ಸಮಾಜಕ್ಕೆ ಸರಿದಾರಿ ತೋರುವುದು ಗುರು ಕಾರ್ಯ : ರಾಘವೇಶ್ವರ ಶ್ರೀ

KannadaprabhaNewsNetwork |  
Published : Jul 31, 2026, 03:00 AM IST
ಶ್ರೀ | Kannada Prabha

ಸಾರಾಂಶ

ಸರಿಯನ್ನು ಬಲ್ಲವನು ಕೇವಲ ಜ್ಞಾನಿ. ಸರಿಯನ್ನು ಬಲ್ಲವನು ಹಾಗೂ ಸರಿಯಾದ ದಾರಿಯನ್ನು ಇತರರಿಗೆ ತೋರುವವನು ಗುರು. ಸಮಾಜಕ್ಕೆ ಸರಿಯಾದ ದಾರಿಯನ್ನು ತೋರಬೇಕಾದ ಕಾರ್ಯ ಗುರುವಿನದ್ದು ಎಂದು ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ.

ಅಶೋಕೆ: ಸರಿಯನ್ನು ಬಲ್ಲವನು ಕೇವಲ ಜ್ಞಾನಿ. ಸರಿಯನ್ನು ಬಲ್ಲವನು ಹಾಗೂ ಸರಿಯಾದ ದಾರಿಯನ್ನು ಇತರರಿಗೆ ತೋರುವವನು ಗುರು. ಸಮಾಜಕ್ಕೆ ಸರಿಯಾದ ದಾರಿಯನ್ನು ತೋರಬೇಕಾದ ಕಾರ್ಯ ಗುರುವಿನದ್ದು ಎಂದು ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ.ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ಬುಧವಾರ ಅನ್ನಬ್ರಹ್ಮ ಚಾತುರ್ಮಾಸ್ಯ ಆರಂಭದ ಧರ್ಮಸಭೆಯಲ್ಲಿ ಆಶೀರ್ವಚನ ಅನುಗ್ರಹಿಸಿದರು.

