ವೇಳೆ, ಕೆಲ ಮಹಿಳೆಯರು ಅವರ ಬಳಿ ಬಂದು ತಮ್ಮ ಸಂಕಷ್ಟಗಳನ್ನು ಹೇಳಿಕೊಂಡರು. ಈ ವೇಳೆ ಒಬ್ಬ ಮಹಿಳೆ ತನಗಾದ ಅನ್ಯಾಯಕ್ಕೆ ನ್ಯಾಯ ಒದಗಿಸುವಂತೆ ಮನವಿ ಮಾಡಿದರು.
ತಮ್ಮ ಅಹವಾಲುಗಳನ್ನು ಮಂಡಿಸಿದ ಮಹಿಳೆಯರು, ಗಂಡನಿಂದ ಆಗುತ್ತಿರುವ ಕಿರುಕುಳ, ಉದ್ಯೋಗವಿಲ್ಲದೆ ಎದುರಿಸುತ್ತಿರುವ ಸಂಕಷ್ಟ ಸೇರಿ ವಿವಿಧ ಸಮಸ್ಯೆಗಳ ಬಗ್ಗೆ ವಿವರಿಸಿದರು. ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ತಮ್ಮ ಮನವಿಗಳಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಮಹಿಳೆಯರ ಅಹವಾಲುಗಳನ್ನು ತಾಳ್ಮೆಯಿಂದ ಆಲಿಸಿದ ಅಧ್ಯಕ್ಷರು ಪ್ರತಿಯೊಂದು ಪ್ರಕರಣವನ್ನೂ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಕಾನೂನು ವ್ಯಾಪ್ತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.ಜಿಲ್ಲಾ ಪ್ರವಾಸದ ಅಂಗವಾಗಿ ಅಧ್ಯಕ್ಷೆಯವರು 50 ಹಾಸಿಗೆಗಳ ಆಸ್ಪತ್ರೆ ಹಾಗೂ ಮಹಿಳಾ ಪೊಲೀಸ್ ಠಾಣೆಗೆ ಭೇಟಿ ನೀಡಿ, ಅಲ್ಲಿನ ಸೌಲಭ್ಯಗಳು, ಮಹಿಳೆಯರಿಗೆ ನೀಡಲಾಗುತ್ತಿರುವ ಸೇವೆಗಳು ಹಾಗೂ ದೂರುಗಳ ನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು. ಮಹಿಳೆಯರಿಗೆ ತ್ವರಿತ ಹಾಗೂ ಪರಿಣಾಮಕಾರಿ ಸೇವೆ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಭೇಟಿ ವೇಳೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ.ಕೆ ಸೇರಿ ಇತರರಿದ್ದರು.