ಶಂಕರರು ತೋರಿದ ದಾರಿಯಲ್ಲಿ ಧರ್ಮ ಪ್ರಸಾರವನ್ನು ಮಾಡುತ್ತಾ, ಸಮಾಜಕ್ಕೆ ಸರಿ - ತಪ್ಪುಗಳನ್ನು ಮಾರ್ಗದರ್ಶನ ಮಾಡುವುದು ಮಠದ ಕಾರ್ಯವಾಗಬೇಕು. ನಮ್ಮ ಮಠದ ಉದ್ದೇಶ ಹಾಗೂ ಈ ಅನ್ನಬ್ರಹ್ಮ ಚಾತುರ್ಮಾಸ್ಯದ ಉದ್ದೇಶವೂ ಇದೇ ಆಗಿದೆ. ಜೀವನಕ್ಕೆ ಸರಿಯಾದ ದಾರಿಯನ್ನು ತೋರುವುದು ಹಾಗೂ ಸಮಾಜದಲ್ಲಿನ ತಪ್ಪುಗಳನ್ನು ತಿದ್ದುವುದು ಮಠದ ಕಾರ್ಯ ಎಂದು ಅನ್ನಬ್ರಹ್ಮ ಚಾತುರ್ಮಾಸ್ಯದ ಉದ್ದೇಶವನ್ನು ತಿಳಿಸಿದರು.ಕಳೆದ ವರ್ಷ ಮಾತು ಅಥವಾ ಭಾಷೆಗೆ ಸಂಬಂಧಿಸಿದ ಸ್ವಭಾಷಾ ಚಾತುರ್ಮಾಸ್ಯ ಮಾಡಲಾಗಿತ್ತು ಹಾಗೂ ಈ ವರ್ಷ ತಿನ್ನುವ ಆಹಾರಕ್ಕೆ ಸಂಬಂಧಿಸಿದ ಅನ್ನಬ್ರಹ್ಮ ಚಾತುರ್ಮಾಸ್ಯ ಆಚರಿಸಲಾಗುತ್ತಿದೆ. ಹೀಗೆ ಈ ವರ್ಷ ಹಾಗೂ ಕಳೆದ ವರ್ಷದ ಚಾತುರ್ಮಾಸ್ಯಗಳೆರಡೂ ನಾಲಿಗೆಗೆ ಸಂಬಂಧಿಸಿದ್ದಾಗಿದೆ. ನಾಲಿಗೆಗೆ ಸಂಬಂಧಿಸಿದ ತಪ್ಪುಗಳನ್ನು ತಿದ್ದುವ ಕಾರ್ಯ ಇದಾಗಿದೆ ಎಂದರು.ಇಂದು ಗೌಣವಾದ ವಿಚಾರಗಳು ಮುಖ್ಯವಾಗುತ್ತಿದೆ. ಮುಖ್ಯ ವಿಚಾರಗಳು ಗೌಣವಾಗುತ್ತಿದೆ. ಇದು ಈ ಕಾಲದ ದುರಂತ ಎಂದ ಶ್ರೀಗಳು, ಇಂದು ನಾವು ಏನನ್ನು ತಿನ್ನುತ್ತಿದ್ದೇವೆ? ಹೇಗೆ ತಿನ್ನುತ್ತಿದ್ದೇವೇ? ಆಹಾರವನ್ನು ಹೇಗೆ ತಯಾರಿಸಲಾಗಿದೆ? ಎಂಬ ಕುರಿತು ಆಲೋಚಿಸದೇ ಕೇವಲ ತುತ್ತಿನ ಚೀಲವನ್ನು ತುಂಬಿಸುವ ಕಾರ್ಯ ಮಾಡುತ್ತಿದ್ದೇವೆ. ಇಂದು ಆಹಾರದ ಕುರಿತಾಗಿ ಸಮರ್ಪಕವಾದ ಮಾಹಿತಿಯನ್ನು ಶಾಲೆಯಲ್ಲಗಲಿ, ವಿಶ್ವವಿದ್ಯಾಲಯಗಳಾಗಲಿ ತಿಳಿಸಿಕೊಡುತ್ತಿಲ್ಲ. ನಾವು ಏನನ್ನು ತಿನ್ನುತ್ತೇವೋ ಅದೇ ನಾವಾಗುತ್ತೇವೆ. ಹಾಗಾಗಿ ನಾವೇ ಆಹಾರದ ಕುರಿತಾದ ಸರಿ ತಪ್ಪುಗಳನ್ನು ಸಮಾಜಕ್ಕೆ ತಿಳಿಸಲು ಮುಂದಾಗಿದ್ದೇವೆ ಎಂದರು.

ಬೆಳಗ್ಗೆ ಶ್ರೀಗಳು 33ನೇ ಚಾತುರ್ಮಾಸ್ಯವ್ರತವನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ವ್ಯಾಸಪೂಜೆ ಕೈಗೊಳ್ಳುವ ಮೂಲಕ ವಿಧ್ಯುಕ್ತವಾಗಿ ಆರಂಭಿಸಿದರು. ಶ್ರೀರಾಮಾದಿ ದೇವರ ಪೂಜೆಯನ್ನು ಮಾಡಿ, ನಿಂಬೆಹಣ್ಣಿನಲ್ಲಿ ಕೃಷ್ಣಾದಿ ದೇವತೆಗಳು ಹಾಗೂ ವ್ಯಾಸಾದಿ ಋಷಿಗಳನ್ನು ಆವಾಹನೆಮಾಡಿ, ಮಠೀಯ ಪದ್ಧತಿಯಂತೆ ಪೂಜಿಸುವುದರ ಮೂಲಕ ವ್ಯಾಸಪೂಜೆ ಸಂಪನ್ನವಾಯಿತು. ಮುಗಳಿ ತಿರುಮಲೇಶ್ವರ ಭಟ್ ಸರ್ವಸೇವೆ ಸಮರ್ಪಿಸಿದರೆ, ಮಂಜುನಾಥ ಸುವರ್ಣಗದ್ದೆ ದಂಪತಿ ಸಭಾಪೂಜೆ ಸಲ್ಲಿಸಿದರು. ಮಾತೃ ವಿಭಾಗದ ದೇವಿಕಾ ಶಾಸ್ತ್ರಿ ಪ್ರಸ್ತಾವನೆ ಮಾಡಿದರೆ, ಜಿ.ಎಸ್ ಹೆಗಡೆ ದಂಪತಿಗಳು ದಿನ ಪ್ರಧಾನರಾಗಿ ಮೇಲುಸ್ತುವಾರಿ ಮಾಡಿದರು.

ಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್, ಶಾಸನತಂತ್ರದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಕಾರ್ಯದರ್ಶಿ ಕೆ.ಪಿ. ಎಡಪ್ಪಾಡಿ, ಹವ್ಯಕ ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪು, ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಚಾತುರ್ಮಾಸ್ಯದ ಪ್ರಧಾನ ಸಂಯೋಜಕ ಚಂದನ್ ಶಾಸ್ತ್ರಿ, ಶಾಸನತಂತ್ರ ಹಾಗೂ ಎಲ್ಲಾ ಮಂಡಲಗಳ ಪದಾಧಿಕಾರಿಗಳು, ಚಾತುರ್ಮಾಸ್ಯದ ನಿರ್ವಾಹಕರು ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯಗಳ ವಿವಿಧ ಭಾಗಗಳ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ವ್ಯಾಸಮಂತ್ರಾಕ್ಷತೆ ಸ್ವೀಕರಿಸಿದರು.

ಗುರು ಶಿಷ್ಯರ ಅನ್ನೋನ್ಯ ಸಂಬಧದ ಪ್ರತೀಕವಾದ ಚಾತುರ್ಮಾಸ್ಯ ವ್ರತಸಂಕಲ್ಪ :ವ್ಯಾಸಪೂಜೆಯ ನಂತರ, ಮಠೀಯ ಪದ್ಧತಿಯಂತೆ ಗರುಡಾಸನದಲ್ಲಿ ಕುಳಿತ ಶ್ರೀಗಳು ‘ವರ್ಷಾಕಾಲದ ನಾಲ್ಕು ಪಕ್ಷಗಳ ಕಾಲದ ಚಾತುರ್ಮಾಸ್ಯವ್ರತವನ್ನು ಕೈಗೊಳ್ಳುತ್ತಿದ್ದು, ಸಕಲ ಜೀವಿಗಳಿಗೂ ಯಾವುದೇ ತೊಂದರೆ ಇಲ್ಲದಿದ್ದರೆ, ನಾವು ಇಲ್ಲಿಯೇ ವ್ರತದೀಕ್ಷೆಯನ್ನು ಕೈಗೊಳ್ಳುತ್ತೇವೆ’ ಎಂದು ಹೇಳಿದರು. ಇದಕ್ಕೆ ಪ್ರತಿಸ್ಪಂದನೆಯಾಗಿ ಸಮಸ್ತ ಶಿಷ್ಯಸ್ತೋಮದ ಒಳಿತನ್ನು ಬಯಸಿ, ಪೂಜ್ಯ ಶ್ರೀಗಳು ಚಾತುರ್ಮಾಸ್ಯವ್ರತವನ್ನು ಕೈಗೊಳ್ಳುತ್ತಿರುವುದು ನಮ್ಮೆಲ್ಲರ ಸೌಭಾಗ್ಯವೇ ಆಗಿದೆ. ನಿತ್ಯಾನುಷ್ಠಾನಗಳಿಗೆ ಯಥಾವಿಹಿತವಾದ ಸೌಕರ್ಯವನ್ನು ನಮ್ಮಿಂದ ಪೂಜ್ಯರು ಪಡೆದುಕೊಂಡು, ನಮ್ಮೆಲ್ಲರನ್ನೂ ಹರಸಬೇಕು’ ಎಂದು ಶಿಷ್ಯವೃಂದ ಶ್ರೀಗಳಲ್ಲಿ ಭಿನ್ನವಿಸಿಕೊಂಡ ಮನೋಜ್ಞ ಸನ್ನಿವೇಶ ಗುರು ಶಿಷ್ಯರ ಅನ್ನೋ ಸಂಬಂಧದ ದ್ಯೋತಕವಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಿಕೋದ್ಯಮದಲ್ಲಿ ಉದ್ಯೋಗ ಕಸಿದುಕೊಳ್ಳುತ್ತಿರುವ ಎಐ
ಮಹಾವೀರ ಸಹಕಾರಿ ಬ್ಯಾಂಕ್‌ಗೆ ₹4.01 ಕೋಟಿ ಲಾಭ